ಧಾರವಾಡ: ಓಣಿ-ಓಣಿಗಳಲ್ಲಿ ಹಲಗೆ ಶಬ್ದ ಕೇಳಿತೆಂದರೆ ಸಾಕು ಹೋಳಿ ಹಬ್ಬ ಸಮೀಪಿಸಿತು ಎಂದರ್ಥ. ಕಾಮಣ್ಣನ ಹಬ್ಬಕ್ಕೆ ಪೂರ್ವ ತಯಾರಿ, ಹುರುಪು ತರಲು ಉತ್ತರ ಕರ್ನಾಟಕದ ಅದರಲ್ಲೂ ಧಾರವಾಡ ಹಾಗೂ ಸುತ್ತಲು ಭಾಗದಲ್ಲಿ ಹಲಗೆ ಬಾರಿಸುವುದು ಸಂಪ್ರದಾಯ. ಹೋಳಿ ಹುಣ್ಣಿಮೆ ನಾಲ್ಕೈದು ದಿನಗಳ ಬಾಕಿ ಉಳಿದಂತೆ ಈಗಾಗಲೇ ಧಾರವಾಡದಲ್ಲಿ ಹಲಗೆ ಸದ್ದು ಶುರುವಾಗಿದೆ.
ಹಿಂದೂಗಳ ಎಲ್ಲ ಹಬ್ಬಗಳಿಗೂ ತನ್ನದೇ ಆದ ಪರಂಪರೆ, ಸಂಸ್ಕೃತಿ ಇದೆ. ಅದಕ್ಕೆ ಸಾಕ್ಷಿ ಎಂಬಂತೆ ವಾದ್ಯ ಮೇಳಗಳು ಆಯಾ ಹಬ್ಬಕ್ಕೆ ವಿಶಿಷ್ಟವಾಗಿರುತ್ತವೆ. ಹೋಳಿ ಹಬ್ಬದಲ್ಲಂತೂ ಮಕ್ಕಳು, ಯುವಕರು, ವಯಸ್ಕರು ಹೀಗೆ ಎಲ್ಲ ವಯೋಮಾನದವರು ಹಲಗೆ ಬಾರಿಸುವುದು ಪರಂಪರೆ. ದೇಸಿ ವಾದ್ಯವಾಗಿರುವ ಈ ಹಲಗೆ ಪುರಾತನವಾದ ಬಡಿತವಾದ್ಯ. ಬಣ್ಣದೋಕುಳಿಯ ಹಬ್ಬವಾದ ಹೋಳಿಯ ಸಂಗಾತಿ ಹಲಗೆ ಎನ್ನಬಹುದು. ಬಣ್ಣದಾಟಕ್ಕೆ ಹಲಗೆಯ ತಾಳ ಬೆರೆತಾಗಲೇ ಹೋಳಿ ಹಬ್ಬಕ್ಕೆ ನಿಜವಾದ ಕಳೆ ಬರುವುದು.ನಮ್ಮ ಹಿರಿಯರು ಹೋಳಿ ಹಬ್ಬದಲ್ಲಿ ಹಲಗೆ ಬಳಸಿದಂತೆ ಈಗಿನ ಯುವ ಜನತೆ ಬಳಸುತ್ತಿಲ್ಲ. ಆಧುನಿಕತೆಯ ಪ್ರಭಾವ, ಹೊಸ ಸಾಹಿತ್ಯ, ಸಂಸ್ಕೃತಿಗಳ ಪ್ರಭಾವ, ಮಾನವನ ದಿನಚರಿ ಯಾಂತ್ರೀಕೃತವಾಗುತ್ತಿರುವುದು, ಸಮಯದ ಕೊರತೆ, ವೈವಿಧ್ಯಮಯ ಮನರಂಜನಾ ಮಾಧ್ಯಮಗಳು, ಪುರಾಣ ಕಥೆಗಳಲ್ಲಿ ಕುಂದುತ್ತಿರುವ ಆಸಕ್ತಿಯು ಜನಪದ ಸಂಸ್ಕೃತಿ ಸಂಪ್ರದಾಯ ಹಬ್ಬ-ಹರಿದಿನಗಳ ಮೇಲೂ ಪ್ರಭಾವ ಬೀರಿವೆ. ಇಷ್ಟಾಗಿಯೂ ಹೊಸದನ್ನು ಒಪ್ಪಿಕೊಳ್ಳುತ್ತ ಹಳೆಯದನ್ನು ಉಳಿಸಿಕೊಳ್ಳಲು ಈ ಕಾಮಣ್ಣನ ಹಬ್ಬದಲ್ಲಿ ತಮ್ಮ ಹಲಗೆಗಳನ್ನು ವೈವಿಧ್ಯಮಯ ಲಯಗಳಲ್ಲಿ ಬಾರಿಸುತ್ತ ಸಂಚಲನ ಮಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ ಎನ್ನುತ್ತಾರೆ ಸಂಸ್ಕೃತಿಯ ಚಿಂತಕ ಉದಯ ಯಂಡಿಗೇರಿ.
ಪ್ರತಿ ವರ್ಷದಂತೆ ಈ ಬಾರಿಯೂ ಕಾಮಣ್ಣನ ಹೋಳಿಹಬ್ಬ ಸಂತಸದ ಜತೆಗೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳ ಜ್ವರವನ್ನೂ ಹೊತ್ತು ತಂದಿದೆ. ಜನಸ್ನೇಹಿಯಾಗಿ ವಿದ್ಯಾರ್ಥಿಗಳ ಭವಿಷ್ಯವನ್ನು ಲೆಕ್ಕಿಸದೆ ಕಂಡ ಕಂಡಲ್ಲಿ ತಾಸುಗಟ್ಟಲೆ ಹಲಗೆ ಬಾರಿಸದೆ ಸೂಕ್ತವಾಗಿ ಹಲಗೆ ಬಾರಿಸುವುದು ಯೋಗ್ಯ ಎಂಬುದು ನನ್ನ ಭಾವನೆ ಎನ್ನುತ್ತಾರೆ ಅವರು.ಹಲಗೆ ಹಬ್ಬಕ್ಕೆ ಚಾಲನೆಕೆಲವು ವರ್ಷಗಳಿಂದ ಧಾರವಾಡದಲ್ಲಿ ಹೋಳಿಹುಣ್ಣಿಮೆ ಆಚರಣಾ ಸಮಿತಿ ವತಿಯಿಂದ ಹಲಗೆ ಹಬ್ಬ ನಡೆಯುತ್ತಿದ್ದು, ಈ ವರ್ಷದ ಹಲಗೆ ಹಬ್ಬಕ್ಕೆ ಭಾನುವಾರ ಇಲ್ಲಿಯ ಪ್ಯಾಟಿ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾಯಿತು.
ಮಾಜಿ ಶಾಸಕ ಅಮೃತ ದೇಸಾಯಿ, ಮಾಜಿ ಮೇಯರ್ ಈರೇಶ ಅಂಚಟಗೇರಿ ಭಾಗವಹಿಸಿ ಹಲಿಗೆ ಸಂಚಲನಕ್ಕೆ ಚಾಲನೆ ನೀಡಿದರು. ಹಲಗೆ ಸಂಚಲನದ ದಿವ್ಯ ಸಾನ್ನಿಧ್ಯವನ್ನು ಹೊಸಾಯಲ್ಲಾಪುರ ಹಿರೇಮಠ ಗದಗಯ್ಯ ಸ್ವಾಮೀಜಿ ವಹಿಸಿದ್ದರು. ನಗರದ ವಿವಿಧ ಕಾಲನಿಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಯುವಕರು ಹಲಗಿ ಬಾರಿಸುವ ಮೂಲಕ ಭೂಸಪ್ಪ ಚೌಕ್, ಲೈನ್ ಬಜಾರ್, ಟಿಕಾರೆ ರಸ್ತೆ, ವಿವೇಕಾನಂದ ವೃತ್ತ, ಗಾಂಧಿ ಚೌಕ್ ಮಾರ್ಗವಾಗಿ ಸಂಚರಿಸಿ ಚರಂತಿಮಠ ಗಾರ್ಡನ್‌ನ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಆಗಮಿಸಿ ಮುಕ್ತಾಯಗೊಳಿಸಿದರು.
ನಗರದ ಪ್ರಮುಖ ಓಣಿಗಳಿಂದ ತಮ್ಮ ಹಲಗಿ ಬಾರಿಸುವ ತಂಡದೊಂದಿಗೆ, ಕೇಸರಿ ಧ್ವಜ, ಪೇಟ, ಶಾಲುಗಳನ್ನು ಧರಿಸಿದ್ದ ಸಾವಿರಾರು ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದು ಮೆರವಣಿಗೆಗೆ ಮತ್ತಷ್ಟು ಮೆರಗು ತಂದಿತು. ಮುಂಜಾಗ್ರತಾ ಕ್ರಮವಾಗಿ ಈ ವೇಳೆ ಸೂಕ್ತ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.ಶಂಕರ ಶೇಳಕೆ, ಶಂಬು ಸಾಲಿಮನಿ, ನೀತಿನ ಇಂಡಿ, ರಾಕೇಶ ನಾಝರೆ, ಮಹೇಶ ಸುಳಾಕೆ, ಮೋಹನ ರಾಮದುರ್ಗ, ಓಂಕಾರ ರಾಯಚೂರ, ತಾನಾಜಿ ರೋಖಡೆ, ಬಸವರಾಜ ಬೆಣ್ಣಿ, ಸಿದ್ದು ಕಲ್ಯಾಣಶಟ್ಟಿ, ಪ್ರಮೋದ ಕಾರಕುನ, ಪುಷ್ಪಾ ನವಲಗುಂದ ಹಾಗೂ ಅನೇಕ ಹಲಗಿ ತಂಡಗಳು ಹಲಗಿ ಬಾರಿಸುವ ಮೂಲಕ ಜನರ ಆಕರ್ಷಣೆ ಕೇಂದ್ರವಾಗಿದ್ದವು.