ಮತ್ತೆ ರೈಲು ಹಳಿಗೆ ಗುಡ್ಡ ಕುಸಿತ: ಮಂಗಳೂರು-ಬೆಂಗಳೂರು ನೇರ ರೈಲು ಸಂಚಾರ ರದ್ದು

KannadaprabhaNewsNetwork | Published : Aug 11, 2024 1:37 AM

ಸಾರಾಂಶ

ರಾಡಿ ಘಾಟ್‌ನ ಎಡಕುಮೇರಿ ಬಳಿ ಗುಡ್ಡಕುಸಿತದಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ಆರಂಭವಾಗಿ ಎರಡು ದಿನಗಳಲ್ಲೇ ಮತ್ತೊಂದು ಗುಡ್ಡಕುಸಿತ ಘಟನೆ ಸಂಭವಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶುಕ್ರವಾರ ಮಧ್ಯರಾತ್ರಿ ಹಳಿಗೆ ಗುಡ್ಡಕುಸಿತ ಪರಿಣಾಮ ಮಂಗಳೂರು-ಬೆಂಗಳೂರು ನಡುವೆ ನೇರ ರೈಲು ಸಂಪರ್ಕ ರದ್ದುಗೊಂಡಿದೆ. ಶಿರಾಡಿ ಘಾಟ್‌ನ ಎಡಕುಮೇರಿ ಬಳಿ ಗುಡ್ಡಕುಸಿತದಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ಆರಂಭವಾಗಿ ಎರಡು ದಿನಗಳಲ್ಲೇ ಮತ್ತೊಂದು ಗುಡ್ಡಕುಸಿತ ಘಟನೆ ಸಂಭವಿಸಿದೆ.

ಬಾಳುಪೇಟೆ ಬಳಿ 42/ 43 ಕಿ.ಮೀ.ನಲ್ಲಿ ಮಧ್ಯರಾತ್ರಿ 12.30ರ ಸುಮಾರಿಗೆ ಗುಡ್ಡಕುಸಿತ ಘಟನೆ ಸಂಭವಿಸಿದೆ. ಇದರಿಂದಾಗಿ ಹಾಸನದಿಂದ ಮಂಗಳೂರಿಗೆ, ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಸಕಲೇಶಪುರ, ಎಡಕುಮೇರಿ, ಸಿರಿಬಾಗಿಲು, ಆಲೂರು ಸೇರಿ ಆರು ಕಡೆಗಳಲ್ಲಿ ರಾತ್ರಿ ಸಂಚಾರದ ರೈಲುಗಳ‍ು ನಿಂತಿದ್ದು, ಸಾವಿರಾರು ಪ್ರಯಾಣಿಕರು ಅರ್ಧರಾತ್ರಿ ಸಂಕಷ್ಟ ಅನುಭವಿಸುವಂತಾಗಿದೆ. ಸಕಲೇಶಪುರ ರೈಲು ನಿಲ್ದಾಣದಲ್ಲಿ ಅತಂತ್ರ ಸ್ಥಿತಿಯಲ್ಲಿರುವ ರೈಲು ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಆಹಾರದ ವ್ಯವಸ್ಥೆ ಏರ್ಪಡಿಸಿದ್ದು, ಬಳಿಕ ಬಸ್‌ಗಳ ಮೂಲಕ ಪ್ರಯಾಣಿಕರನ್ನು ಸಕಲೇಶಪುರ ಹಾಗೂ ಹಾಸನ ಕಡೆಗೆ ಕಳುಹಿಸಲಾಗಿದೆ.

ಸಮರೋಪಾದಿ ಕೆಲಸ:

ಗುಡ್ಡಕುಸಿದು ಭಾರಿ ಪ್ರಮಾಣದಲ್ಲಿ ಮಣ್ಣು ಹಳಿಗೆ ಬಿದ್ದಿದ್ದು ತೆರವು ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಸ್ಥಳದಲ್ಲಿ ರೈಲ್ವೆ ತಂತ್ರಜ್ಞಾನ ತಂಡ ಬೀಡುಬಿಟ್ಟಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಣ್ಣು ತೆರವು ಕಾರ್ಯ ನಡೆಯುತ್ತಿದೆ.

ಹಲವು ರೈಲುಗಳು ರದ್ದು: ಪ್ರಾಕೃತಿಕ ಅವಘಡ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ಶನಿವಾರ ಮತ್ತು ಭಾನುವಾರ ರದ್ದುಪಡಿಸಲಾಗಿದೆ.

ಶನಿವಾರ ಬೆಂಗಳೂರು-ಕಣ್ಣೂರು-ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್‌ ರೈಲು ಹಾಗೂ ಭಾನುವಾರ ಮಂಗಳೂರು ಸೆಂಟ್ರಲ್‌-ವಿಜಯಪುರ-ಮಂಗಳೂರು ಸೆಂಟ್ರಲ್‌ ಎಕ್ಸ್‌ಪ್ರೆಸ್‌ ಸಂಚಾರ ರದ್ದುಗೊಂಡಿದೆ. ಆ.11ರಂದು ಮಂಗಳೂರು ಜಂಕ್ಷನ್‌ ನಿಲ್ದಾಣದಿಂದ ಹೊರಡುವ ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ವೇಳಾಪಟ್ಟಿಯಂತೆ ಸಂಚರಿಸಲಿದೆ. ಆದರೆ ಆ.11ರಂದು ಭಾನುವಾರ ಬೆಂಗಳೂರು- ಕಾರವಾರ- ಬೆಂಗಳೂರು ಮತ್ತು ಮಂಗಳೂರು ಜಂಕ್ಷನ್‌- ಯಶವಂತಪುರ- ಮಂಗಳೂರು ಜಂಕ್ಷನ್‌ ರೈಲು ಸಂಚಾರ ರದ್ದುಪಡಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Share this article