ಇತಿಹಾಸ ಭವಿಷ್ಯದ ದಾರಿ ದೀಪ: ದೇವರಾಜ್‌

KannadaprabhaNewsNetwork | Published : Jul 21, 2024 1:23 AM

ಸಾರಾಂಶ

ಚಿಕ್ಕಮಗಳೂರು, ಇತಿಹಾಸವು ಮುಂದಿನ ಪೀಳಿಗೆಗೆ ದಾರಿದೀಪ, ಇತಿಹಾಸವನ್ನು ತಿಳಿಸುವ ಶಾಸನ, ಸ್ಮಾರಕ, ನಾಣ್ಯಗಳಂತ ಆಧಾರ ಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕರ್ನಾಟಕ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ಎ. ದೇವರಾಜ್ ಹೇಳಿದರು.

- ನಮ್ಮ ಊರು - ನಮ್ಮ ಬೇರು ಗ್ರಾಮೀಣ ಪರಂಪರೆ ಸಂಸ್ಕೃತಿಗಳ ಅರಿವು,ವ್ಯಕ್ತಿತ್ವ ವಿಕಸನ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಇತಿಹಾಸವು ಮುಂದಿನ ಪೀಳಿಗೆಗೆ ದಾರಿದೀಪ, ಇತಿಹಾಸವನ್ನು ತಿಳಿಸುವ ಶಾಸನ, ಸ್ಮಾರಕ, ನಾಣ್ಯಗಳಂತ ಆಧಾರ ಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕರ್ನಾಟಕ ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತ ಎ. ದೇವರಾಜ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪುರಾತತ್ವ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ಸಹಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲೆಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ "ನಮ್ಮ ಊರು ನಮ್ಮ ಬೇರು " ಗ್ರಾಮೀಣ ಪರಂಪರೆ ಸಂಸ್ಕೃತಿಗಳ ಅರಿವು ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ನಮ್ಮ ಸಂಸ್ಕೃತಿ ಪರಂಪರೆ ಕಲೆ ಕೇವಲ ಪಠ್ಯಕ್ಕೆ ಸೀಮಿತವಾಗಿರಬಾರದು, ಅವುಗಳನ್ನು ಅರಿತು ರಕ್ಷಿಸುವಲ್ಲಿ ಮುಂದಾಗ ಬೇಕು. ರಾಜ್ಯದಲ್ಲಿ ಒಟ್ಟು 844 ರಕ್ಷಣಾ ಸ್ಮಾರಕಗಳಿವೆ. ಕರ್ನಾಟಕ ರಾಜ್ಯ ದೇಶದಲ್ಲಿ ಅತಿ ಹೆಚ್ಚು ಸ್ಮಾರಕಗಳನ್ನು ಹೊಂದಿರುವ ಎರಡನೇ ರಾಜ್ಯವಾಗಿ ಗುರುತಿಸಿಕೊಂಡಿದೆ. ಇತಿಹಾಸ ತಿಳಿಸುವ ಆಧಾರಗಳನ್ನು ಸಂರಕ್ಷಿಸಲು ಸಂವಿಧಾನ ದಲ್ಲಿ ಕಾಯ್ದೆ ಕಾನೂನುಗಳನ್ನು ರೂಪಿಸಲಾಗಿದೆ ಎಂದರು.

ಕಾನೂನಾತ್ಮಕವಾಗಿ ಅವುಗಳ ರಕ್ಷಣಾ ಕಾರ್ಯದಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು. ಶಾಸನ, ಸ್ಮಾರಕ, ನಾಣ್ಯ ಗಳು, ದೇವಾಲಯಗಳು, ಶಿಲ್ಪ ಕಲೆಗಳಂತ ಆಧಾರಗಳು ಇತಿಹಾಸ ಅಧ್ಯಯನ ಮಾಡಲು ಸಹಕರಿಸುತ್ತವೆ. ಅಂತಹ ಆಧಾರಗಳನ್ನು ಸಂಗ್ರಹಿಸಿ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್ ಕೀರ್ತನಾ ಮಾತನಾಡಿ, ಹಿಂದಿನ ಸಮಾಜಗಳ ಮತ್ತು ಮಾನವ ಜನಾಂಗದ ಅಭಿವೃದ್ಧಿ ಬಗ್ಗೆ ಇನ್ನಷ್ಟು ತಿಳಿಯುವುದು ಅವಶ್ಯಕ. ನಮ್ಮ ನೆಲದ ಇತಿಹಾಸವನ್ನು ಯುವ ಜನತೆಗೆ ಪರಿಚಯಿಸುವುದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ನಮ್ಮ ಊರು ನಮ್ಮ ಬೇರು ಎಂಬ ಕಾರ್ಯಕ್ರಮದಡಿ ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮನಪೂರ್ವಕವಾಗಿ ನಿರ್ವಹಿಸಿದರೆ ಸಂರಕ್ಷಣೆ ಸಾಧ್ಯ ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಮಾತನಾಡಿ, ಪ್ರತಿಯೊಂದು ಊರು ತನ್ನದೇ ಆದ ಇತಿಹಾಸ ಹೊಂದಿರುತ್ತದೆ. ನಮ್ಮ ನೆಲದ ಇತಿಹಾಸ ಅರಿಯುವುದು ಅತ್ಯವಶ್ಯಕ, ಇತಿಹಾಸ ಗತ ಕಾಲದ ಆಗುಹೋಗುಗಳನ್ನು ತಿಳಿದು ಉತ್ತಮ ನಾಗರಿಕ ಸಮಾಜವನ್ನು ರೂಪಿಸಿಕೊಳ್ಳಲು ಸಹಕರಿಸುತ್ತದೆ. ನಮ್ಮ ಊರು ಗಳಲ್ಲಿ ದೊರಕುವ ಇತಿಹಾಸ ಪರಿಚಯಿಸುವ ಆಧಾರಗಳನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಿ ಮುಂದಿನ ಪೀಳಿಗೆ ಅದರ ಬಗ್ಗೆ ಅಧ್ಯಯನ ಮಾಡಲು ಸಹಕರಿಸಬೇಕು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ವಸ್ತು ಸಂಗ್ರಹಾಲಯದ ನಿರ್ದೇಶಕಿ ಡಾ.ಸ್ಮಿತಾ ರೆಡ್ಡಿ, ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡ ರೆಡ್ಡಿ, ಇತಿಹಾಸ ಶೋಧಕರು ತಜ್ಞರು ಹಾಗೂ ಜಿಲ್ಲೆಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.20 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ನಮ್ಮ ಊರು ನಮ್ಮ ಬೇರು ಗ್ರಾಮೀಣ ಪರಂಪರೆ ಸಂಸ್ಕೃತಿಗಳ ಅರಿವು ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಾಗಾರವನ್ನು ಎ. ದೇವರಾಜ್‌ ಉದ್ಘಾಟಿಸಿದರು. ಜಿಪಂ ಸಿಇಒ ಕೀರ್ತನಾ, ಡಾ.ದೇವರಕೊಂಡ ರೆಡ್ಡಿ ಇದ್ದರು.

Share this article