ಕುಷ್ಟಗಿ:ಹಿಂದೂ-ಮುಸ್ಲಿಂರ ನಡುವೆ ಸಾಮರಸ್ಯ ಸಾರುವ ಮೊಹರಂ ಹಬ್ಬವನ್ನು ಮುಸ್ಲಿಂರಿಲ್ಲದ ಊರಿನಲ್ಲಿ ಹಿಂದೂಗಳು ಶ್ರದ್ಧಾ-ಭಕ್ತಿಯಿಂದ ಆಚರಿಸಿಕೊಂಡು ಬರುತ್ತಿದ್ದಾರೆ.ತಾಲೂಕಿನ ಹೆಸರೂರು ಹಾಗೂ ಜಾಲಿಹಾಳ, ರ್‍ಯಾವಣಕಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಹಲವು ದಶಕಗಳಿಂದ ಹಿಂದೂಗಳೇ ಮೊಹರಂ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಆಚರಿಸುತ್ತ ಬಂದಿದ್ದು, ಭಾವೈಕ್ಯದ ಸಂದೇಶ ಸಾರುತ್ತಿದ್ದಾರೆ. ಈ ಮೂರು ಗ್ರಾಮಗಳಿಗೆ ಸಮೀಪವಿರುವ ದೋಟಿಹಾಳದ ಮುಸ್ಲಿಂ ಸಮುದಾಯದ ಕುಟುಂಬಗಳು ಆಗಮಿಸಿ ಮಸೀದಿಯಲ್ಲಿ ಅಲಾಯಿ ದೇವರನ್ನು ಪ್ರತಿಷ್ಠಾಪಿಸಿ ಧಾರ್ಮಿಕ ಆಚರಣೆ ನೆರವೇರಿಸುತ್ತಾರೆ. ಇದಕ್ಕೆ ಸ್ಥಳೀಯ ಹಿಂದೂ ಯುವಕರು, ಹಿರಿಯರು ಸಾಥ್ ನೀಡುತ್ತಾರೆ.ಈ ಮಸೀದಿಯಲ್ಲಿ ಪ್ರತಿಷ್ಠಾಪಿಸಿರುವ ಅಲಾಯಿ ದೇವರಿಗೆ ಹರಕೆ ಹೊತ್ತವರು ಸಕ್ಕರೆ, ಬೆಳ್ಳಿ ತೊಟ್ಟಿಲು, ಛತ್ರಿ, ಕುದುರೆ, ಹೂವಿನಹಾರ, ಬಟ್ಟೆಗಳನ್ನು ಕಾಣಿಕೆ ರೂಪದಲ್ಲಿ ಸಮರ್ಪಿಸುತ್ತಾರೆ. ಮೊಹರಂ ಅಂಗವಾಗಿ ಕೊನೆಯ ದಿನದಂದು ಅಲಾಯಿ ಕುಣಿಯ ಮುಂದೆ ಹಾಗೂ ದೇವರ ವಿಸರ್ಜನೆ ದಾರಿಯಲ್ಲಿ ಗೆಜ್ಜೆ ಕುಣಿತ, ಅಲಾಯಿ ಕುಣಿತ, ವಿವಿಧ ವೇಷ ಹಾಕಿಕೊಂಡು ಸಂಭ್ರಮಿಸುತ್ತಾರೆ.ಹಬ್ಬದ ಹಿಂದಿನ ದಿನವಾದ ಕತ್ತಲ್ ರಾತ್ರಿ ದಿನ ಹೊಸ ಬಿಂದಿಗೆಯಲ್ಲಿ ಬೆಲ್ಲದ ಪಾನಕ, ರೊಟ್ಟಿ, ಸಕ್ಕರೆಯನ್ನು ದೇವರಿಗೆ ನೈವೇದ್ಯ ನೀಡಿ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ. ಮೊಹರಂ ಕೊನೆಯ ದಿನ ನಡೆಯುವ ಅಲಾಯಿದೇವರ ಮೆರವಣಿಗೆಯಲ್ಲಿ ವಾದ್ಯ ಮೇಳ, ಹಲಗಿ ಮೇಳ, ಶಹನಾಯಿ ವಾದನ ಕಳೆಕಟ್ಟುತ್ತವೆ.ಅಲಾಯಿ ದೇವರನ್ನು ಸ್ಥಾಪಿಸಿರುವ ಮಸೀದಿಗೆ ಮುಲ್ಲಾಗಳನ್ನು ಕರೆಸಿ ಪೂಜೆ ಸಲ್ಲಿಸುತ್ತಾರೆ. ಅಲಾಯಿ ದೇವರ ಪೂಜೆ ಹೊರತುಪಡಿಸಿ ಉಳಿದೆಲ್ಲ ಕಾರ್ಯಗಳನ್ನು ಹಿಂದೂಗಳು ಶ್ರದ್ಧಾ-ಭಕ್ತಿಯಿಂದ ಮಾಡುತ್ತಾರೆ.ದೋಟಿಹಾಳದ ಮುಸ್ಲಿಂ ಸಮುದಾಯದವರೊಬ್ಬರನ್ನು ನಮ್ಮೂರಿಗೆ ಕರೆಯಿಸಿ ಅವರ ಮಾರ್ಗದರ್ಶನದಲ್ಲಿ ಐದು ದಿನ ಅಲಾಯಿ ದೇವರ ಪೂಜೆ, ಪುನಸ್ಕಾರ, ಧಾರ್ಮಿಕ ವಿಧಿ-ವಿಧಾನವನ್ನು ಸಂಪ್ರದಾಯಬದ್ಧವಾಗಿ ಮಾಡುತ್ತೇವೆ. ಮೊಹರಂ ಕೊನೆಯ ದಿನ ಅತ್ಯಂತ ವಿಜೃಂಭಣೆಯಿಂದ ಮೆರವಣಿಗೆ ಮಾಡಲಾಗುತ್ತದೆ. ಹಿಂದೂ ಯುವಕರೇ ಅಲಾಯಿ ದೇವರ ಕುದುರೆಗಳಾಗುತ್ತವೆ.ಪ್ರಶಾಂತಕುಮಾರ ಹಿರೇಮಠ ಹೆಸರೂರು ಯುವಕಜಾಲಿಹಾಳ ಹಾಗೂ ರ್‍ಯಾವಣಕಿ ಗ್ರಾಮದಲ್ಲಿ ದೋಟಿಹಾಳ ಮುಸ್ಲಿಂ ಕುಟುಂಬದವರು ಇಲ್ಲಿಗೆ ಬಂದು ಅಲಾಯಿ ದೇವರ ಪೂಜೆ ವಿಧಿವಿಧಾನಗಳನ್ನು ನಡೆಸಿಕೊಡುತ್ತಿದ್ದು ಅವರಿಗೆ ನಾವೆಲ್ಲರೂ ಸಹಕಾರ ನೀಡುವ ಮೂಲಕ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಯಮನೂರ ಅಮರಾವತಿ ಜಾಲಿಹಾಳ ನಿವಾಸಿ.