ಭಟ್ಕಳ: ಬೇರೆಯವರು ತಂದ ಅನುದಾನದ ಗುದ್ದಲಿಪೂಜೆ ಮಾಡುವ ಜಾಯಮಾನ ನನ್ನದಲ್ಲ. ನನ್ನ ಅವಧಿಯಲ್ಲಿ ಸರ್ಕಾರದಿಂದ ಏನು ಅನುದಾನ ತಂದಿದ್ದೇನೋ ಅದರ ಸಮರ್ಪಕ ಅನುಷ್ಠಾನ ಆಗುವಂತೆ ನೋಡಿಕೊಂಡಿದ್ದೇನೆ. ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದಂತೆ ನಾನು ಹಿಂದಿನ ಶಾಸಕರು ತಂದ ಅನುದಾನದ ಗುದ್ದಲಿಪೂಜೆ ನೆರವೇರಿಸುವ ಕೆಲಸ ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದಾದರೂ ಹೇಳಿಕೊಳ್ಳುವ ಒಂದು ಅಭಿವೃದ್ಧಿ ಕಾರ್ಯ ಆದರೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತೋರಿಸಲಿ. ಭಟ್ಕಳದಲ್ಲಿ ಮಿನಿವಿಧಾನಸೌಧ, ಬಸ್ ನಿಲ್ದಾಣ, ಡಿಪೋ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ಮಂಜೂರಿಯಾಗಿರುವುದು ನಾನು ಶಾಸಕನಿದ್ದ ಸಂದರ್ಭದಲ್ಲಿ. ಆದರೆ ಇದರ ಉದ್ಘಾಟನೆ ಮಾಡಿರುವುದು ಯಾರು ಎಂದು ಪ್ರಶ್ನಿಸಿದ ಅವರು, ನನಗೂ ಮಾತನಾಡಲು ಬರುತ್ತದೆ. ನಾನು ಇಷ್ಟು ದಿನ ಸುಮ್ಮನೆ ಇದ್ದೆ. ಅವರು ನನ್ನ ವಿರುದ್ಧ ಮಾತನಾಡಲು ಪ್ರಾರಂಭಿಸಿದರೆ, ನಾನೂ ಮಾತನಾಡಲು ಹಿಂಜರಿಯುವುದಿಲ್ಲ. ಏನು ಮಾತನಾಡಬೇಕು ಎಂದು ನನಗೆ ಗೊತ್ತಿದೆ ಎಂದರು. ನಾನು ಬೇರೆಯವರು ತಂದ ಅನುದಾನದ ಗುದ್ದಲಿಪೂಜೆ ನಡೆಸಿಲ್ಲ. ನಾನು ತಂದ ಅನುದಾನದ ಗುದ್ದಲಿಪೂಜೆ ನಡೆಸಿ ಅಭಿವೃದ್ಧಿ ಕಾರ್ಯ ಮಾಡಿಸಿದ್ದೇನೆ. ನಾನು ಎಷ್ಟು ಅನುದಾನ ತಂದಿದ್ದೇನೆ. ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆಂದು ಜನತೆಗೆ ಗೊತ್ತಿದೆ. ಹಾಗೆ ನೋಡಿದರೆ ನಾನು ಹಿಂದೆ ಶಾಸಕನಾಗಿದ್ದ ಸಂದರ್ಭದಲ್ಲಿ ತಂದ ಅನುದಾನ ಗುದ್ದಲಿ ಪೂಜೆ ನಡೆಸಿದವರು ಯಾರು? ಅವರ ಶಾಸಕತ್ವದ ಅವಧಿಯಲ್ಲಿ ಹೇಳಿಕೊಳ್ಳುವ ಒಂದಾದರೂ ದೊಡ್ಡ ಮೊತ್ತದ ಅನುದಾನ ಬಂದಿದೆಯೇ ಎನ್ನುವುದು ಸ್ಪಷ್ಟಪಡಿಸಲಿ ಎಂದರು.ಹಿಂದೂ ಕಾರ್ಯಕರ್ತರ ಮೇಲೆ ಗಡಿಪಾರು, ಗೂಂಡಾ ಕಾಯ್ದೆ ನಾನು ಹಾಕಿಸಿಲ್ಲ. ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲೇ ಕೇಸುಗಳು ಬಿದ್ದಿವೆ. ಅವರ ಸರ್ಕಾರದ ಅವಧಿಯಲ್ಲೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದಾಗ ಸ್ಪೀಕರ್ ಆಗಿದ್ದ ಕಾಗೇರಿ ಅವರು ಏನು ಮಾಡಿದರು? ಅಂದು ಗಡಿಪಾರು ಆದೇಶವನ್ನು ವಾಪಸ್ ಪಡೆಯಬಹುದಿತ್ತಲ್ಲವಾ ಎಂದು ಪ್ರಶ್ನಿಸಿದ ಅವರು, ನನ್ನ ಮೇಲೆ ಮತ್ತು ನಮ್ಮ ಸರ್ಕಾರದ ಮೇಲೆ ಈ ವಿಚಾರದಲ್ಲಿ ವೃಥಾ ಆರೋಪ ಮಾಡುವುದು ಸರಿಯಲ್ಲ ಎಂದರು.