ಕಪ್ಪತಗುಡ್ಡದಲ್ಲಿ ಗಣಿ ನಿಷೇಧಕ್ಕೆ ಹೈಕೋರ್ಟ್‌ ಅಸ್ತು- 1 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿದ್ದ ಸರ್ಕಾರ । ಆದೇಶವನ್ನು ಎತ್ತಿ ಹಿಡಿದ ಉಚ್ಚ ನ್ಯಾಯಾಲಯ

KannadaprabhaNewsNetwork | Updated : Jun 24 2024, 04:25 AM IST

ಸಾರಾಂಶ

ಕಪ್ಪತಗುಡ್ಡ ವನ್ಯಜೀವಿಧಾಮ ಗಡಿಯ ಒಂದು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಕಲ್ಲು-ಮರಳು ಗಣಿಗಾರಿಕೆ ನಿಷೇಧಿಸಿದ್ದ ಹಾಗೂ ಕ್ವಾರಿ ಗುತ್ತಿಗೆಗಳನ್ನು ಅಮಾನತುಪಡಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು : ಗದಗ ಜಿಲ್ಲೆಯ ಪ್ರಖ್ಯಾತ ಕಪ್ಪತಗುಡ್ಡದ ಅರಣ್ಯ ಪ್ರದೇಶವನ್ನು ಸಂರಕ್ಷಿತ ಮೀಸಲು ಪ್ರದೇಶವೆಂದು ಘೋಷಿಸಿದ್ದ ರಾಜ್ಯ ಸರ್ಕಾರದ ಅಧಿಸೂಚನೆಯನ್ನು ಈ ಹಿಂದೆ ಪುರಸ್ಕರಿಸಿದ್ದ ಹೈಕೋರ್ಟ್‌, ಇದೀಗ ಕಪ್ಪತಗುಡ್ಡ ವನ್ಯಜೀವಿಧಾಮ ಗಡಿಯ ಒಂದು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಕಲ್ಲು-ಮರಳು ಗಣಿಗಾರಿಕೆ ನಿಷೇಧಿಸಿದ್ದ ಹಾಗೂ ಕ್ವಾರಿ ಗುತ್ತಿಗೆಗಳನ್ನು ಅಮಾನತುಪಡಿಸಿದ್ದ ಸರ್ಕಾರದ ಆದೇಶವನ್ನು ಎತ್ತಿಹಿಡಿದಿದೆ.

ಸರ್ಕಾರದ ಆದೇಶ ಪ್ರಶ್ನಿಸಿ ಎಸ್‌.ಆರ್‌. ಬೆಳ್ಳಾರಿ, ಎ.ಜೆ. ಕಳ್ಕೆರೆ ಹಾಗೂ ಶಿವಗಂಗಾ ಸ್ಟೋನ್‌ ಕ್ರಷಿಂಗ್‌ ಇಂಡಸ್ಟ್ರೀಸ್‌ ಸೇರಿ ಹಲವು ಮೈನಿಂಗ್‌ ಕಂಪನಿ ಹಾಗೂ ಅವುಗಳ ಮಾಲೀಕರು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ವಜಾಗೊಳಿಸಿ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ವಿಭಾಗೀಯ ಪೀಠ ತೀರ್ಪು ನೀಡಿದೆ.

ಕಪ್ಪತಗುಡ್ಡವನ್ನು ಪರಿಸರ ಸೂಕ್ಷ್ಮ ವಲಯವೆಂದು ಅಧಿಸೂಚಿಸದೆ ಗಣಿ ಚಟುವಟಿಕೆ ನಿಷೇಧಿಸಿರುವುದು ಕಾನೂನು ಬಾಹಿರ ಎಂಬ ಅರ್ಜಿದಾರರ ವಾದ ಒಪ್ಪದ ನ್ಯಾಯಪೀಠ, ಕಪ್ಪತಗುಡ್ಡ ಮೀಸಲು ಅರಣ್ಯವನ್ನು ವನ್ಯಜೀವಿ ಧಾಮವೆಂದು ಅಧಿಸೂಚಿಸಲಾಗಿದೆ. ಇದರಿಂದ ಅದರ ಸುತ್ತಲಿನ ಒಂದು ಕಿ.ಮೀ. ಪ್ರದೇಶವು ನಿಷೇಧಿತ ವಲಯವಾಗುತ್ತದೆ. ಪರಿಸರ ಸೂಕ್ಷ್ಮ ವಲಯ ಅಧಿಸೂಚನೆ ಇಲ್ಲದೆಯೂ ಸಂರಕ್ಷಿತ ಪ್ರದೇಶದಿಂದ ಒಂದು ಕಿ.ಮೀ. ಜಾಗವನ್ನು ಸಂರಕ್ಷಿಸಬೇಕಾಗುತ್ತದೆ ಎಂದೇ ಪರಿಗಣಿಸಬೇಕಿದೆ. ಆದ್ದರಿಂದ, ಪರಿಸರ ಸೂಕ್ಷ್ಮ ವಲಯ ಅಧಿಸೂಚನೆ ಪ್ರಕಟಿಸುವುದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಆದ್ದರಿಂದ ಈ ವನ್ಯಜೀವಿ ಧಾಮ ಗಡಿಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆಗಳಿಗೆ ಅನುಮತಿಸಲಾಗುವುದಿಲ್ಲ ಎಂದು ಆದೇಶಿಸಿದೆ.

ಪ್ರಕರಣದ ವಿವರ:

ಗದಗ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾರ್ಯಪಡೆ ಸಮಿತಿ (ಗಣಿ), ಜಿಲ್ಲಾ ಮರಳು ಮೇಲ್ವಿಚಾರಣಾ ಸಮಿತಿ, ಜಿಲ್ಲಾ ಕಲ್ಲು ಕ್ರಷರ್‌ಗಳ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರ 2022ರ ಸೆ.29ರಂದು ಸಭೆ ನಡೆಸಿ, ಕಪ್ಪತಗುಡ್ಡ ವನ್ಯಜೀವಿಧಾಮ ಗಡಿಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಲು, 14 ಕ್ವಾರಿ ಗುತ್ತಿಗೆ ಅಮಾನತು ಮಾಡಲು ಮತ್ತು ಯಾವುದಾದರೂ ನಿಯಮ ಉಲ್ಲಂಘಿಸಿದ್ದರೆ ಗುತ್ತಿಗೆ ರದ್ದುಪಡಿಸಲು ಸರ್ವಾನುಮತದಿಂದ ನಿರ್ಧಾರ ಕೈಗೊಂಡಿತ್ತು. ನಂತರ ಕಲ್ಲು ಕ್ವಾರಿ ಗುತ್ತಿಗೆಗಳನ್ನು ಅಮಾನತುಪಡಿಸಿ 2022ರ ಡಿ.5ರಂದು ಗದಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಮತ್ತು ಸಕ್ಷಮ ಪ್ರಾಧಿಕಾರ ಆದೇಶಿಸಿತ್ತು.

ಇದನ್ನು ಪ್ರಶ್ನಿಸಿ ಕಪ್ಪತಗುಡ್ಡ ವನ್ಯಜೀವಿ ಧಾಮ ಗಡಿಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಪರವಾನಗಿ ಪಡೆದು ಕಲ್ಲು ಹಾಗೂ ಮರಳು ಗಣಿಗಾರಿಕೆ ನಡೆಸುತ್ತಿದ್ದ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ವಕೀಲರು, ಕಪ್ಪತಗುಡ್ಡವನ್ನು ಪರಿಸರ ಸೂಕ್ಷ್ಮ ವಲಯವೆಂದು ಅಧಿಸೂಚಿಸಿಲ್ಲ. ಅಧಿಕಾರ ವ್ಯಾಪ್ತಿ ಮೀರಿ ಕ್ವಾರಿ ಲೀಸ್‌ ಅಮಾನತು ಆದೇಶ ಹೊರಡಿಸಲಾಗಿದೆ ಎಂದು ಆಕ್ಷೇಪಿಸಿದರೆ, ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.

ವಾದ-ಪ್ರತಿವಾದ ಆಲಿಸಿದ್ದ ನ್ಯಾಯಪೀಠ, ರಾಷ್ಟ್ರೀಯ ಉದ್ಯಾನ ಅಥವಾ ವನ್ಯಜೀವಿ ಧಾಮಗಳ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಕ್ವಾರಿ ಘಟಕಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆಗೆ ಅನುಮತಿ ನೀಡಬಾರದು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಕಪ್ಪತಗುಡ್ಡದ ಮೀಸಲು ಅರಣ್ಯ ಪ್ರದೇಶವನ್ನು ವನ್ಯಜೀವಿಧಾಮ ಎಂದು 2019ರಲ್ಲಿ ನೋಟಿಫಿಕೇಷನ್‌ ಹೊರಡಿಸಿರುವುದರಿಂದ ಅದು ಗಣಿಗಾರಿಕೆ ನಿಷೇಧಿತ ವಲಯವೆಂದು ಪರಿಗಣಿಸಬೇಕಿದೆ. ಎಲ್ಲ ಅರ್ಜಿದಾರರ ಕ್ವಾರಿ ಘಟಕಗಳು ಕಪ್ಪತಗುಡ್ಡ ವನ್ಯಜೀವಿಧಾಮದ ಗಡಿಯ ಒಂದು ಕಿ.ಮೀ. ವ್ಯಾಪ್ತಿಯಲ್ಲಿವೆ. ಆದ್ದರಿಂದ ಗಣಿಗಾರಿಕೆಗೆ ಅನುಮತಿಸಲಾಗುವುದಿಲ್ಲ. ಅರ್ಜಿದಾರರ ಗುತ್ತಿಗೆ ಅಮಾನತು/ ಸ್ಥಗಿತಗೊಳಿಸಿರುವುದು ಸೂಕ್ತ ಮತ್ತು ಕಾನೂನು ಬದ್ಧವಾಗಿದೆ ಎಂದು ನ್ಯಾಯಪೀಠ ಆದೇಶಿಸಿದೆ.ಗುಡ್ಡದ ವಿಶೇಷತೆ:

ಗದಗ ಜಿಲ್ಲೆಯ ಕಪ್ಪತಗುಡ್ಡ 244.15 ಚದರ ಕಿ.ಮೀ. ವಿಸ್ತೀರ್ಣ ಹೊಂದಿದೆ. ಕಪ್ಪತಗುಡ್ಡ ಅರಣ್ಯ ಪ್ರದೇಶದಲ್ಲಿ ನೂರಾರು ಜಾತಿಯ ಹೂ, ಗಿಡ-ಮರ, ಪ್ರಾಣಿ-ಪಕ್ಷಗಳಿವೆ. ಯುನೆಸ್ಕೋ ಮಾನ್ಯತೆ ಪಡೆದಿರುವ ಐತಿಹಾಸಿಕ ತಾಣವಾಗಿದೆ. ವನ್ಯಜೀವಿಧಾಮವು 32,346 ಹೆಕ್ಟೇರ್‌ ವಿಸ್ತೀರ್ಣವಿದೆ. ಇಲ್ಲಿ ಸುಮಾರು 295 ಜಾತಿಯ ಔಷಧೀಯ ಸಸ್ಯಗಳನ್ನು ಸಾಂಪ್ರದಾಯಿಕ ಔಷಧಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಚಿನ್ನದ ನಿಕ್ಷೇಪವೂ ಇದೆ.

Share this article