ಡಿ. ೧ರಿಂದ ಹಿರೇಮಠದ ಜಾತ್ರಾ ಮಹೋತ್ಸವ

KannadaprabhaNewsNetwork | Published : Dec 1, 2023 12:45 AM

ಸಾರಾಂಶ

ನರೇಗಲ್ಲ ಪಟ್ಟಣದ ಹಿರೇಮಠದ ಜಾತ್ರಾ ಮಹೋತ್ಸವ ಡಿ. ೧ರಿಂದ ೧೧ರ ವರೆಗೆ ಜರುಗಲಿದೆ ಎಂದು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು. ಜಾತ್ರಾ ಮಹೋತ್ಸವದ ನಿಮಿತ್ತ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಡಿ. ೧ರಿಂದ ೯ರ ವರೆಗೆ ತಾವು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಪುರಾಣ ಹೇಳುವುದಾಗಿ ತಿಳಿಸಿದರು. ನಿತ್ಯವೂ ಸಿದ್ಧಾಂತ ಶಿಖಾಮಣಿಯ ಪ್ರವಚನವಿದ್ದು, ಇದನ್ನು ಈ ಸಾರಿ ಶ್ರೀಮಠದ ಭಕ್ತರಿಂದಲೆ ಹೇಳಿಸುವ ನೂತನ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ನರೇಗಲ್ಲ: ಪಟ್ಟಣದ ಹಿರೇಮಠದ ಜಾತ್ರಾ ಮಹೋತ್ಸವ ಡಿ. ೧ರಿಂದ ೧೧ರ ವರೆಗೆ ಜರುಗಲಿದೆ ಎಂದು ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.

ಸ್ಥಳೀಯ ಹಿರೇಮಠದಲ್ಲಿ ನಡೆದ ಭಕ್ತರ ಸಭೆಯಲ್ಲಿ ಅವರು ಜಾತ್ರಾ ಮಹೋತ್ಸವದ ವಿವರಗಳನ್ನು ನೀಡಿದರು.

ಜಾತ್ರಾ ಮಹೋತ್ಸವದ ನಿಮಿತ್ತ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಡಿ. ೧ರಿಂದ ೯ರ ವರೆಗೆ ತಾವು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನ ಪುರಾಣ ಹೇಳುವುದಾಗಿ ತಿಳಿಸಿದರು. ನಿತ್ಯವೂ ಸಿದ್ಧಾಂತ ಶಿಖಾಮಣಿಯ ಪ್ರವಚನವಿದ್ದು, ಇದನ್ನು ಈ ಸಾರಿ ಶ್ರೀಮಠದ ಭಕ್ತರಿಂದಲೆ ಹೇಳಿಸುವ ನೂತನ ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಡಿ. ೧ರಂದು ಶಾಸಕ ಜಿ.ಎಸ್. ಪಾಟೀಲ ಜಾತ್ರೆ ಉದ್ಘಾಟಿಸುವರು. ಡಿ. ೨ರಂದು ಮುಖ್ಯ ಶಿಕ್ಷಕಿ ಎನ್.ಎಸ್. ಹಿರೇಮಠ ಅವರಿಂದ ಸಿದ್ಧಾಂತ ಶಿಖಾಮಣಿ ಗ್ರಂಥ ಪರಿಚಯ ಜರುಗಲಿದೆ. ಡಿ. ೩ರಂದು ಶರಣ ಸ್ಥಲದ ಬಗ್ಗೆ ನಿವೃತ್ತ ಶಿಕ್ಷಕ ಎಂ.ಎಸ್. ದಢೇಸೂರಮಠ ಉಪನ್ಯಾಸ ನೀಡುವರು. ಡಿ. ೪ರಂದು ತಾಮಸ ನಿರಸನ ಸ್ಥಲದ ಬಗ್ಗೆ ನಿವೃತ್ತ ಶಿಕ್ಷಕ ಎಂ.ಎ. ಹಿರೆವಡೆಯರ ಉಪನ್ಯಾಸ ನೀಡುವರು. ಚಳಗೇರಿಯ ಶ್ರೀ ವೀರಸಂಗಮೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.

ಡಿ. ೫ರಂದು ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳದ ವಾರ್ಷಿಕೋತ್ಸವದ ಅಂಗವಾಗಿ ಮಹಿಳಾ ಗೋಷ್ಠಿ ಜರುಗಲಿದೆ. ವಿಶೇಷ ಉಪನ್ಯಾಸಕರಾಗಿ ಖ್ಯಾತ ಅಂಕಣಗಾರ್ತಿ, ವಾಗ್ಮಿ ಮತ್ತು ಆಧ್ಯಾತ್ಮ ಚಿಂತಕಿ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ ಆಗಮಿಸಲಿದ್ದಾರೆ. ಮಹಿಳಾ ಮಂಡಳದ ಅಧ್ಯಕ್ಷೆ ಕಸ್ತೂರಿಬಾಯಿ ಧನ್ನೂರ ಅಧ್ಯಕ್ಷತೆ ವಹಿಸುವರು.

ಡಿ. ೬ರಂದು ಡಯಟ್‌ನ ಹಿರಿಯ ಉಪನ್ಯಾಸಕ ಕಾಶೀನಾಥ ಸಾಲಿಮಠ ನಿರ್ದೇಶ ಸ್ಥಲದ ಬಗ್ಗೆ ಉಪನ್ಯಾಸ ನೀಡುವರು. ಅಸೂಟಿ ಹಿರೇಮಠದ ರೇವಣಸಿದ್ಧ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ವಿಜಯಪುರದ ನಿವೃತ್ತ ಶಿಕ್ಷಣಾಧಿಕಾರಿ ರುದ್ರಪ್ಪ ತೋಟದ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಡಿ. ೭ರಂದು ಮಕ್ಕಳ ಹಬ್ಬದ ಆಚರಣೆ ನಡೆಯಲಿದ್ದು, ನೀರಲಗಿಯ ಸರ್ಕಾರಿ ಪ್ರೌಢಶಾಲೆಯ ಮಕ್ಕಳು ಶಿಕ್ಷಕ ಪಿ.ಟಿ. ಬೈಲಪ್ಪನವರ ರಚಿಸಿದ ಸಿರಿಧಾನ್ಯ ರಾಮಾಯಣ ಅರ್ಥಾತ್ ತೃಣ ಧಾನ್ಯಾಯಣ ವಿಜ್ಞಾನ ಪೂರಕ ದೊಡ್ಡಾಟದ ಪ್ರದರ್ಶನ ನಡೆಯುವುದು. ಗದಗ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ. ರಡ್ಡೇರ, ಡಯಟ್‌ನ ಪ್ರಾಚಾರ್ಯ ಜಿ.ಎಲ್. ಬಾರಾಟಕ್ಕೆ, ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎನ್. ಹರುಳಿ ಪಾಲ್ಗೊಳ್ಳಲಿದ್ದಾರೆ. ಡಿ. ೮ರಂದು ಯೋಧರ ಸ್ಮರಣೆ ಕಾರ್ಯಕ್ರಮ ಜರುಗಲಿದ್ದು, ನರೇಗಲ್ಲದಲ್ಲಿನ ನಿವೃತ್ತ ಯೋಧರಿಗೆ ಗೌರವ ಸಮರ್ಪಣೆ ನಡೆಯಲಿದೆ. ನಿವೃತ್ತ ಪ್ರಾಚಾರ್ಯ ದೊಡ್ಡಯ್ಯ ಅರವಟಗಿಮಠ ಶೀಲ ಸಂಪಾದನ ಸ್ಥಲದ ಬಗ್ಗೆ ಉಪನ್ಯಾಸ ನೀಡವರು. ಡಿ. ೯ರಂದು ಪುರಾಣ ಪ್ರವಚನದ ಮಂಗಲ ಕಾರ್ಯ ಜರುಗಲಿದೆ. ಕೊತಬಾಳ ಅಂಕಲಿ ಮಠದ ಶ್ರೀ ಗಂಗಾಧರ ಸ್ವಾಮಿಗಳು, ಜಿಗೇರಿಯ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯರು, ನಿಡಗುಂದಿಕೊಪ್ಪದ ಶ್ರೀ ಅಭಿನವ ಚನ್ನಬಸವ ಸ್ವಾಮಿಗಳು, ನರೇಗಲ್ಲ ದರಗಾದ ಹಜರತ್ ಸೈಯದ್ ಹುಸೇನ ಮಂಜೂರ ಶಾವಲಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.

ಡಿ. 10ರಂದು ಬೀಚಿ ಬಳಗದ ದಶಮಾನೋತ್ಸವ ದಶಮಾನ ಸಂಭ್ರಮ ಜರುಗಲಿದ್ದು, ನಾಡಿನ ಖ್ಯಾತನಾಮ ನಗೆ ಭಾಷಣಕಾರ ಹಿರೇಮಗಳೂರು ಕಣ್ಣನ್, ಗಂಗಾವತಿಯ ಬೀಚಿ ಬಿ. ಪ್ರಾಣೇಶ್, ಬಸವರಾಜ ಮಹಾಮನೆ, ನರಸಿಂಹ ಜೋಷಿ, ಅನಿಲ್ ವೈದ್ಯ, ನಾಗಶ್ರೀ ತ್ಯಾಗರಾಜನ್ ಭಾಗವಹಿಸಲಿದ್ದಾರೆ. ದಶಮಾನೋತ್ಸವದ ಸ್ಮರಣ ಸಂಚಿಕೆಯೂ ಈ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎಂದರು.

ಡಿ. ೧೧ರಂದು ಬೆಳಗ್ಗೆ ೬ಕ್ಕೆ ಶ್ರೀ ಮಳೆ ಮಲ್ಲೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರುತಿ ಜರುಗಲಿದೆ. ಬೆಳಗ್ಗೆ ೮ಕ್ಕೆ ಗುರುಗಳ ಭಾವಚಿತ್ರ ಹಾಗೂ ವೀರಶೈವ ಲಿಂಗಾಯತ ಧರ್ಮ ಗ್ರಂಥಗಳ ಪಲ್ಲಕ್ಕಿ ಉತ್ಸವವು ನರೇಗಲ್ಲದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ಅನ್ನಪೂರ್ಣೇಶ್ವರಿ ಮಹಿಳಾ ಮಂಡಳದ ಸದಸ್ಯರು, ಶ್ರೀ ರೇಣುಕಾಚಾರ್ಯ ಪ್ರಾಥಮಿಕ ಶಾಲೆಯ ಗುರುಮಾತೆಯರಿಂದ ನಿತ್ಯವೂ ಭಕ್ತಿ ಸಂಗೀತ, ಧರ್ಮ ಗ್ರಂಥ ಪಠಣ ನಡೆಯಲಿದೆ. ಅನ್ನಪೂಣೇಶ್ವರಿ ದೇವಿಗೆ ಕುಂಕುಮಾರ್ಚನೆ, ಉಡಿ ತುಂಬುವ ಕಾರ್ಯಕ್ರಮ, ಡಿ. ೧೦ರಂದು ಬೆಳಗ್ಗೆ ೭ಕ್ಕೆ ಉಚಿತ ಅಯ್ಯಾಚಾರ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಲಿವೆ ಎಂದರು.

Share this article