ಕರ್ನಾಟಕದ ಅದ್ಭುತಗಳಲ್ಲೊಂದಾದ ಹಿರೇಬೆಣಕಲ್ ತಾಣಕ್ಕೆ ವಿದ್ಯಾರ್ಥಿಗಳ ಪ್ರವಾಸ
ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದ ಬೆಟ್ಟಗಳ ಮೇಲಿರುವ ಮಹಾ ಶಿಲಾಯುಗ ಕಾಲದ ಕಲ್ಗೋರಿಗಳು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಪಟ್ಟಿಗೆ ಸೇರುವುದು ನಿಶ್ಚಿತ ಎಂದು ಇತಿಹಾಸ ತಜ್ಞ ಶರಣಪ್ಪ ಉಮಚಗಿ ಹೇಳಿದರು.
ಕುಷ್ಟಗಿ ಪಟ್ಟಣದ ಎಸ್ ವಿ ಸಿ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಆಯೋಜಿಸಿದ್ದ ಐತಿಹಾಸಿಕ ಶೈಕ್ಷಣಿಕ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಸುಮಾರು 4,600 ವರ್ಷಗಳಷ್ಟು ಹಳೆಯದಾದ ಕಲ್ಗೋರಿಗಳು ಹಿರೇ ಬೆಣಕಲ್ ಬೆಟ್ಟದ ಮೇಲೆ ಸಿಕ್ಕಿವೆ. ಇವು ಈಜಿಪ್ಟ್ ದೇಶದ ಪಿರಾಮಿಡ್ ಕಾಲಕ್ಕಿಂತಲೂ ಪುರಾತನವಾದವು. 1934-35ರ ಸುಮಾರಿಗೆ ಸಂಶೋಧಕ ಲಿಯೋನಾರ್ಡೋ ಮನ್ ಕಲ್ಗೋರಿಗಳ ಕುರಿತು ಬೆಳಕು ಚೆಲ್ಲಿದರು. 1999ರ ಸುಮಾರಿಗೆ ಪುರಾತತ್ವ ತಜ್ಞ ಅ. ಸುಂದರ್ ಆಳವಾದ ಅಧ್ಯಯನ ನಡೆಸಿ ಇತಿಹಾಸದಲ್ಲಿ ಹೂತು ಹೋಗಿದ್ದ ಸತ್ಯವನ್ನು ಹೊರ ಜಗತ್ತಿಗೆ ಪರಿಚಯಿಸಿದ್ದಾರೆ. ದೇಶದ ನಾಲ್ಕೈದು ರಾಜ್ಯಗಳಲ್ಲಿ ಕಲ್ಗೋರಿಗಳು ಸಿಕ್ಕಿವೆ. ಆದರೆ ಒಂದೇ ಸ್ಥಳದಲ್ಲಿ ಸುಮಾರು 500 ಕಲ್ಗೋರಿಗಳು ಸಿಕ್ಕಿರುವುದು ಹಿರೇ ಬೆಣಕಲ್ ಗ್ರಾಮದಲ್ಲಿ ಮಾತ್ರ ಎಂದರು.
ಇತ್ತೀಚಿನ ಸಂಶೋಧನೆಗಳ ಪ್ರಕಾರ ತಾವರೆಗೆರೆ ಸುತ್ತಮುತ್ತಲು ಮಹಾ ಶಿಲಾಯುಗ ಕಾಲದ ಸುಮಾರು 4000 ವರ್ಷಗಳಿಗಿಂತಲೂ ಪುರಾತನವಾದ ಅವಶೇಷಗಳು ದೊರಕಿವೆ. ಅವುಗಳ ಕುರಿತು ಸಂಶೋಧನೆ ನಡೆದಿದೆ. ಇದು ತಾವರೆಗೆರೆ ಹಾಗೂ ಕೊಪ್ಪಳಕ್ಕೆ ಅಂತಾರಾಷ್ಟ್ರೀಯ ಮಟ್ಟದ ಹೆಸರನ್ನು ತಂದು ಕೊಡಲಿದೆ.
ಅವರು ವಿದ್ಯಾರ್ಥಿಗಳನ್ನು ಬೆಟ್ಟಕ್ಕೆ ಕರೆದುಕೊಂಡು ಹೋಗಿ ಕಲ್ಗೋರಿಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಗಂಗಾವತಿ ಹಾಗೂ ಬೆಣಕಲ್ ನಾಮಗಳ ಹಿಂದಿನ ಇತಿಹಾಸವನ್ನು ವಿವರಿಸಿ ಹೇಳಿದರು.
ವಿದ್ಯಾರ್ಥಿಗಳ ಪ್ರವಾಸ:ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಘೋಷಣೆ ಮಾಡಿದ ಕರ್ನಾಟಕದ ಏಳು ಅದ್ಬುತಗಳಲ್ಲಿ ಮೊದಲ ಸ್ಥಾನದ ಪಡೆದಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಹಿನ್ನೆಲೆ ಹೊಂದಿರುವ ‘ಹಿರೇಬೆಣಕಲ್ ಶಿಲಾ ಸಮಾಧಿ’ಗಳ ತಾಣಕ್ಕೆ ಈಗ ಶಾಲಾ ವಿದ್ಯಾರ್ಥಿಗಳ ಪ್ರವಾಸ ಆಯೋಜನೆ ಮಾಡಲಾಗುತ್ತಿದೆ.