ಎಚ್.ಕೆ.ಬಿ. ಸ್ವಾಮಿ
ಕನ್ನಡಪ್ರಭ ವಾರ್ತೆ ಸೊರಬತಾಲೂಕಿನ ಗುಡವಿ ಪಕ್ಷಿಧಾಮದ ಹಕ್ಕಿಗಳ ನಿಗೂಢ ಸಾವಿನ ಹಿಂದೆ ತಾಲೂಕಿನಲ್ಲಿ ಆವರಿಸಿರುವ ಭೀಕರ ಬರಗಾಲದ ಕಾರಣ ಎಂಬ ಮಾಹಿತಿ ಬಹಿರಂಗವಾಗಿದೆ. ಹಕ್ಕಿಗಳು ಜಲಬಾಧೆಯಿಂದ ಸಾವು ಕಂಡಿವೆ ಎನ್ನುತ್ತಿದೆ ಅರಣ್ಯ ಇಲಾಖೆ ವರದಿ. ಅಧಿಕ ಉಷ್ಣಾಂಶ ಮತ್ತು ಹೇನು ಇದ್ದ ಕಾರಣ ತಡೆದುಕೊಳ್ಳಲಾಗದೇ ಸಾವು ಕಂಡಿವೆ.
ರಾಷ್ಟ್ರದ ಟಾಪ್-10 ಪಕ್ಷಿಧಾಮಗಳಲ್ಲಿ ಹಾಗೂ ರಾಜ್ಯದ 5 ಪಕ್ಷಿಧಾಮಗಳಲ್ಲಿ ಒಂದೆನಿಸಿದ ಸೊರಬ ತಾಲೂಕಿನ ಗುಡವಿ ಗ್ರಾಮದ ಪಕ್ಷಿಧಾಮದಲ್ಲಿ ಪ್ರತಿವರ್ಷ ವಿವಿಧ ದೇಶಗಳಿಂದ ಸುಮಾರು 25 ಸಾವಿರಕ್ಕೂ ಅಧಿಕ ಪಕ್ಷಿಗಳು ಬೀಡುಬಿಟ್ಟು ವಂಶಾಭಿವೃದ್ಧಿ ಮಾಡುತ್ತವೆ. ಬಳಿಕ ತಾಯ್ನಾಡಿಗೆ ತೆರಳುವುದು ವಾಡಿಕೆ. ಆದರೆ ಈ ಬಾರಿ ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಗುಡವಿ ಪಕ್ಷಿಧಾಮಕ್ಕೆ ಬರದ ಛಾಯೆ ಎದುರಾಗಿದೆ. ಈ ಪರಿವೆಯೇ ಇಲ್ಲದೇ ವಲಸೆ ಬಂದ ಹಕ್ಕಿಗಳಿಗೆ ನಿರಾಶೆ ಕಾರ್ಮೋಡ ಕವಿದಿತ್ತು. ಸುಮಾರು 30 ಎಕರೆಯಷ್ಟು ಇರುವ ಕೆರೆಯಲ್ಲಿ ನೀರು ಮತ್ತು ಆಹಾರ ಕೊರತೆ ಜೊತೆಗೆ ಅಧಿಕ ಉಷ್ಣಾಂಶದಿಂದ ವಲಸೆ ಹಕ್ಕಿಗಳು ನಿತ್ರಾಣವಾಗಿ ಸಾವು ಕಂಡಿದ್ದವು.ಅಕ್ಟೊಬರ್ ತಿಂಗಳಲ್ಲಿ ಪಕ್ಷಿಧಾಮದಲ್ಲಿ 30ಕ್ಕೂ ಅಧಿಕ ಕರಿತಲೆ ಪಕ್ಷಿಗಳ ಮೃತದೇಹಗಳು ಪತ್ತೆಯಾಗಿದ್ದವು. ಹಕ್ಕಿಗಳು ಕಲುಷಿತ ನೀರು ಸೇವನೆ, ರೈತರು ಬೆಳೆಗಳಿಗೆ ಸಿಂಪಪಡಿಸುವ ಅಧಿಕ ಕೀಟನಾಶಕ ಸೇವನೆ, ಹಕ್ಕಿಜ್ವರ ಅಥವಾ ಇನ್ನಾವುದೋ ಕಾರಣದಿಂದ ಸಾವನ್ನಪ್ಪಿವೆಯೇ ಎನ್ನುವ ಆತಂಕ ಪಕ್ಷಿಪ್ರಿಯರಲ್ಲಿ ಮೂಡಿತ್ತು. ನಿಗೂಢವಾಗಿ ಸಾವು ಕಾಣುತ್ತಿದ್ದ ಪಕ್ಷಿಗಳ ಸಾವು ಅರಣ್ಯ ಇಲಾಖೆಗೂ ತಲೆನೋವಾಗಿ ಪರಿಣಮಿಸಿತ್ತು. ಆದರೆ, ಬರದ ಹಿನ್ನೆಲೆ ನೀರು-ನೆರಳು ಕಾಣದೇ ಗುಡವಿ ಧಾಮದಲ್ಲಿನ ಪಕ್ಷಿಗಳು ಸಾವು ಕಾಣುತ್ತಿವೆ ಎಂದು ಅಕ್ಟೋಬರ್ 27ರಂದು ಕನ್ನಡಪ್ರಭ ವರದಿ ಪ್ರಕಟಿಸಿ, ಗಮನ ಸೆಳೆದಿತ್ತು.
ಹಕ್ಕಿಗಳ ಸಾವಿನ ಬಗ್ಗೆ ತನಿಖೆ ನಡೆಸಿ, ಮೃತದೇಹಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಿರ್ಜಲಿಕರಣದಿಂದ ಅಂದರೆ ನೀರಿನ ಕೊರತೆಯಿಂದ, ಮಳೆ ಇಲ್ಲದೇ ಕೆರೆ ನೀರು ಬತ್ತಿ ಹೋದ ಕಾರಣ ಮತ್ತು ಗೂಡು ಕಟ್ಟಲು ನೆರವಾಗುತ್ತಿದ್ದ ಮರ-ಗಿಡಗಳ ಪೊದೆಗಳು ಒಣಗಿ ನೆಲಸಮವಾದ ಕಾರಣ ಪಕ್ಷಿಗಳು ಸಾವನ್ನಪ್ಪಿವೆ ಎಂಬ ಅಂಶ ವರದಿಯಲ್ಲಿ ಬಹಿರಂಗಗೊಂಡಿದೆ.ಮೃತ ಹಕ್ಕಿಗಳನ್ನು ಶಿವಮೊಗ್ಗ ವನ್ಯಜೀವಿ ವಿಭಾಗ ಕಾರ್ಗಲ್ ವಲಯದ ಅಧಿಕಾರಿಗಳು ಮತ್ತು ಪಶು ವೈದ್ಯಕೀಯ ಕಾಲೇಜಿನ ಪ್ರೊಫೆಸರ್‌ಗಳನ್ನು ಒಳಗೊಂಡ ತಂಡ ಸ್ಥಳ ಪರಿಶೀಲನೆ ಮಾಡಿ, ಹಕ್ಕಿಗಳ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿತ್ತು. ಪಕ್ಷಿಗಳ ದೇಹದ ಕೆಲ ಅಂಗಾಂಗಳನ್ನು ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜು ಹಾಗೂ ಬೆಂಗಳೂರು ಹೆಬ್ಬಾಳದ ವೈರಲಾಜಿ ಲ್ಯಾಬ್‌ನಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವರದಿಯಲ್ಲಿ ಹಕ್ಕಿಗಳು ಕಲುಷಿತ ನೀರು ಸೇವನೆಯಿಂದ ಅಥವಾ ಹಕ್ಕಿ ಜ್ವರದಿಂದ ಸಾವನ್ನಪ್ಪಿಲ್ಲ ಎಂದು ಸಾಬೀತಾಗಿದೆ. ಅಲ್ಲದೇ ಪತ್ತೆಯಾದ ಒಂದೆರಡು ಪಕ್ಷಿಗಳ ಮೃತ ದೇಹದಲ್ಲಿ ಹೇನುಗಳು ಪತ್ತೆಯಾಗಿದ್ದವು. ಇದರಿಂದ ಹಕ್ಕಿಗಳು ಸಾವನ್ನಪ್ಪಿರಬಹುದು ಎಂದು ವರದಿ ಬಹಿರಂಗಪಡಿಸಿದೆ.
- - -ಬಾಕ್ಸ್ ಮೃತ ಪಕ್ಷಿಗಳ ಮರಣೋತ್ತರ ಪರೀಕ್ಷೆ ನಡೆಸಿ, ಅನುಮಾನದ ಮೇರೆಗೆ ದೇಹದ ಕೆಲ ಅಂಗಾಂಗಗಳು ಜೊತೆಗೆ ಕೆರೆಯ ನೀರು, ಕೆರೆಗೆ ಬಂದು ಸೇರುವ ನೀರು ಹಾಗೂ ಪಕ್ಕದ ಕೆರೆಯ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿಯಲ್ಲಿ ನೀರು ಕಲುಷಿತವಾಗಿಲ್ಲ ಎಂದು ತಿಳಿದುಬಂದಿದೆ. ಹಕ್ಕಿಗಳ ಮರಿಗಳು ನೀರು, ಆಹಾರ ಸಿಗದೇ ಸಾವನ್ನಪ್ಪಿವೆ. ಯಾವ ಮರಿಗಳು ತಾಯಿಯೊಂದಿಗೆ ಹಾರುವ ಸಾಮರ್ಥ್ಯ ಹೊಂದಿರುತ್ತವೆಯೋ ಅವು ಮಾತ್ರ ಬದುಕುಳಿಯುತ್ತವೆ. ಉಳಿದವುಗಳು ಗೂಡಿನಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುತ್ತವೆ. ಕೆಲವು ಹಕ್ಕಿಗಳು ಅಧಿಕ ಉಷ್ಣಾಂಶ ಮತ್ತು ಹೇನು ಇದ್ದ ಕಾರಣ ತಡೆದುಕೊಳ್ಳಲಾಗದೇ ಸಾವು ಕಂಡಿವೆ
- ಸಿ.ಕೆ. ಯೋಗೇಶ್, ಎ.ಸಿ.ಎಫ್. ವನ್ಯಜೀವಿ ವಿಭಾಗ, ಕಾರ್ಗಲ್- - - -28ಕೆಪಿಸೊರಬ02: ಸೊರಬ ತಾಲೂಕಿನ ಗುಡವಿ ಪಕ್ಷಿಧಾಮ.