ತಾಳುಬೆಟ್ಟದ ಹಲವು ತಿರುವುಗಳಲ್ಲಿ ಘಟನೆ । ಸಂಚಾರಕ್ಕೆ ತೊಂದರೆ । ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ ಹನೂರುತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಬರುವ ತಾಳು ಬೆಟ್ಟದಿಂದ ಒಂದನೇ ತಿರುವು ಹಾಗೂ 7, 8 ಮತ್ತು 9ನೇ ತಿರುವಿನಲ್ಲಿ ಸಹ ಗುಡ್ಡ ಕುಸಿದು ಸಂಚಾರ ಅಸ್ತವ್ಯಸ್ತಗೊಂಡಿದೆ.
ಕಳೆದ ಎರಡು ದಿನಗಳಿಂದ ಬೀಳುತ್ತಿರುವ ತುಂತುರು ಮಳೆ ಬಿರುಗಾಳಿಗೆ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುವ ತಾಳುಬೆಟ್ಟದಿಂದ ಹಲವಾರು ತಿರುವುಗಳಲ್ಲಿ ಗುಡ್ಡ ಕುಸಿದು ಸಂಚಾರಕ್ಕೂ ಸಹ ತೊಂದರೆಯಾಗಿದೆ.ಜತೆಗೆ ಹಲವಾರು ಗಿಡಮರಗಳು ಸಹ ಬಿರುಗಾಳಿ ಮಳೆಗೆ ಸಿಲುಕಿ ರಸ್ತೆಗೆ ಅಡ್ಡಲಾಗಿ ಬೀಳುತ್ತಿವೆ. ಹೀಗಾಗಿ ಮಲೆ ಮಾದೇಶ್ವರ ಬೆಟ್ಟಕ್ಕೆ ಬರುವ ಮಾದಪ್ಪನ ಭಕ್ತಾದಿಗಳು ಹಾಗೂ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ತಾಳಬೆಟ್ಟದಿಂದ ಮಲೆ ಮಾದೇಶ್ವರ ಬೆಟ್ಟದ ವರೆಗೆ ಹಲವಾರು ತಿರುವುಗಳು ಮತ್ತು ಗುಡ್ಡ ಇರುವುದರಿಂದ ಎಡೆಬಿಡದೆ ತುಂತುರು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಗುಡ್ಡದ ತುದಿ ಭಾಗಗಳಲ್ಲಿ ಮಳೆಯ ನೀರಿನಿಂದ ನೆನೆದು ಹಲವಾರು ಕಡೆ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಹೀಗಾಗಿ ವಾಹನ ಸವಾರರು ಎಚ್ಚರಿಕೆಯಿಂದ ಮಲೆ ಮಾದೇಶ್ವರ ಬೆಟ್ಟಕ್ಕೆ ಹೋಗಿ ಬರಬೇಕಾಗಿದೆ ಎಂದು ನಾಗರಿಕರು ಮನವಿ ಮಾಡಿದ್ದಾರೆ.
ಪಿಡಬ್ಲ್ಯೂಡಿ, ಅರಣ್ಯ ಇಲಾಖೆ ನಿರ್ಲಕ್ಷ್ಯ:ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ಗುಡ್ಡಗಳು, ಕುಸಿಯುವ ಭೀತಿಯಲ್ಲಿದ್ದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಅರಣ್ಯ ಪ್ರದೇಶ ಆಗಿರುವುದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯತನದಿಂದ ಈ ಮಾರ್ಗದಲ್ಲಿ ಮಳೆ ಬಂದಾಗೆಲ್ಲ ಗುಡ್ಡ ಕುಸಿಯುವುದು ಹಾಗೂ ಸಮೃದ್ಧವಾಗಿ ಬೆಳೆದಿರುವ ಬಿದಿರು ಬುಡಗಳು ಗಿಡಮರಗಳು ರಸ್ತೆಗೆ ಅಡ್ಡಲಾಗಿ ಬೀಳುತ್ತಿರುವುದನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾದೇಶ್ವರ ಬೆಟ್ಟಕ್ಕೆ ಬರುವ ಪ್ರಯಾಣಿಕರು ಹಾಗೂ ಭಕ್ತಾದಿಗಳು ಮನವಿ ಮಾಡಿದ್ದಾರೆ.