ನಿಯಮಗಳನ್ನು ಗಾಳಿಗೆ ತೂರಿ ಹೆದ್ದಾರಿ ಕಾಮಗಾರಿ: ಪ್ರಣವಾನಂದ ಶ್ರೀ

KannadaprabhaNewsNetwork | Published : Aug 15, 2024 1:59 AM

ಸಾರಾಂಶ

ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರು ಹಾಗೂ ಪ್ರಾದೇಶಿಕ ಕಚೇರಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇವೆ ಎಂದು ರಾಷ್ಟ್ರೀಯ ಈಡಿಗ ಮಹಾ ಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಕಾರವಾರ: ನಿಯಮಗಳನ್ನು ಗಾಳಿಗೆ ತೂರಿ ಜಿಲ್ಲೆಯಲ್ಲಿ ಬೇಕಾಬಿಟ್ಟಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಿದ್ದರಿಂದ ಅನೇಕ ಅವಘಡಗಳು ನಡೆಯುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಆಗಬೇಕಾಗಿದೆ ಎಂದು ರಾಷ್ಟ್ರೀಯ ಈಡಿಗ ಮಹಾ ಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರೂರು ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರು ಹಾಗೂ ಪ್ರಾದೇಶಿಕ ಕಚೇರಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುತ್ತೇವೆ. ಜತೆಗೆ ಈಡಿ, ಲೋಕಾಯುಕ್ತಕ್ಕೂ ದೂರು ದಾಖಲಿಸಲಾಗುವುದು ಎಂದರು.

ಎನ್ಎಚ್ಎಐ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿಯನ್ನು 2013ರಲ್ಲಿ ಐಆರ್‌ಬಿ ಕಂಪನಿಗೆ ವಹಿಸಿದೆ. ಆದರೆ ಈ ವರೆಗೂ ಕಾಮಗಾರಿ ಮುಗಿದಿಲ್ಲ. ಆದರೆ ಕಾಮಗಾರಿ ವೇಳೆ ಒಪ್ಪಂದದ ಯಾವುದೇ ನಿಯಮಗಳನ್ನು ಗುತ್ತಿಗೆ ಕಂಪನಿ ಪಾಲಿಸಿಲ್ಲ. ಇಷ್ಟಾದರೂ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹೆದ್ದಾರಿ ಅಗಲೀಕರಣದಿಂದ ಸಾವಿರಾರು ಜನರು ತೊಂದರೆಗೊಳಗಾಗಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಪರಿಹಾರಕ್ಕಾಗಿ ಹಣ ಮೀಸಲಿಟ್ಟಿದ್ದರೂ ಅದನ್ನು ಖರ್ಚು ಮಾಡಿಲ್ಲ ಎಂದರು.

ಎನ್ಎಚ್ಎಐ ಹಾಗೂ ಐಆರ್‌ಬಿ ಕಂಪನಿಯ ಲೂಟಿಯ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಜತೆಗೆ ಮೃತರ ಕುಟುಂಬಕ್ಕೆ ತಲಾ ಒಂದು ಕೋಟಿ ರು. ಪರಿಹಾರ ಸಿಗಬೇಕು. ಅಲ್ಲಿಯ ವರೆಗೆ ಹೋರಾಟ ನಿಲ್ಲುವುದಿಲ್ಲ. ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನ್ಯಾಯ ಸಿಗದಿದ್ದರೆ ಶಿರೂರಿನಿಂದ ಸಂಸತ್ ಭವನದ ವರೆಗೂ ಪಾದಯಾತ್ರೆ ಮಾಡಲೂ ಕೂಡ ಹಿಂಜರಿಯುವುದಿಲ್ಲ ಎಂದರು.

ಮಹಾ ಮಂಡಳದ ಯುವ ಘಟಕದ ಸಚಿನ ನಾಯ್ಕ, ಕಾಣೆಯಾದ ಲೋಕೇಶ ನಾಯ್ಕ ಅವರ ತಾಯಿ ಮಾಹಾದೇವಿ, ಜಗನ್ನಾಥ ನಾಯ್ಕ ಅವರ ಪುತ್ರಿ ಕೃತಿಕಾ, ಶಾಂತಿ ನಾಯ್ಕ ಸಹೋದರ ಶ್ರೀನಿವಾಸ ನಾಯ್ಕ, ಶ್ರೀಧರ ನಾಯ್ಕ, ಮಂಡಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ ನಾಯ್ಕ ಇದ್ದರು.

Share this article