ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಬಸವ ಭವನದಲ್ಲಿ ಮಹಾರಾಜ ಮಠದ ಸಿದ್ದರಾಮೇಶ್ವರ ಮಹಾರಾಜರ ಪುಣ್ಯಸ್ಮರಣೋತ್ಸವ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಕೃತಿ ನಮ್ಮ ಬದುಕಿಗೆ ಬೇಕಾದ ಎಲ್ಲವನ್ನು ನೀಡಿದೆ. ಅದಕ್ಕಾಗಿಯೇ ನಾವು ದೇವರನ್ನು ವಿವಿಧ ರೂಪದಲ್ಲಿ ಆರಾಧಿಸುತ್ತಿದ್ದೇವೆ. ದೇವರು ಸರ್ವವ್ಯಾಪಿಯಾಗಿದ್ದು, ಏಕಾಗ್ರತೆಯಿಂದ ಧ್ಯಾನದಲ್ಲಿ ತೊಡಗಿ ಸಾಧನೆ ಮಾಡಬೇಕೆಂದು ಹೇಳಿದರು.
ಸಮಾಜವನ್ನು ಸನ್ಮಾರ್ಗಕ್ಕೆ ತರುವ ನಿಟ್ಟಿನಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿಯೂ ಭಕ್ತಿ ಆಂದೋಲನ ನಡೆದಿವೆ. ೧೨ನೇ ಶತಮಾನದಲ್ಲಿ ಬಸವೇಶ್ವರರು ಸಮಾನತೆ ಸಂದೇಶ ಸಾರುವ ಮೂಲಕ ಇಷ್ಟಲಿಂಗ ಪೂಜೆಯ ಮಹತ್ವ ಸಾರುವ ಮೂಲಕ ಭಕ್ತಿ ಆಂದೋಲನ ಮಾಡಿದ್ದಾರೆ. ಏಕನಾಥ ಮಹಾರಾಜರು ಭಕ್ತಿ ಆಂದೋಲನದ ಮೂಲಕ ಜನರನ್ನು ಸನ್ಮಾರ್ಗದತ್ತ ತೆಗೆದುಕೊಂಡು ಹೋದರು. ಸಮಾಜದಲ್ಲಿ ಮೇಲು-ಕೀಳು ಎಂಬ ಬೇಧಭಾವ ಹೋಗಲಾಡಿಸಲು ಮಹಾನ್ ಪುರುಷರು ಶ್ರಮಿಸಿದ್ದಾರೆ. ಇಲ್ಲಿನ ಮಹಾರಾಜ ಮಠದ ಸಿದ್ದರಾಮೇಶ್ವರರು ಭಾವಸಾರ ಮಹಾರಾಜರಿಂದ ದೀಕ್ಷೆ ಪಡೆದಿದ್ದು, ಅಧ್ಯಾತ್ಮದಲ್ಲಿ ಸಾಧನೆ ಮಾಡಿ ಅಪಾರ ಶಿಷ್ಯರಿಗೆ ಬೋಧನೆ ಮಾಡಿದ್ದಾರೆ ಎಂದು ವಿವರಿಸಿದರು.ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಾವಯವ ಕೃಷಿ, ಗೋ ಸಾಕಣೆ ಸೇರಿದಂತೆ ಅನೇಕ ರಂಗಗಳಲ್ಲಿ ಕನ್ಹೇರಿ ಪೂಜ್ಯರ ಮಾರ್ಗದರ್ಶನ ತುಂಬ ಅಗತ್ಯವಿದೆ. ಇಡೀ ದೇಶ ಇಂತಹ ಪೂಜ್ಯರನ್ನು ಪಡೆದಿರುವುದು ಪುಣ್ಯ. ಮಹಾತ್ಮ ಬಸವೇಶ್ವರರರು ಜಗತ್ತಿಗೆ ಕಾಯಕ ತತ್ವ, ದಾಸೋಹ ತತ್ವ, ಅನುಭಾವ ತತ್ವ ನೀಡಿದರು. ಈ ಪರಂಪರೆಯನ್ನು ವಿಜಯಪುರದ ಸಿದ್ದೇಶ್ವರ ಶ್ರೀಗಳು ನಡೆಸಿಕೊಂಡು ಹೋಗುವ ಮೂಲಕ ಅವರು ಎರಡನೇ ಬಸವೇಶ್ವರರು ಎನಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಮುಪ್ಪಿನ ಕಾಡಸಿದೇಶ್ವರ ಸ್ವಾಮೀಜಿ, ಶಂಕರನಾಂದ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಗಿರೀಶಾನಂದ ಸ್ವಾಮೀಜಿ, ಹರ್ಷಾನಂದ ಸ್ವಾಮೀಜಿ, ಅಭಯಾನಂದ ಸ್ವಾಮೀಜಿ ಮಾತನಾಡಿದರು. ಸತ್ಸಂಗ ಕಾರ್ಯಕ್ರಮದಲ್ಲಿ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಸಂಗಯ್ಯ ಕಾಳಹಸ್ತೇಶ್ವರಮಠ, ಬಸವರಾಜ ನಾಯ್ಕೋಡಿ, ವಿನುತ ಕಲ್ಲೂರ, ಬಸವರಾಜ ಗಚ್ಚಿನವರ, ಶಿವಾನಂದ ತೋಳನೂರ, ಬಸವರಾಜ ಶೆಂಡೆ, ಬಸವರಾಜ ಚಿಂಚೋಳಿ ಮಹಾರಾಷ್ಟ್ರದ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಜನರು ಭಾಗವಹಿಸಿದ್ದರು.
ಸಪ್ತಾಹದಂಗವಾಗಿ ಬೆಳಗ್ಗೆ ಮಹಾರಾಜರ ಮಠದಲ್ಲಿ ವಿಶೇಷ ಪೂಜೆ, ಕಾಕಡಾರತಿ, ಭಜನೆ ಜರುಗಿತು. ಸಂಜೆ ಸಿದ್ದರಾಮೇಶ್ವರ ಮಹಾರಾಜರ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಲ್ಲಕ್ಕಿ ಉತ್ಸವದಲ್ಲಿ ಕನ್ಹೇರಿ ಗುರುಕುಲ ಮಠದ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.