ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
೩೪ನೇ ನೆಕ್ಕಿಲಾಡಿ ಗ್ರಾಮದ ಆನೆಬೈಲು ಸಮೀಪದ ಉಡ್ಲದಕೋಡಿ ಎಂಬಲ್ಲಿ ಎತ್ತರದ ಗುಡ್ಡ ಕುಸಿದು ಮನೆಯೊಂದರ ಮೇಲೆ ಅಪ್ಪಳಿಸಿದ್ದು, ಮನೆ ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಒಂದು ಓಮ್ನಿ ಕಾರು ಹಾಗೂ ಒಂದು ದ್ವಿಚಕ್ರ ವಾಹನ ಹಾಗೂ ಸಾಕು ನಾಯಿ ಮಣ್ಣಿನಡಿ ಸಿಲುಕಿದೆ. ಗುಡ್ಡದ ಮಣ್ಣು ತೋಡಿಗೂ ಬಿದ್ದಿದ್ದು, ಇದರಿಂದ ಕೃಷಿ ತೋಟದಲ್ಲಿ ತೋಡಿನ ನೀರು ನದಿಯಂತೆ ಹರಿಯುತ್ತಿದೆ.ಶುಕ್ರವಾರ ಬೆಳಗ್ಗಿನ ಜಾವ ೪.೧೫ರ ಸುಮಾರಿಗೆ ವಿಶ್ವನಾಥ ನಾಯ್ಕ ಎಂಬವರ ಮನೆಯ ಬದಿಯ ಗುಡ್ಡ ಕುಸಿತಕ್ಕೊಳಗಾಗಿದೆ. ಈ ಸಂದರ್ಭ ಮನೆಯಲ್ಲಿ ವಿಶ್ವನಾಥ ನಾಯ್ಕ, ಅವರ ವೃದ್ಧ ತಾಯಿ, ಪತ್ನಿ ಹಾಗೂ ಅಂಗನವಾಡಿ ಹಾಗೂ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಅವರ ಇಬ್ಬರು ಮಕ್ಕಳು ಗಾಢ ನಿದ್ದೆಯಲ್ಲಿದ್ದರು. ಭಾರೀ ಶಬ್ದ ಕೇಳಿ ಮನೆ ಮಂದಿ ಎಚ್ಚರಗೊಂಡು ನೋಡಿದಾಗ ಮನೆಯ ಹಿಂಬದಿಯ ಗುಡ್ಡ ಕುಸಿತು ಇವರ ಮನೆಗೆ ತಾಗಿ ನಿಂತಿತ್ತು. ಇದರಿಂದ ಮನೆಯ ಒಂದು ಬದಿಯಲ್ಲಿ ಶೀಟ್ ಹಾಕಿ ಕಟ್ಟಲಾಗಿದ್ದ ಕೋಣೆ ಸಂಪೂರ್ಣ ನಾಶವಾಗಿದ್ದು, ಮನೆಯ ಗೋಡೆಗಳೂ ಬಿರುಕು ಬಿಟ್ಟಿವೆ. ಇದೇ ಬದಿಯಲ್ಲಿ ನಿಲ್ಲಿಸಲಾಗಿದ್ದ ಓಮ್ನಿ ಕಾರು ಹಾಗೂ ದ್ವಿಚಕ್ರ ವಾಹನಗಳು ಮಣ್ಣಿನಡಿ ಸಿಲುಕಿತ್ತು. ಮಣ್ಣು ಬಿದ್ದು ಇವರ ಮನೆಯ ಕೆಳಗೆ ಹರಿಯುತ್ತಿದ್ದ ಬೃಹತ್ ತೋಡು ತನ್ನ ನೀರಿನ ಹರಿವಿನ ದಿಕ್ಕು ಬದಲಿಸಿದ್ದು, ತೋಟದೆಲ್ಲೆಡೆ ನದಿಯಂತೆ ಹರಿಯುತ್ತಿದೆ. ಇದರಿಂದ ಇವರ ಮನೆಗೆ ಹೋಗುವ ದಾರಿಯೂ ನೀರಿನಿಂದಾವೃತವಾಗಿದೆ. ವಿದ್ಯುತ್ ಕಂಬಗಳು ಮಗುಚಿ ಬಿದ್ದಿವೆ.ರಕ್ಷಣಾ ಕಾರ್ಯ: ಸುದ್ದಿ ತಿಳಿದು ೩೪ ನೆಕ್ಕಿಲಾಡಿ ಗ್ರಾ.ಪಂ. ಸದಸ್ಯರಾದ ಪ್ರಶಾಂತ್ ಎನ್. ಹಾಗೂ ಹರೀಶ್ ಕುಲಾಲ್ ಬೆಳಗ್ಗಿನ ಜಾವವೇ ಅಲ್ಲಿಗೆ ಧಾವಿಸಿದ್ದು, ಸ್ಥಳೀಯರಾದ ಗುರುರಾಜ ಭಟ್, ಧನಂಜಯ ಸೇರಿದಂತೆ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ನಿರತರಾದರು. ತೋಟದಲ್ಲಿ ಎದೆಯೆತ್ತರದ ತನಕ ನೀರಿದ್ದು, ಆ ನೀರಿನಲ್ಲಿಯೇ ವೃದ್ಧೆ ಲಲಿತಾ ಅವರನ್ನು ಎತ್ತಿಕೊಂಡು ಬಂದು ಸುರಕ್ಷಿತ ಜಾಗಕ್ಕೆ ಕಳುಹಿಸಿಕೊಡಲಾಯಿತು. ಬಳಿಕ ಗೃಹರಕ್ಷಕ ದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡದವರು ದೋಣಿಯೊಂದಿಗೆ ಸ್ಥಳಕ್ಕೆ ತೆರಳಿ, ಮನೆಯ ಸಾಮಗ್ರಿ, ಸರಂಜಾಮುಗಳನ್ನು ಹಾಗೂ ಮನೆಯಲ್ಲಿದ್ದ ಅಡಕೆ ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಣಿಯ ಮೂಲಕ ತಂದು ಸುರಕ್ಷಿತ ಜಾಗಕ್ಕೆ ತಲುಪಿಸಿದರು. ಇವರ ಸಾಕು ನಾಯಿ ಮಣ್ಣಿನ ಅಡಿಯೊಳಗೆ ಸೇರಿ ಹೋಗಿದ್ದು, ಈವರೆಗೆ ಅದರ ಪತ್ತೆಯಾಗಿಲ್ಲ.೩೪ ನೆಕ್ಕಿಲಾಡಿಯ ನೆಕ್ಕಲ ಎಂಬಲ್ಲಿ ಆ.೨ರಂದು ಬೆಳಗ್ಗೆ ಧರೆಯೊಂದು ಕುಸಿದು ಬಿದ್ದಿದ್ದು, ಹನೀಫ್ ಎಂಬವರ ಮನೆಗೆ ಹಾನಿಯುಂಟಾಗಿದೆ.ಮನೆಯ ಸಮೀಪವೇ ಇದ್ದ ಧರೆ ಕುಸಿದಿದ್ದರಿಂದ ಇಲ್ಲಿನ ಹನೀಫ್ ಎಂಬವರ ಮನೆಯ ಗೋಡೆಗಳು, ಗ್ರಾನೈಟ್‌ನ ನೆಲ ಸಂಪೂರ್ಣ ಬಿರುಕು ಬಿಟ್ಟಿದೆ. ಮನೆಯ ಒಂದು ಬದಿಯ ಗೋಡೆ ಕಾಲು ಭಾಗದಷ್ಟು ಮಣ್ಣಿನಿಂದ ಮುಚ್ಚಿ ಹೋಗಿದ್ದು, ಕಿಟಕಿಯ ಮೂಲಕ ಮಣ್ಣಿನ ರಾಶಿ ಮನೆಯೊಳಗೂ ನುಗ್ಗಿದೆ. ಘಟನೆಯ ವೇಳೆ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.