ಇತಿಹಾಸ ಬಲ್ಲವರೇ ಇತಿಹಾಸ ಸೃಷ್ಟಿ

KannadaprabhaNewsNetwork |  
Published : Dec 19, 2023, 01:45 AM IST
ನಿಜಗುಣಾನಂದ ಶ್ರೀಗಳು ಮಾತನಾಡಿದರು. | Kannada Prabha

ಸಾರಾಂಶ

ನಾಡಿನ ಮೂಲೆ ಮೂಲೆಯಲ್ಲೂ ಇತಿಹಾಸಕಾರರಿದ್ದಾರೆ. ಅವರೆಲ್ಲರೂ ನಿಸ್ವಾರ್ಥದಿಂದ ಸಮಾಜ ಹಾಗೂ ಧರ್ಮದ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಅಂಥವರನ್ನು ನಾವು ನಿತ್ಯ ನೆನೆಯಲೇಬೇಕು. ಇತಿಹಾಸ ಬಲ್ಲವರಿಂದಲೇ ಇತಿಹಾಸ ರಚನೆ ಮಾಡಲು ಸಾಧ್ಯ ಎಂದು ಬೈಲೂರ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು

- ಮರೆಯಲಾಗದ ಮಹಾನುಭಾವರು ಚಿಂತನ ಮಾಲಿಕೆಯಲ್ಲಿ ನಿಜಗುಣಾನಂದ ಶ್ರೀಕನ್ನಡಪ್ರಭ ವಾರ್ತೆ ಧಾರವಾಡ

ನಾಡಿನ ಮೂಲೆ ಮೂಲೆಯಲ್ಲೂ ಇತಿಹಾಸಕಾರರಿದ್ದಾರೆ. ಅವರೆಲ್ಲರೂ ನಿಸ್ವಾರ್ಥದಿಂದ ಸಮಾಜ ಹಾಗೂ ಧರ್ಮದ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಅಂಥವರನ್ನು ನಾವು ನಿತ್ಯ ನೆನೆಯಲೇಬೇಕು. ಇತಿಹಾಸ ಬಲ್ಲವರಿಂದಲೇ ಇತಿಹಾಸ ರಚನೆ ಮಾಡಲು ಸಾಧ್ಯ ಎಂದು ಬೈಲೂರ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಸರ್.ಸಿದ್ದಪ್ಪ ಕಂಬಳಿ ಪ್ರತಿಷ್ಠಾನ ವತಿಯಿಂದ ಏರ್ಪಡಿಸಿದ್ದ ಮರೆಯಲಾಗದ ಮಹಾನುಭಾವರು ಚಿಂತನ ಮಾಲಿಕೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ರಾವಬಹದ್ದೂರ ವೈ. ಮಹಾಬಳೇಶ್ವರಪ್ಪನವರ ಕುರಿತು ಮಾತನಾಡಿದರು.

ಹಿಂದಿನ ಕಾಲದಲ್ಲಿ ಜನರು ತಮಗೋಸ್ಕರ ಎಂದೂ ಜೀವ ಸವೆಸಲಿಲ್ಲ. ಫ.ಗು. ಹಳಕಟ್ಟಿ, ಮೃತ್ಯುಂಜಯಪ್ಪಗಳು, ಹರ್ಡೇಕರ ಮಂಜಪ್ಪ, ಲಿಂಗಾನಂದ ಸ್ವಾಮೀಜಿ, ಜೋಳದರಾಶಿ ಸಿದ್ದನಗೌಡರ, ಶಿರಸಂಗಿ ಲಿಂಗರಾಜರು ಹೀಗೆ ಅನೇಕ ಮಹಾತ್ಮರು ತಮ್ಮ ಹೊಲ, ಮನೆ, ಮಾರಾಟ ಮಾಡಿ ಸಮಾಜ ಸೇವೆ ಮಾಡಿದ್ದಾರೆ. ಶಿಕ್ಷಣ, ಅನ್ನ ದಾಸೋಹ ಮಾಡಲು ಕೋಟಿಗಟ್ಟಲೆ ಹಣ ಖರ್ಚು ಮಾಡಿ ಲಕ್ಷಾಂತರ ಬಡ ಮಕ್ಕಳಿಗೆ ದಾರಿದೀಪವಾದರು. ಜಾತಿ, ಮತ ಪಂಥ ಎನ್ನದೆ ಮಕ್ಕಳಿಗೆ ಶಿಕ್ಷಣ ಕೊಡಿಸಿ ಅವರಿಗೆ ಅನ್ನ, ಬಟ್ಟೆ ನೀಡಿ ನಾಡಿಗೆ ಬೆಳಕಾದರು. ಇವರೆಲ್ಲರಲೂ ಇತಿಹಾಸ ರಚನೆಕಾರರು ನಾವು ಇತಿಹಾಸದ ಕಡೆ ಗಮನ ನೀಡಬೇಕು ಎಂದರು.

ಸರ್ಕಾರ ಕೂಡ ಮಹಾತ್ಮರ ಆಯೋಗ ರಚಿಸಿ ಇತಿಹಾಸ ನಶಿಸಿ ಹೋಗದಂತೆ ಮಕ್ಕಳಿಗೆ ಅವರ ಸಂದೇಶವನ್ನು ತಿಳಿಸುವ, ಅದನ್ನು ಪಠ್ಯದಲ್ಲಿ ಅಳವಡಿಸಬೇಕು. ನನ್ನ ಪ್ರವಚನದಲ್ಲಿ ಇತಿಹಾಸಕಾರರ ಕುರಿತು ಅನುಭಾವ ನೀಡುತ್ತೇನೆ ಎಂದು ಹೇಳಿದರು. ಅಲ್ಲದೇ, ಪ್ರವಚನ ಪಿತಾಮಹ ಶ್ರೀ ಲಿಂಗಾನಂದ ಸ್ವಾಮೀಜಿ ಹೆಸರಿನಲ್ಲಿ ದತ್ತಿ ಉಪನ್ಯಾಸ ಇಡಲು ಸರ್ ಸಿದ್ದಪ್ಪ ಕಂಬಳಿ ಪ್ರತಿಷ್ಠಾನಕ್ಕೆ ಒಂದು ಲಕ್ಷ ದೇಣಿಗೆಯನ್ನೂ ಇದೇ ವೇಳೆ ನೀಡಿದರು.

ಡಾ. ಮೃತ್ಯುಂಜಯ ರುಮಾಲೆ ಉಪನ್ಯಾಸ ನೀಡಿದರು. ಶಶಿಧರ ತೋಡಕರ ಅಧ್ಯಕ್ಷತೆ ವಹಿಸಿದ್ದರು. ಅಶೋಕ ನಿಡವಣಿ ಇದ್ದರು. ಶಿವಶರಣ ಕಲಬಶೆಟ್ಟರ ಸ್ವಾಗತಿಸಿದರು. ಬಸವಂತ ತೋಟದ ವಂದಿಸಿದರು. ಕದಳಿ ಮಹಿಳಾ ವೇದಿಕೆಯಿಂದ ವಚನ ಸಂಗೀತ ಜರುಗಿತು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ