ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಯಡಿ ಹಿರಿಯೂರು ತಾಲೂಕಿಗೆ ಸಿಂಹ ಪಾಲು ದೊರೆತಿದೆ. ಯೋಜನಾ ವ್ಯಾಪ್ತಿಯ 4 ಜಿಲ್ಲೆಗಳಲ್ಲಿ ಹಿರಿಯೂರು ತಾಲೂಕಿನ ಅತಿ ಹೆಚ್ಚು ಪ್ರದೇಶ ಅಂದರೆ 67,034 ಹೆಕ್ಟೇರ್ ನಷ್ಟು ಭೂಮಿಗೆ ಹನಿ ನೀರಾವರಿ ಪದ್ದತಿ ಅಳವಡಿಸಲಾಗಿದೆ. ಕಾಮಗಾರಿ ಪೂರ್ಣಗೊಂಡಲ್ಲಿ ಭವಿಷ್ಯದಲ್ಲಿ ಭದ್ರೆ ನೀರು ಪಡೆಯುವಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳಲಿದೆ. ಚಿತ್ರದುರ್ಗ ಜಿಲ್ಲೆಯ 6 ತಾಲೂಕುಗಳಿಗೆ ಮೀಸಲಾದ ನೀರಿನಲ್ಲಿ ಹಿರಿಯೂರು ತಾಲೂಕು ಒಂದಕ್ಕೆಶೇ.50ರಷ್ಟು ಪಾಲು ದೊರೆತಿದೆ.
ಭದ್ರಾ ಮೇಲ್ದಂಡೆಯಡಿ ಹಿರಿಯೂರಿನ ವಿವಿ ಸಾಗರ ಜಲಾಶಯಕ್ಕೆ 2 ಟಿಎಂಸಿ ಯಷ್ಟು ನೀರು ಮೀಸಲಾಗಿದ್ದು ನೇರವಾಗಿ ಲಿಫ್ಟ್ ಮೂಲಕ ಹರಿಸಲಾಗುತ್ತಿದೆ. ಈ ಮೊದಲು 5 ಟಿಎಂಸಿ ನೀರು ಬೇಕು, ಬಸವರಾಜ ಬೊಮ್ಮಾಯಿ ಅವರು ಜಲ ಸಂಪನ್ಮೂಲ ಸಚಿವರಾಗಿದ್ದಾಗ 5 ಟಿಎಂಸಿ ನೀರು ಅಲೋಕೇಷನ್ ಮಾಡಿದ್ದರು ಎಂದು ಹಿರಿಯೂರು ರೈತರು ಪಟ್ಟು ಹಿಡಿದಿದ್ದರು. ನಂತರದ ಹೋರಾಟಗಳಲ್ಲಿ ಎಲ್ಲಿಂದಲಾದರೂ ಕೊಡಿ, ನಮಗೆ 10 ಟಿಎಂಸಿ ನೀರು ಬೇಕೆಬೇಕೆಂದು ಹೊಸ ರಾಗ ತೆಗೆದಿದ್ದರು. ಇದೀಗ ವಿವಿ ಸಾಗರ ಜಲಾಶಯದಿಂದ ಗಾಯತ್ರಿ ಜಲಾಶಯಕ್ಕೆ ಹಾಗೂ 13 ಕೆರೆಗಳಿಗೆ 0.50 ಟಿಎಂಸಿ ನೀರು ಬೇಕೆಂಬ ಕಡೇ ಅಸ್ತ್ರ ಪ್ರಯೋಗಿಸಿ ಧರಣಿ ಕುಳಿತಿದ್ದಾರೆ.ಭದ್ರಾ ಮೇಲ್ದಂಡೆಯಲ್ಲಿ ಸಿಂಹ ಪಾಲು ನೀರು ದೊರೆತಿದ್ದರೂ ಮತ್ತಷ್ಟು ನೀರಿನ ಬೇಡಿಕೆ ಮಂಡಿಸಿರುವ ಹಿರಿಯೂರು ರೈತರ ನಡೆ ಸಹಜವಾಗಿಯೇ ಇತರೆ ತಾಲೂಕಿನ ರೈತರು ಹಾಗೂ ಜನ ಪ್ರತಿನಿಧಿಗಳಲ್ಲಿ ಆಕ್ರೋಶ ತರಿಸಿದೆ. ನೀವು ಪಾಯಸ ಉಣ್ಣುತ್ತಿದ್ದೀರಾ, ಗಂಜಿ ಕುಡಿಯುವರತ್ತ ನೋಡಿ ಎಂಬ ಮನುಷ್ಯತ್ವದ ಬೋಧನೆಯನ್ನು ಚಳ್ಳಕೆರೆ ರೈತರು ಈಗಾಗಲೇ ಹಿರಿಯೂರಿನತ್ತ ರವಾನಿಸಿದ್ದಾರೆ. ಚಳ್ಳಕೆರೆ ಹಾಗೂ ಹೊಸದುರ್ಗ ಶಾಸಕರು ಕೂಡಾ ಗರಂ ಆಗಿದ್ದಾರೆ.
*1,97,509 ಎಕರೆ ನೀರಾವರಿ:ಭದ್ರಾ ಮೇಲ್ದಂಡೆಯಡಿ ಹಿರಿಯೂರು ತಾಲೂಕಿನಲ್ಲಿ ಕೈಗೆತ್ತಿಕೊಳ್ಳಲಾದ ನೀರಾವರಿ ಪ್ರಮಾಣವನ್ನು ಜನಪ್ರತಿನಿಧಿಗಳು ಅಷ್ಟಾಗಿ ಎಲ್ಲಿಯೂ ಕೂಡ ಬಹಿರಂಗವಾಗಿ ಪ್ರಸ್ತಾಪಿಸುತ್ತಿಲ್ಲ. ಕಾಮಗಾರಿ ಪೂರ್ಣಗೊಂಡಲ್ಲಿ ಹಿರಿಯೂರು ತಾಲೂಕು ಬರೋಬ್ಬರಿ 1,97,509 ಎಕರೆ ನೀರಾವರಿ ಸೌಲಭ್ಯ (ಜಲಾಶಯ ಮೂಲ) ಪಡೆದುಕೊಂಡಂತಾಗುತ್ತದೆ. ಚಿತ್ರದುರ್ಗ ಜಿಲ್ಲೆಯ ಯಾವ ತಾಲೂಕುಗಳೂ ಇಂತಹ ಸೌಭಾಗ್ಯ ಪಡೆದಿಲ್ಲ.
ಹಾಲಿ ವಿವಿ ಸಾಗರದಿಂದ 12 ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದ್ದು ಪ್ರತಿವರ್ಷ ಜಲಾಶಯದಿಂದ ಅಚ್ಚು ಕಟ್ಟುದಾರರಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಗಾಯತ್ರಿ ಜಲಾಶಯದಲ್ಲೂ 900 ಹೆಕ್ಟೇರ್‌ಗೆ ನೀರಾವರಿ ಸೌಲಭ್ಯವಿದೆ. ಭದ್ರಾ ಮೇಲ್ದಂಡೆಯಡಿ 67,031 ಹೆಕ್ಟೇರ್ ಗೆ ಹನಿ ನೀರಾವರಿ ಸೌಲಭ್ಯ ಕಲ್ಬಿಸಲಾಗುತ್ತಿದೆ. ಈ ಮೂರು ಸೇರಿದರೆ ಒಟ್ಟು 79,931 ಹೆಕ್ಟೇರ್ ಜಮೀನು ನೀರಾವರಿಗೆ ಒಳಪಡಲಿದೆ. ಅಂದರೆ ಒಂದು ಹೆಕ್ಟೇರ್ ಗೆ 2.471 ಎಕರೆ ಭೂಮಿ ಅಂದಾಜಿಸಲಾಗಿದ್ದು 79,931 ಹೆಕ್ಟೇರ್ ಜಮೀನನ್ನು ಎಕರೆಯಲ್ಲಿ ಪರಿವರ್ತಿಸಿದರೆ 1,97,509 ಎಕರೆಯಾಗುತ್ತದೆ. ಇದಲ್ಲದೇ 32 ಕೆರೆಗಳ ತುಂಬಿಸಿ ಅಂತರ್ಜಲ ಹೆಚ್ಚಳಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.ಭದ್ರಾ ಮೇಲ್ದಂಡೆಯಲ್ಲಿ ಲಭ್ಯವಾಗುವ ನೀರಿನಲ್ಲಿಯೂ ಹಿರಿಯೂರು ತಾಲೂಕು ಸಿಂಪಪಾಲು ಪಡೆದಿದೆ. ತುಂಗಾ ಮತ್ತು ಭದ್ರಾದಿಂದ ಸೇರಿ ಅಲೋಕೇಷನ್ ಆಗಿರುವ 29.90 ಟಿಎಂಸಿ ನೀರಿನಲ್ಲಿ ಚಿತ್ರದುರ್ಗ ಜಿಲ್ಲೆಯ 6 ತಾಲೂಕುಗಳಿಗೆ ಸಣ್ಣ ನೀರಾವರಿಗೆ 15.86 ಟಿಎಂಸಿ, ಕೆರೆ ತುಂಬಿಸಲು 2.60 ಟಿಎಂಸಿ ಸೇರಿ ಒಟ್ಟು 18.46 ಟಿಎಂಸಿ ನೀರು ಮೀಸಲಿಡಲಾಗಿದೆ.
ಹಿರಿಯೂರು ತಾಲೂಕಿನ 67031 ಹೆಕ್ಟೇರ್‌ಗೆ ಹನಿ ನೀರಾವರಿ ಕಲ್ಪಿಸಲು 6.83 ಟಿಎಂಸಿ, ವಿವಿ ಸಾಗರ ಜಲಾಶಯಕ್ಕೆ 2 ಟಿಎಂಸಿ ಹಾಗೂ 32 ಕೆರೆ ತುಂಬಿಸಲು 0.30 ಟಿಎಂಸಿ ಸೇರಿ ಒಟ್ಟು 9.13 ಟಿಎಂಸಿಯಷ್ಟು ನೀರು ಹಿರಿಯೂರಿಗೆ ಮೀಸಲಿದೆ. ಅಂದರೆ ಚಿತ್ರದುರ್ಗ ಜಿಲ್ಲೆಗೆ ಮೀಸಲಾದ 18.46 ಟಿಎಂಸಿಯಲ್ಲಿ ಹಿರಿಯೂರು ತಾಲೂಕಿಗೆ 9.13 ಟಿಎಂಸಿ ಪೂರೈಕೆಯಾದರೆ ಶೇ.50 ರಷ್ಟು ಪಾಲು ಪಡೆದಂತಾಗುತ್ತದೆ. ಈ ಸತ್ಯವನ್ನು ಜಿಲ್ಲೆಯ ಜನರ ಮುಂದೆ ಇಡಲು ಇದುವರೆಗೂ ಜನ ಪ್ರತಿನಿಧಿಗಳು ಪ್ರಯತ್ನಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಇಷ್ಟೆಲ್ಲದರ ನಡುವೆ ಗಾಯತ್ರಿ ಜಲಾಶಯ ಸೇರಿದಂತೆ 13 ಕೆರೆಗಳಿಗ ಅರ್ಧ ಟಿಎಂಸಿ ನೀರು ಒಯ್ಯಲು ಸರ್ಕಾರದ ಮಟ್ಟದಲ್ಲಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.ಹಿರಿಯೂರು ತಾಲೂಕಿಗೆ ಒಳಪಡುವ ನೀರಾವರಿ ಪ್ರದೇಶ
ಭದ್ರಾ ಮೇಲ್ದಂಡೆ ಮೈಕ್ರೋ ಇರಿಗೇಷನ್: 67,034 ಹೆಕ್ಟೇರ್
ವಿವಿ ಸಾಗರದ ಹಾಲಿ ಅಚ್ಚುಕಟ್ಟು: 12,000 ಹೆಕ್ಟೇರ್ಗಾಯತ್ರಿ ಜಲಾಶಯದ ನೀರಾವರಿ: 900 ಹೆಕ್ಟೇರ್
ಒಟ್ಟು: 79,931 ಹೆಕ್ಟೇರ್ನೀರು ಹಂಚಿಕೆ
ಮೈಕ್ರೋ ಇರಿಗೇಷನ್: 6.83 ಟಿಎಂಸಿ
ವಿವಿ ಸಾಗರ ಅಲೋಕೇಷನ್:2.00 ಟಿಎಂಸಿ32 ಕೆರೆಗಳ ತುಂಬಿಸಲು: 0.30 ಟಿಎಂಸಿ
ವಿವಿ ಸಾಗರ ಜಲಾಶಯ(ಮೂಲ): 5.25 ಟಿಎಂಸಿಗಾಯತ್ರಿ ಜಲಾಶಯ (ಮೂಲ): 0.15 ಟಿಎಂಸಿ
ಒಟ್ಟು: 14.53 ಟಿಎಂಸಿ