ಹೈಫ್ಲೈಯರ್ಸ್ ಕಪ್: ಚೇಂದಿರ, ಕರ್ತಮಾಡ, ಚಂದೂರ, ಕೊಂಗಂಡ ತಂಡ ಸೆಮಿಗೆ

KannadaprabhaNewsNetwork | Published : Dec 1, 2023 12:45 AM

ಸಾರಾಂಶ

ವಿ. ಬಾಡಗದ ಹೈಫ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ವಿರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ 2ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಹೈಪ್ಲೈಯರ್ಸ್ ಕಪ್-2023ರ 3ನೇ ದಿನ ಗುರುವಾರದ ಪಂದ್ಯಾವಳಿಯಲ್ಲಿ ಈ 4 ತಂಡಗಳು ಸೆಮಿ ಫೈನಲ್ಸ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆಬಿಟ್ಟಂಗಾಲ ಸಮೀಪದ ವಿ. ಬಾಡಗದಲ್ಲಿ ನಡೆಯುತ್ತಿರುವ ಹೈಫ್ಲೈಯರ್ಸ್ ಕಪ್-2023ರ ಕ್ವಾರ್ಟರ್ ಫೈನಲ್‌ನಲ್ಲಿ ಗೆಲುವು ಸಾಧಿಸಿ ಚೇಂದಿರ, ಕರ್ತಮಾಡ, ಚಂದೂರ ಮತ್ತು ಕೊಂಗಂಡ ತಂಡಗಳು ಸೆಮಿಫೈನಲ್‌ಗೆ ಪ್ರವೇಶಿಸಿದೆ.

ವಿ. ಬಾಡಗದ ಹೈಫ್ಲೈಯರ್ಸ್ ಸಂಸ್ಥೆಯ ವತಿಯಿಂದ ಸ್ಥಳೀಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ವಿರಾಜಪೇಟೆ ತಾಲೂಕಿನ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಟಿಯತ್ ನಾಡು ವ್ಯಾಪ್ತಿಯ 2ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ಹೈಪ್ಲೈಯರ್ಸ್ ಕಪ್-2023ರ 3ನೇ ದಿನ ಗುರುವಾರದ ಪಂದ್ಯಾವಳಿಯಲ್ಲಿ ಈ 4 ತಂಡಗಳು ಸೆಮಿ ಫೈನಲ್ಸ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೇಂದಿರ ತಂಡವು ಸಣ್ಣುವಂಡ ತಂಡವನ್ನು 5-2 ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಹೇಮಂತ್ 9ನೇ ನಿಮಿಷದಲ್ಲಿ, ಪುನೀತ್ 19ನೇ ನಿಮಿಷದಲ್ಲಿ, ಅತಿಥಿ ಆಟಗಾರ ಮಂಜುನಾಥ್ 23ನೇ ನಿಮಿಷದಲ್ಲಿ ಮತ್ತು ಚಿಣ್ಣಪ್ಪ 43ನೇ ಮತ್ತು 50ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಪರಾಜಿತ ತಂಡದ ಪರವಾಗಿ ಪೊನ್ನಣ್ಣ 39ನೇ ಮತ್ತು 53ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚಂದೂರ ತಂಡವು ಗುಮ್ಮಟ್ಟಿರ ತಂಡವನ್ನು 6-2 ಗೋಲುಗಳಿಂದ ಸೋಲಿಸಿ ಮುನ್ನಡೆ ಸಾಧಿಸಿತು. ಚಂದೂರ ತಂಡದ ಪರವಾಗಿ ಸುರೇಶ್ ಗಣಪತಿ 6ನೇ, ಅತಿಥಿ ಆಟಗಾರ ಕಿರಣ್ ಮೇದಪ್ಪ ಹತ್ತನೇ 53ನೇ ಹಾಗೂ 57ನೇ ನಿಮಿಷದಲ್ಲಿ, ಮತ್ತೋರ್ವ ಅತಿಥಿ ಆಟಗಾರ ಚೇತನ್ ಸೋಮಣ್ಣ 13ನೇ ಹಾಗೂ 44ನೇ ನಿಮಿಷದಲ್ಲಿ ಗೋಲು ಬಾರಿಸಿದರೆ, ಪರಾಜಿತ ತಂಡದ ಪರವಾಗಿ ಅತಿಥಿ ಆಟಗಾರ ಬೋಪಣ್ಣ 23ನೇ ಹಾಗೂ ಯಶ್ವಿನ್ 51ನೇ ನಿಮಿಷದಲ್ಲಿ ಗೋಲು ಹೊಡೆದರು.3ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ತಮಾಡ ತಂಡವು ಮೇಚಿಯಂಡ ತಂಡವನ್ನು 3-2 ಗೋಲುಗಳಿಂದ ಪರಾಭವಗೊಳಿಸಿತು. ವಿಜೇತ ತಂಡದ ಪರವಾಗಿ ಅತಿಥಿ ಆಟಗಾರ ಬೆಳ್ಯಪ್ಪ 6ನೇ, ಸಾಗರ್ ಪೂಣಚ್ಚ 32ನೇ ಮತ್ತು 53ನೇ ನಿಮಿಷದಲ್ಲಿ ಗೋಲು ಹೊಡೆದರೆ, ಮೇಚಿಯಂಡ ತಂಡದ ಪರವಾಗಿ ವಿನಿತ್ ನಾಣಯ್ಯ 9ನೇ ಹಾಗೂ ಅತಿಥಿ ಆಟಗಾರ ನಾಚಪ್ಪ 58ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕೊಂಗಂಡ ತಂಡವು ಅಮ್ಮಣಿಚಂಡ ತಂಡವನ್ನು ಸಡನ್ ಡೆತ್ ನಲ್ಲಿ ಒಟ್ಟು 7-6 ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದುಕೊಂಡಿತು.ಆರಂಭದಿಂದಲೇ ತೀವ್ರ ಹಣಾಹಣೆಯಿಂದ ನಡೆದ ಈ ಪಂದ್ಯದಲ್ಲಿ ಉಭಯ ತಂಡಗಳು ಸಮಬಲದ ಹೋರಾಟ ನಡೆಸಿತು. ವಿಜೇತ ತಂಡದ ಪರವಾಗಿ ಅದ್ವೈತ್ 16ನೇ ನಿಮಿಷದಲ್ಲಿ ಮತ್ತು ನಾಚಪ್ಪ 54ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಅಮ್ಮಣಿಚಂಡ ತಂಡದ ಪರವಾಗಿ ಅತಿಥಿ ಆಟಗಾರ ದಿವಾನ್ 48ನೇ ನಿಮಿಷದಲ್ಲಿ ಮತ್ತು ಚೇತನ್ 55ನೇ ನಿಮಿಷದಲ್ಲಿ ಗೋಲು ಬಾರಿಸಿದ್ದರಿಂದ ದ್ವಿತೀಯಾರ್ಧದ ಅಂತ್ಯದ ವೇಳೆಗೆ ಎರಡೂ ತಂಡಗಳು ಸಮಬಲ ಸಾಧಿಸಿತು. ಇದರಿಂದ ಶೂಟ್ ಔಟ್ ನಿಯಮಾವಳಿ ಅಳವಡಿಸಲಾಯಿತು. ಉಭಯ ತಂಡಗಳು ಮತ್ತೆ ಸಮಬಲದ ಗೋಲು ದಾಖಲಿಸಿದ ಕಾರಣ ಸಡನ್ ಡೆತ್ ಅಳವಡಿಸಬೇಕಾಯಿತು. ಈ ವೇಳೆ ಒಂದು ಗೋಲು ಹೆಚ್ಚು ದಾಖಲಾದ ಕಾರಣ ಕೊಂಗಂಡ ತಂಡಕ್ಕೆ ಅದೃಷ್ಟ ಒಲಿಯಿತು.

ಕೊಂಗಂಡ ತಂಡದ ಪರವಾಗಿ ಅತಿಥಿ ಆಟಗಾರ ಚೆಲ್ಸಿ ಮೇದಪ್ಪ 2 ಗೋಲು ಬಾರಿಸಿದರೆ, ತಂಡದ ಅದ್ವೈತ್, ರಚನ್ ಮತ್ತು ನಾಚಪ್ಪ ತಲಾ ಒಂದೊಂದು ಗೋಲು ದಾಖಲಿಸಿದರು. ಪರಾಜಿತ ತಂಡದ ಪರವಾಗಿ ಅತಿಥಿ ಆಟಗಾರ ಚೇತನ್ 2 ಗೋಲು ಬಾರಿಸಿದರೆ ತಂಡದ ವಿಘ್ನೇಶ್ ಬೋಪಣ್ಣ ಮತ್ತು ಸಂಜು ಸೋಮಯ್ಯ ತಲಾ ಒಂದೊಂದು ಗೋಲು ಬಾರಿಸಿದರು.

ಇಂದಿನ ಸೆಮಿಫೈನಲ್ ಪಂದ್ಯಗಳುಬೆಳಗ್ಗೆ 11.00 ಗಂಟೆಗೆ: ಚೇಂದಿರ ಮತ್ತು ಚಂದೂರ ಮಧ್ಯಾಹ್ನ 2.00 ಗಂಟೆಗೆ: ಕರ್ತಮಾಡ ಮತ್ತು ಕೊಂಗಂಡ

Share this article