ರೋಣ: ಸ್ಥಳೀಯ ಪುರಸಭೆ ವ್ಯಾಪ್ತಿಯ ಪ್ರತಿಯೊಂದು ವಾರ್ಡ್‌ಗಳ ಬಡಾವಣೆಗಳಿಗೆ ರಸ್ತೆ, ಚರಂಡಿ, ಬೀದಿ ದೀಪ, ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಬಿಡುಗಡೆಯಾದ ಅನುದಾನವನ್ನು ಸದ್ಬಳಕೆ ಮಾಡುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈ ದಿಶೆಯಲ್ಲಿ ಪಟ್ಟಣದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಪುರಸಭೆ ಉಪಾಧ್ಯಕ್ಷ ಮಿಥುನ ಜಿ. ಪಾಟೀಲ ಹೇಳಿದರು.
ಅವರು ಶನಿವಾರ ಪಟ್ಟಣದ ಶಿವಾನಂದ ನಗರ 3ನೇ ಕ್ರಾಸ್‌ನಲ್ಲಿ ಸ್ವಚ್ಛ ಭಾರತ ಮಿಶನ್, ಎಸ್.ಎಫ್.ಸಿ, 15ನೇ ಹಣಕಾಸು ಯೋಜನೆಯಡಿಯಲ್ಲಿ ₹ 138 ಲಕ್ಷ ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ರೋಣ ಪಟ್ಟಣವು ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿದ್ದು, ಶಾಸಕರಾದ ಜಿ.ಎಸ್. ಪಾಟೀಲ ಅವರು ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ವಿಶೇಷ ಅನುದಾನವನ್ನು ತಂದು ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಈಗಾಗಲೇ ನಗರೋತ್ಥಾನ ಯೋಜನೆಯಡಿ ಕೋಟ್ಯಂತರ ರು.ಗಳ ವೆಚ್ಚದಲ್ಲಿ ರಾಜ ಕಾಲುವೆ, ಸಣ್ಣ ಚರಂಡಿ, ವಿವಿಧೆಡೆ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಶಿವಾನಂದ ನಗರದ 3ನೇ ಎ ಕ್ರಾಸ್ ರಸ್ತೆಯನ್ನು ಡಾಂಬರೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗುವುದು. ಗುತ್ತಿಗೆದಾರರು ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಲ್ಲಿ ಮುಂದಾಗಬೇಕು. ಸಾರ್ವಜನಿಕರ ಹಾಗೂ ಪುರಸಭೆಯ ಅಧಿಕಾರಿಗಳ ಸಹಕಾರ ಪಟ್ಟಣದ ಅಭಿವೃದ್ಧಿಗೆ ಅಗತ್ಯವಾಗಿದೆ ಎಂದರು.ಈ ವೇಳೆ ಪುರಸಭೆ ಅಧ್ಯಕ್ಷೆ ರಂಗವ್ವ ಭಜಂತ್ರಿ, ಸದಸ್ಯರಾದ ಸಂತೋಷ ಕಡಿವಾಲ, ಹನುಮಂತ ಹಳ್ಳಿಕೇರಿ, ಮುತ್ತಣ್ಣ ಕೊಪ್ಪದ, ವಿದ್ಯಾ ದೊಡ್ಡಮನಿ, ದುರಗಪ್ಪ ಮಾದರ, ನಾಜಬೇಗಂ ಯಲಿಗಾರ, ಮುಖಂಡ ಶಿವಣ್ಣ ನವಲಗುಂದ, ಎಸ್.ಜಿ. ಜಾವೂರಮಠ, ಡಾ. ಎಂ.ಬಿ. ಇಟಗಿ, ಮಹೇಶ ಹಿರೇಮಠ, ಅಶೋಕ ಕನ್ನೂರ, ನಿರ್ಮಲಾ ಪೂಜಾರ, ಯಲ್ಲಪ್ಪ ಕಿರೇಸೂರ, ಅಸ್ಲಾಂ ಕೊಪ್ಪಳ, ಮುತ್ತು ಜಾವೂರಮಠ, ಮುತ್ತು ನವಲಗುಂದ, ಟಿಪ್ಪು ಕೋಲ್ಕಾರ ಪುರಸಭೆ ಮುಖ್ಯಾಧಿಕಾರಿ ರಮೇಶ ಗೊಂದಕರ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.