ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ರಾಜಧಾನಿ ಬೆಂಗಳೂರಿನೆಲ್ಲೆಡೆ ಶುಕ್ರವಾರ 75ನೇ ಗಣರಾಜ್ಯೊತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜು, ವಿಶ್ವವಿದ್ಯಾಲಯಗಳು, ರಾಜಕೀಯ ಪಕ್ಷಗಳ ಕಚೇರಿ, ವಿವಿಧ ಸಂಘ ಸಂಸ್ಥೆಗಳ ಕಚೇರಿಗಳಲ್ಲಿ ಅಧಿಕಾರಿಗಳು, ಗಣ್ಯ ಮಾನ್ಯರು ಧ್ವಜಾರೋಹಣ ನೆರವೇರಿಸಿದರು.ಇದೇ ವೇಳೆ ಸ್ವಾತಂತ್ರ್ಯ ಹೋರಾಟ ಮತ್ತು ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಗಾಂಧೀಜಿ ಮತ್ತು ಡಾ। ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು. ಬಳಿಕ ಮಾತನಾಡಿದ ಗಣ್ಯರು ಭಾರತಕ್ಕೆ ಸ್ವಾತಂತ್ರ್ಯ ದೊರೆತ ಇತಿಹಾಸ, ಇದಕ್ಕಾಗಿ ಗಾಂಧೀಜಿ, ನೆಹರು, ವಲ್ಲಭಬಾಯಿ ಪಟೇಲ್ ಸೇರಿದಂತೆ ಹೋರಾಟ ನಡೆಸಿದ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತೆತ್ತ ಮನನೀಯರನ್ನು ಸ್ಮರಿಸಿದರು. ನಂತರ ಭವ್ಯ ಭಾರತದ ಉಜ್ವಲ ಭವಿಷ್ಯಕ್ಕಾಗಿ ವಿಶ್ವದಲ್ಲೇ ಅಂತ್ಯಂತ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟ ಡಾ। ಬಿ.ಆರ್.ಅಂಬೇಡ್ಕರ್ ಸೇರಿದಂತೆ ಇತರೆ ಸಂವಿಧಾನ ರಚನಾ ಸಮಿತಿ ಸದಸ್ಯರ ಕೊಡುಗೆಯನ್ನು ನೆನೆದು ಸಂವಿಧಾನದ ಆಶಯಗಳನ್ನು ಈಡೇರಿಸುವತ್ತ ಪ್ರತಿಯೊಬ್ಬರು ಹೆಜ್ಜೆ ಇಡಬೇಕೆಂದು ಕರೆ ನೀಡಿದರು.
ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶಭಕ್ತಿ ಗೀತೆಗಳ ಗಾಯನ, ನೃತ್ಯ ಪ್ರದರ್ಶನ ಮನಸೂರೆಗೊಂಡಿತು.ಸಂವಿಧಾನವೇ ದಾರಿದೀಪ: ಗಾಂಧಿಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಕೂಡ ಕುಲಪತಿ ಡಾ। ಲಿಂಗರಾಜ ಗಾಂಧಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿ ನಮ್ಮ ಸಂವಿಧಾನವೇ ನಮಗೆ ಒಂದು ಮಹಾಕಾವ್ಯ. ವಿವಿಧ ಧರ್ಮ, ಜಾತಿ, ಬಹು ಸಂಸ್ಕೃತಿಗಳಿಂದ ಕೂಡಿರುವ ಭಾರತದಲ್ಲಿ ಸಾಮಾಜಿಕ ನ್ಯಾಯ, ಸಮಾನತೆ, ಸಹಬಾಳ್ವೆಯ ಜೀವನಕ್ಕೆ ಸಂವಿಧಾನವೊಂದೇ ದಾರಿ ದೀಪ ಎಂದರು. ಈ ವೇಳೆ ಕುಲ ಸಚಿವ (ಆಡಳಿತ) ಡಾ। ಜವರೇಗೌಡ, ಮೌಲ್ಯಮಾಪನ ಕುಲಸಚಿವ ಡಾ। ಆನಂದ್ ಕುಮಾರ್ ಸೇರಿದಂತೆ ವಿವಿಯ ಅಧಿಕಾರಿಗಳು, ಬೋಧಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಬೆಂ.ವಿವಿಯಲ್ಲಿ ಧ್ವಜಾರೋಹಣ
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಕುಲಸಚಿವ ಕುಲಸಚಿವ ಶೇಕ್ ಲತೀಫ್ ಮತ್ತು ಕುಲಪತಿ ಡಾ। ಎಸ್.ಎಂ.ಜಯಕರ ಧ್ವಜಾರೋಹಣ ನೆರವೇರಿಸಿದರು. ಶ್ವೇತ ವರ್ಣದ ಉಡುಗೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಗಮನ ಸೆಳೆದರು. ನಂತರ ಮಾತನಾಡಿದ ಕುಲಪತಿ ಅವರು ದೇಶದ ಅನೇಕ ಮಹನೀಯರು ಹೋರಾಟ ನಡೆಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪರಿಣಾಮ ಹಾಗೂ ದೇಶಕ್ಕೆ ಒಂದು ಉತ್ತಮ ಸಂವಿಧಾನವನ್ನು ರೂಪಿಸಿಕೊಟ್ಟ ಪರಿಣಾಮ ಅದರ ನೆರಳಲ್ಲಿ ಇವತ್ತು ಪ್ರತಿಯೊಬ್ಬ ಪ್ರಜೆಯೂ ಶಾಂತಿ, ನೆಮ್ಮದಿಯಿಂದ ಬದುಕುತ್ತಿದ್ದಾನೆ. ಅವರ ಹೋರಾಟ, ಬಲಿದಾನಗಳಿಗೆ ಗೌರವ ಸಿಗಬೇಕಾದರೆ ನಾವು ಸಂವಿಧಾನದ ಆಶಯಕ್ಕೆ ತಕ್ಕಂತೆ ನಡೆಯಬೇಕು ಎಂದರು.ವಿನಾಯಕ ಶಾಲೆ:
ಶ್ರೀನಿವಾಸ ನಗರದ ವಿನಾಯಕ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಿರಿನಗರ ಸಂಗೀತ ಸಭಾ ಅಧ್ಯಕ್ಷ ಎಂ.ಆರ್.ಸತ್ಯನಾರಾಯಣ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿ, ಜಗತ್ತಿನ ಅನೇಕ ಸಂವಿಧಾನಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿರುವ ಉತ್ತಮ ಅಂಶಗಳನ್ನೆಲ್ಲಾ ಸೇರಿಸಿ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ಅತ್ಯುತ್ತಮ ಸಂವಿಧಾನ ನೀಡಿದ್ದಾರೆ. ಇದಕ್ಕಾಗಿಯೇ ಭಾರತದ ಸಂವಿಧಾನ ಜಗತ್ತಿನಲ್ಲೇ ಶ್ರೇಷ್ಠ ಸಂವಿಧಾನ ಎಂದು ಹೆಸರಾಗಿದೆ ಎಂದರು.ವಿನಾಯಕ ವಿದ್ಯಾಸಂಸ್ಥೆಯ ಉಪಾಧ್ಯಕ್ಷೆ ಗಾಯತ್ರಿ ಚಂದ್ರಮೂರ್ತಿ, ಕಾರ್ಯದರ್ಶಿ ಕೋದಂಡರಾಮಯ್ಯ ಹಾಗೂ ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಪೇರೆಂಟ್ಸ್ ಸೊಸೈಟಿರಾಜಾಜಿನಗರ ಪೇರೆಂಟ್ಸ್ ಎಜುಕೇಷನ್ ಸೊಸೈಟಿಯಲ್ಲಿ ನಡೆದ 75ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಕಾಸಿಯಾ ಉಪಾಧ್ಯಕ್ಷ ಎಂ.ಜಿ.ರಾಜಗೋಪಾಲ್ ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಅವರು ಪ್ರತಿಯೊಬ್ಬ ವಿದ್ಯಾರ್ಥಿಗಳು ದೇಶಪ್ರೇಮವನ್ನು ಬೆಳೆಸಿಕೊಳ್ಳಬೇಕು. ನಮ್ಮನ್ನು ಹೆತ್ತ ತಾಯಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾದುದು ಎಂಬುದನ್ನು ಅರಿಯಬೇಕು ಎಂದು ಕರೆ ನೀಡಿದರು. ಡಾ। ಜಿ.ಬಿ.ಪರಮಶಿವಯ್ಯ, ಆರ್.ರಾಜು, ಎಂ.ಎಸ್.ಮೃತ್ಯುಂಜನಯ್ ಇದ್ದರು.
ಪ್ರಮಾಣ ವಚನ ಬೋಧನೆಕರ್ನಾಟಕ ಮಾನವ ಹಕ್ಕುಗಳ ಸಂರಕ್ಷಣಾ ಸಂಸ್ಥೆಯು ಲಗ್ಗೆರೆ ಮುಖ್ಯರಸ್ತೆಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 75ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ನೆರೆದಿದ್ದ ಸಭಿಕರಿಗೆ ಸಂವಿಧಾನದ ಪ್ರಸ್ತಾವನೆ ಪ್ರಮಾಣ ವಚನ ಬೋಧಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಲವು ಗಣ್ಯರಿಗೆ ಸಂಸ್ಥೆಯ ಅಧ್ಯಕ್ಷ ಡಾ। ಸಿ.ಎಂ.ಗಣೇಶ್ ಗೌಡ ಅವರು ಪ್ರಶಸ್ತಿ ನೀಡಿ ಸನ್ಮಾನಿಸಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ವತಿಯಿಂದ ಅರಮನೆ ರಸ್ತೆಯ ಶಾಂತಿಗೃಹದಲ್ಲಿ ಗಣರಾಜ್ಯೋತ್ಸವ ನೆರವೇರಿತು. ಸಂಸ್ಥೆಯ ಉಪಾಧ್ಯಕ್ಷ ಕೊಂಡಜ್ಜಿ ಜಿ ಷಣ್ಮುಖಪ್ಪ ಅವರು ಧ್ವಜಾರೋಹಣ ನೆರವೇರಿಸಿದರು. ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಸಮಾನತೆಯ ಸಮಾಜಕ್ಕಾಗಿ ನಡಿಗೆಕರ್ನಾಟಕ ದಲಿತ ಸಂಘರ್ಷ ಸಮಿತಿಯು ಗಣರಾಜ್ಯೋತ್ಸವದ ಅಂಗವಾಗಿ ಕೆ.ಆರ್.ವೃತ್ತದ ಬಳಿಯ ಯುವಿಸಿಇ ಅಲ್ಯೂಮ್ನಿ ಭವನದಲ್ಲಿ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ನಮ್ಮ ನಡಿಗೆ ಆಯೋಜಿಸಲಾಗಿತ್ತು. ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಚಿಂತಕ ವಡ್ಡಗೆರೆ ನಾಗರಾಜಯ್ಯ, ಬಸವರಾಜ ಕೌತಾಳ್ ಮತ್ತಿತರ ಗಣ್ಯರು ಪಾಲ್ಗೊಂಡು ಸಂವಿಧಾನ ದಿನದ ಸಾರವನ್ನು ತಿಳಿಸಿಕೊಟ್ಟರು.