ಕನ್ನಡಪ್ರಭ ವಾರ್ತೆ ಲೋಕಾಪುರಪಾರಿಜಾತ ಕಥಾ ಮೂಲಕ ಕರ್ನಾಟಕ ಮಾತ್ರವಲ್ಲ ಹೊರರಾಜ್ಯದಲ್ಲೂ ಮನೆಮಾತಾಗಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊಳಬಸಯ್ಯ ದುಂಡಯ್ಯ ಸಂಬಾಳದ (90) ವಯೋಸಹಜ ಕಾಯಿಲೆಯಿಂದ ಗುರುವಾರ ಇಹಲೋಕ ತ್ಯಜಿಸಿದರು. ಮೃತರಿಗೆ ಪತ್ನಿ, 4 ಜನ ಗಂಡು ಮಕ್ಕಳು ಹಾಗೂ ಒರ್ವ ಪುತ್ರಿ ಇದ್ದಾರೆ.
ಕಳೆದ 65 ವರ್ಷಗಳಿಂದ ಪಾರಿಜಾತ ಕಥಾ ಸೇವೆ ಮಾಡುತ್ತಾ ಬಂದಿದ್ದ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿವೆ. ಬಾಗಲಕೋಟೆ ಜಿಲ್ಲೆಯ ಲೋಕಾಪುರದಲ್ಲಿ ಗುರುವಾರ ಅಂತ್ಯಕ್ರಿಯೆ ನೆರವೇರಿತು.ಕಲಾ ಸೇವೆ ಆರಂಭ:
ಹೊಳಬಸಯ್ಯ ದುಂಡಯ್ಯ ಸಂಬಾಳದ 1939 ಜನಿಸಿದರು. ಕಡು ಬಡತನದಲ್ಲಿ ಜನಿಸಿದ ಇವರು ಶಿಕ್ಷಣ ಪಡೆಯಲಾಗದೇ, ತಮ್ಮ ಜಮೀನಿನ ಸುಧಾರಣೆ ಕೈಗೊಂಡರು. ತಮ್ಮ 10ನೇ ವಯಸ್ಸಿನಿಂದಲೇ ಭಜನೆ, ಕೈವಲ್ಯ ಪದಗಳನ್ನು ಸರಾಗವಾಗಿ ತಾಳ-ಮೇಳದೊಂದಿಗೆ ಹಾಡುತ್ತಿದ್ದರು. 19ನೇ ವಯಸ್ಸಿಗೆ ತಂದೆ –ತಾಯಿ ವಿರೋಧದ ನಡುವೆಯೂ ದಿ.ಕೃಷ್ಣಾಜಿ ದೇಶಪಾಂಡೆ (ಸಾಲಾಪಟ್ಟಿ) ಅವರ ಶ್ರೀ ಕೃಷ್ಣಾ ಪಾರಿಜಾತ ತಂಡದಲ್ಲಿ ಶ್ರೀ ಕೃಷ್ಣನ ಪಾತ್ರ ಮಾಡಿ ಸೈ ಎನಿಸಿಕೊಂಡರು. ಸುಮಾರು 30 ವರ್ಷ ಶ್ರೀ ಕೃಷ್ಣನಾಗಿ ನಂತರ 20 ವರ್ಷ ಬೇರೆ ಬೇರೆ ಪಾತ್ರ ನಿರ್ವಹಿಸಿದರು. ಈಗ ಶ್ರೀ ಕೃಷ್ಣ ಪಾರಿಜಾತ ಕಂಪನಿಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.ಸಂತಾಪ: ಪಾರಿಜಾತ ಕಲಾವಿದ ಹೊಳಬಸಯ್ಯ ಸಂಬಾಳದ ನಿಧನಕ್ಕೆ ಸಂಸದ ಪಿ.ಸಿ.ಗದ್ದಿಗೌಡರ, ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ವಿ.ಪ ಸದಸ್ಯ ಪಿ.ಎಚ್.ಪೂಜಾರ, ಉದ್ಯಮಿ ಎಂ.ಎಂ.ವಿರಕ್ತಮಠ, ಡಾ.ಕೆ.ಎಲ್.ಉದಪುಡಿ, ಕಾಶಿನಾಥ ಹುಡೇದ, ಲೋಕಣ್ಣ ಕತ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕರ್ಣಕುಮಾರ, ನಾಡೋಜ ಪ್ರಶಸ್ತಿ ಪುರಸ್ಕೃತ ಯಲ್ಲವ್ವ ರೊಡ್ಡಪ್ಪನವರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಲ್ಲಿಕಾರ್ಜುನ ಮುದಕವಿ, ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಸಂತಾಪ ಸೂಚಿಸಿದ್ದಾರೆ.