ಶೇಷಮೂರ್ತಿ ಅವಧಾನಿ
ಮೂರು ವರ್ಷಕ್ಕೊಮ್ಮೆ ನಡೆಯುವ ಕಲ್ಯಾಣ ನಾಡಿನ ಪ್ರತಿಷ್ಠಿತ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ (ಎಚ್‌ಕೆಇ)ಯ ಆಡಳಿತ ಮಂಡಳಿಗೆ ಮಾ.16ರಂದು ಚುನಾವಣೆ ನಿಗದಿಯಾಗಿದ್ದರಿಂದ ಚಟುವಟಿಕೆಗಳು ಬಿರುಸುಗೊಂಡಿವೆ.
ಮತದಾನದ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷ, ಆಡಳಿತ ಮಂಡಳಿ ನಿರ್ದೇಶಕರ ಸ್ಥಾನದ ಆಕಾಂಕ್ಷಿಗಳು ಪೆನಲ್ ರಚಿಸಿಕೊಂಡಿದ್ದಾರೆ.ಹಾಲಿ ಬಿಜೆಪಿ ಎಂಎಲ್‌ಸಿ , ಈಗಾಗಲೇ 2 ಬಾರಿ ಸಂಸ್ಥೆಯ ಅಧ್ಯಕ್ಷರಾಗಿದ್ದ, ಹಳೆಹುಲಿ ಶಶಿಲ್ ನಮೋಶಿ, ಹಾಲಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲುಗಂದಿ ಪುತ್ರ ಸಂತೋಷ ಬಿಲಗುಂದಿ, ಮೂಳೆರೋಗ ತಜ್ಞ ಡಾ. ಶರಣಬಸವಪ್ಪ ಕಾಮರೆಡ್ಡಿ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳಾಗಿದ್ದು ಪ್ರತ್ಯೇಕ ಪ್ಯಾನೆಲ್ ರಚನೆಯಾಗಿವೆ. ಡಾ.ಸೂರ್ಯಕಾಂತ ಪಾಟೀಲ್ ಸ್ವತಂತ್ರರಾಗಿ ಅಧ್ಯಕ್ಷ ಹುದ್ದೆಗೆ ಕಣದಲ್ಲಿದ್ದಾರೆ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಸೇರಿ 13 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸಂಸ್ಥೆಯಲ್ಲಿ 1,450 ಸದಸ್ಯರಿದ್ದು, ಇರು ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದು ಮತ ಹಾಕಿ, ಆಡಳಿತ ಮಂಡಳಿ ಸದಸ್ಯ ಸ್ಥಾನಕ್ಕೆ 13 ಆದ್ಯತೆ ಮತ ಚಲಾಯಿಸಲಿದ್ದಾರೆ.
ಕಳೆದ ಡಿಸೆಂಬರ್‌ನಿಂದಲೇ ಮತದಾರ ಸದಸ್ಯರೆಲ್ಲರಿಗೂ ಪತ್ರ ಬರೆಯುತ್ತ ಸಂಸ್ಥೆಯ ಆಗುಹೋಗು, ಸಾಗುತ್ತಿರುವ ದಾರಿಯ ಕುರಿತಂತೆ ಅವರ ಗಮನ ಸೆಳೆಯೋದಲ್ಲದೆ ಪ್ರಾಮಾಣಿಕರಿಗೆ ಮತ ಹಾಕುವ ಜರೂರತ್ತು ಹಿಂದೆಂದಿಗಿಂತಲೂ ಹೆಚ್ಚಿದೆ ಎಂಬುದನ್ನು ಸಾರುತ್ತಿರೋದು ಒಳ್ಳೆಯ ಬೆಳವಣಿಗೆಯಾದರೂ ಇದು ಕೆಲವರಿಗೆ ನುಂಗಲಾರದ ತುತ್ತಾಗಿದೆ.
ಸಮಾಜದ ಎಲ್ಲಾ ವರ್ಗದವರಿಗೂ ಉನ್ನತ ಶಿಕ್ಷಣ ಕೈಗೆಟುವಂತಾಗಬೇಕೆಂಬ ನಾಗರಾಜರಾವ್ ಹಾಗೂ ರಾಂಪೂರೆ ಕನಸಿನ ಕೂಸಾಗಿ ಜನ್ಮತಳೆದ ಸಂಸ್ಥೆ ಕಳೆದ ಆರೂವರೆ ದಶಕದಲ್ಲಿ ಹಿಂದುಳಿದ ಹೈ-ಕ ನೆಲದಲ್ಲಿ ಮಾಡಿದ ಸಾಧನೆ ಅಪಾರ. ದಿ.ವೀರೇಂದ್ರ ಪಾಟೀಲ್, ನಿಂಜಲಿಂಗಪ್ಪ, ಚಂದ್ರಶೇಖರ ಪಾಟೀಲ್ ಮಹಾಗಾಂವ್, ವರ್ತಕ- ರೈತ ಕುಟುಂಬಗಳು ಸೇರಿಕೊಂಡು ಎಚ್ಕೆಇ ಸಂಸ್ಥೆಗೆ ನೀಡಿದ್ದ ಬಂಬಲ ಅಪಾರ. ಹೀಗಾಗಿ ಸಂಸ್ಥೆ ಆಗೆಲ್ಲಾ ಬೆಳೆಯುತ್ತ ಸಾಗಿತ್ತು.
ಮಹಾದೇವಪ್ಪ ರಾಂಪೂರೆ ಕನಸು ಛಿದ್ರ: ಮೆಡಿಕಲ್, ಇಂಜಿನಿಯರಿಂಗ್ ಕಾಲೇಜಿನಿಂದ ಬರುವ ಅಪಾರ ಆದಾಯದ ಮೇಲೆಯೇ ಕಣ್ಣಿಟ್ಟುಕೊಂಡು ಚುನಾವಣೆ ಕುಸ್ತಿಗಿಳಿಯುವವರೇ ಅಧಿಕ, ಸಿಕ್ಕಷ್ಟು ಶಿವಾಯನಮಃ ಎಂಬ ಚಿಂತನೆಯವರೇ ಹೆಚ್ಚುತ್ತಿರೋದರಿಂದ ಸಂಸ್ಥೆಯ ಪ್ರಗತಿ ವಿಚಾರ ಹಿಂಬದಿ ಸ್ಥಾನ ಪಡೆದುಕೊಂಡಿದೆ. ಸಂಸ್ಥೆ ಸ್ಥಾಪಿಸಿದ ಮಹಾದೇವಪ್ಪ ರಾಂಪೂರೆಯವರ ಉದ್ದೇಶ ಇದಾಗಿರಲಿಲ್ಲ, ಹಿಂದುಳಿದ ಹೈ- ಕ ನೆಲದಲ್ಲಿ ಶಿಕ್ಷಣ ಕ್ರಾಂತಿ ಮಾಡುತ್ತ ಬಡವರು, ರೈತರು, ಜನ ಸಾಮಾನ್ಯೆಲ್ಲರ ಮನೆ ಮನಗಳಲ್ಲಿ ಶಿಕ್ಷಣ ದೀಪ ಬೆಳಗಿಸಬೇಕೆಂಬ ಅವರ ಉದ್ದೇಶವಿಂದು ಮಣ್ಣು ಪಾಲಾಗಿದೆ. ಇತ್ತೀಚೆಗೆ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿಯಲು ಇರುವ ಚುನಾವಣೆಗಳು ನಡೆಯುವ ಪರಿಯನ್ನು ಗಮನಿಸಿದರೆ ಸಾಕು, ಎಚ್ಕೆಇ ಅದ್ಯಾವ ದಿಕ್ಕಿನತ್ತ ಮುಖ ಮಾಡಿದೆ ಎಂಬುದು ಯಾರಾದರೂ ತಿಳಿಯಬಗುದಾಗಿದೆ.
ವೈದ್ಯ ವಿದ್ಯಾಲಯದೊಂದಿಗೆ ಇಲ್ಲಿದ್ದ ಸಂಸ್ಥೆಯ ಬಸವೇಶ್ವರ ಆಸ್ಪತ್ರೆ ಇಂದು ಜನರಿಗೆ ಸೂಕ್ತ ವೈದ್ಯಕೀಯ ಸೇವೆ ನೀಡುವುದರಿಂದ ವಿಮುಖವಾಗಿದೆ, ಇನ್ನು ವೈದ್ಯಕೀಯ, ಇಂಜಿನಿಯರಿಗ್, ದಂತವೈದ್ಯ, ಪದವಿ, ಪಾಲಿಟೆಕ್ನಿಕ್‌ದಂತಹ ಕಾಲೇಜುಗಳಲ್ಲಿಯೂ ಈ ನೆಲದ ಕಡು ಬಡವರಿಗೆ ಕಮ್ಮಿ ಶುಲ್ಕದಲ್ಲಿ ಉನ್ನತ ಶಿಕ್ಷಣ ಗಗನ ಕುಸುಮವಾಗಿದೆ.ಎಚ್‌ಕೆಇ ಸಂಸ್ಥೆಗೆ ಮಾ.16ರಂದು ಚುನಾವಣೆ ನಿಗದಿಯಾಗಿದೆ, ಅಂದು ಮತದಾನ ನಡೆದು ಅಂದೇ ಮತ ಎಣಿಕೆಯೂ ಮಾಡುತ್ತೇವೆ. ರಾತ್ರಿಯೊಳಗೆ ಫಲಿತಾಂಶ ಪ್ರಕಟಮಾಡುತ್ತೇವೆ.