ಕನ್ನಡಪ್ರಭ ವಾರ್ತೆ ಮಂಗಳೂರುಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸೇನೆ ಹಾಗೂ ಉಗ್ರರ ನಡುವೆ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ 63ನೇ ರಾಷ್ಟ್ರೀಯ ರೈಫಲ್ಸ್ ಕ್ಯಾಪ್ಟನ್, ದ.ಕ. ಮೂಲದ ಎಂ.ವಿ.ಪ್ರಾಂಜಲ್ (29) ಶಾಲಾ ದಿನಗಳಲ್ಲಿ ಎಲ್ಲರ ನೆಚ್ಚಿನ ವಿದ್ಯಾರ್ಥಿಯಾಗಿದ್ದ. ಮಂಗಳೂರಿನ ಎಂಆರ್‌ಪಿಎಲ್‌ನ ಡೆಲ್ಲಿ ಸ್ಕೂಲ್‌ನಲ್ಲಿ ಎಲ್‌ಕೆಜಿಯಿಂದ ಎಸ್ಎಸ್ಎಲ್‌ಸಿವರೆಗೆ ವಿದ್ಯಾಭ್ಯಾಸ ಪಡೆದ ಬಳಿಕ ಪ್ರಾಂಜಲ್ ನಗರದ ಮಹೇಶ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು. ಬಳಿಕ ಮಧ್ಯಪ್ರದೇಶದ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್ ಶಿಕ್ಷಣ ಪಡೆದು ಸೇನೆಗೆ ಸೇರಿದ್ದರು.ಎಂ.ವಿ.ಪ್ರಾಂಜಲ್‌ನ ಎಂಆರ್‌ಪಿಎಲ್ ಡೆಲ್ಲಿ ಸ್ಕೂಲ್ ಶಿಕ್ಷಕಿ ಕೃಪಾ ಸಂಜೀವ್ ಈ ಕುರಿತು ಮಾತನಾಡಿ, ಅವನು ಶಾಲೆಯಲ್ಲಿದ್ದಾಗಲೇ ಪರ್ಫೆಕ್ಟ್ ಸ್ಟೂಡೆಂಟ್ ಆಗಿದ್ದ. ಆದ್ದರಿಂದ ಎಲ್ಲ ಶಿಕ್ಷಕರ ಮೆಚ್ಚಿನ ವಿದ್ಯಾರ್ಥಿಯಾಗಿದ್ದ. ಮೊದಲು ಆತನ ಸಾವಿನ ವಿಚಾರ ಕಿವಿಗೆ ಬಿದ್ದಾಗ ಈ ಘಟನೆಯನ್ನು ಅರಗಿಸಲು ಸಾಧ್ಯವಾಗಿಲ್ಲ. ನಮಗೆ ಈ ದುಃಖದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ದೇಶಕ್ಕಾಗಿ ಅವನು ಮಾಡಿರುವ ತ್ಯಾಗಕ್ಕೆ ಸೆಲ್ಯೂಟ್ ಮಾಡುತ್ತೇವೆ ಎಂದರು. ಪ್ರಾಂಜಲ್ . ರಾಷ್ಟ್ರಪತಿ ಸ್ಕೌಟ್ ಆಗಿ ನಾಯಕತ್ವ ಹೊಂದಿದ್ದ. ಆರನೇ ತರಗತಿಯಿಂದಲೇ ಸೇನೆಗೆ ಸೇರಬೇಕು ಎಂದು ತಯಾರಿ ಮಾಡಿದ್ದ. ಒಂದು ತಿಂಗಳ ಹಿಂದೆಯಷ್ಟೇ ಶಾಲೆಗೆ ಬಂದು ನಮ್ಮನ್ನೆಲ್ಲಾ ಮಾತನಾಡಿಸಿದ್ದ ಎಂದರು. ಶಾಲೆಗೆ ರಜೆ: ಬುಧವಾರ ನಮ್ಮ ಶಾಲೆಯಲ್ಲಿ ಕ್ರೀಡಾ ದಿನ ಇತ್ತು. ಆದರೆ ಪ್ರಾಂಜಲ್ ಬಲಿದಾನದ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಕೊಟ್ಟಿದ್ದೇವೆ ಎಂದು ಕೃಪಾ ಸಂಜೀವ್ ಹೇಳಿದರು.ಪ್ರಾಂಜಲ್ ಅವರು ಎರಡು ವರ್ಷ ಹಿಂದೆ ವಿವಾಹವಾಗಿದ್ದು, ಅವರ ಪತ್ನಿ ಅದಿತಿ ಅವರು ಚೆನ್ನೈನಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುತ್ತಿದ್ದಾರೆ. ಪ್ರಾಂಜಲ್ ತಂದೆ ವೆಂಕಟೇಶ್ ಎಂಆರ್‌ಪಿಎಲ್ ಎಂಡಿಯಾಗಿ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಾಂಜಲ್ ಅವರು ಪ್ರಸ್ತುತ ಕ್ಯಾಪ್ಟನ್ ಹುದ್ದೆಯಿಂದ ಮೇಜರ್ ಹುದ್ದೆಗೆ ಪದೋನ್ನತಿಗೆ ಕಾಯುತ್ತಿರುವಾಗಲೇ ಬಲಿದಾನದ ಸಿಡಿಲಾಘಾತ ಎದುರಾಗಿದೆ.