ಸಂಭ್ರಮದ ಹೋಳಿ ಹಬ್ಬ: ಬಣ್ಣಗಳಲ್ಲಿ ಮಿಂದೆದ್ದ ಜನತೆ

KannadaprabhaNewsNetwork | Published : Mar 15, 2025 1:01 AM

ಸಾರಾಂಶ

ರಮ್ಯವಾಗಿ ಬೇಸಿಗೆ ಋತುಗಳಲ್ಲಿ ಅಂಬೆಗಾಲಿಡುತ್ತಾ ಆಗಮಿಸುವ ಪ್ರಥಮ ಹಬ್ಬವೇ ರಂಗು ರಂಗಿನ ಹೋಳಿ ಹಬ್ಬ

ಶಿರಹಟ್ಟಿ: ಐತಿಹಾಸಿಕ ಹೋಳಿ ಹಿನ್ನೆಲೆಯಲ್ಲಿ ಶುಕ್ರವಾರ ಪಟ್ಟಣದ ಜನತೆ ಬಣ್ಣದಾಟದಲ್ಲಿ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಯುವಕರು, ಮಕ್ಕಳು, ಮಹಿಳೆಯರು ಎಲ್ಲರೂ ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

ಮಧ್ಯರಾತ್ರಿಯೇ ಕಾಮನನ್ನು ಸುಟ್ಟು ಬೆಳಗ್ಗೆ ೭ ಗಂಟೆಯಿಂದಲೇ ಬಣ್ಣದಾಟ ಪ್ರಾರಂಭವಾಯಿತು. ಬೆಳಕು ಹರಿಯುತ್ತಲೇ ಸಣ್ಣಸಣ್ಣ ಮಕ್ಕಳು ಮನೆಮಂದಿಗೆಲ್ಲ ಬಣ್ಣ ಎರಚಿ ಸೌಹಾರ್ದಯುತವಾಗಿ ಸಡಗರ ಸಂಭ್ರಮದಿಂದ ಕಾಮನ ಹಬ್ಬ, ಹೋಳಿ ಆಚರಿಸಿ ಖುಷಿ ಪಟ್ಟರು.

ರಮ್ಯವಾಗಿ ಬೇಸಿಗೆ ಋತುಗಳಲ್ಲಿ ಅಂಬೆಗಾಲಿಡುತ್ತಾ ಆಗಮಿಸುವ ಪ್ರಥಮ ಹಬ್ಬವೇ ರಂಗು ರಂಗಿನ ಹೋಳಿ ಹಬ್ಬ. ಇದನ್ನು ಕಾಮನಹಬ್ಬ, ಹೋಳಿಹಬ್ಬ, ಬಣ್ಣಗಳ ಹಬ್ಬ ಎಂತೆಲ್ಲಾ ಕರೆಯಲಾಗುತ್ತಿದೆ. ಚಿಕ್ಕ ಮಕ್ಕಳಾದಿಯಾಗಿ ಹಿರಿಯ ನಾಗರಿಕರವರೆಗೆ, ಹೆಣ್ಣು- ಗಂಡು ಎಂಬ ಭೇದವಿಲ್ಲದೇ ಜಾತಿ ಕುಲ ಮತಗಳ ಸಂಕೋಲೆಗಳನ್ನು ಕಳಚಿಟ್ಟು ಪ್ರಕೃತಿಯ ಅದ್ಭುತ ಸೃಷ್ಟಿಗಳಾದ ಹತ್ತಾರು ಬಗೆಯ ಬಣ್ಣಗಳನ್ನು ಪರಸ್ಪರ ಒಬ್ಬರ ಮೇಲೊಬ್ಬರು ಆನಂದಿಂದ ಎರಚುವ ಈ ಹಬ್ಬದ ಸಂಭ್ರಮವನ್ನು ವರ್ಣಿಸಲು ಪದಗಳಿಂದ ಸಾಧ್ಯವಿಲ್ಲ.

ಕಾಮನ ಹುಣ್ಣಿಮೆಯಂದು ಕಟ್ಟಿಗೆ, ಕುಳ್ಳು, ತೆಂಗಿನ ಮರ ಮುಂತಾದವುಗಳನ್ನು ರಾಶಿ ಹಾಕಿ ಹುಣ್ಣಿಮೆ ರಾತ್ರಿ ರಾಶಿಗೆ ಕಾಮನ ಬೊಂಬೆಯನ್ನು ನಿಲ್ಲಿಸಿ ಪೂಜೆ ಸಲ್ಲಿಸಿದ ನಂತರ ಬೆಂಕಿ ಹಚ್ಚುತ್ತಾರೆ. ಇದು ಶಿವನು ತಪೋಭಂಗ ಮಾಡಿದ ಕಾಮನನ್ನು ತನ್ನ ಹಣೆಯ ೩ನೇ ಕಣ್ಣಿನಿಂದ ಸುಟ್ಟು ಭಸ್ಮ ಮಾಡಿದ ಎಂಬುದರ ಸಂಕೇತವಾಗಿ ಕಾಮನನ್ನು ಸುಡುವ ಸಂಪ್ರದಾಯವಿದೆ.

ಕಾಮನನ್ನು ದಹಿಸಿ ತನ್ನ ಕಾಮನೆಗಳನ್ನು ನಿಯಂತ್ರಿಸಿ ರತಿ ಮನ್ಮಥರಂತೆ ಆದರ್ಶ ದಂಪತಿಗಳಾಗಿ ಬಾಳುವಂತ ಬುದ್ಧಿ ಪರಶಿವ ಎಲ್ಲರಿಗೂ ದಯಪಾಲಿಸಲಿ ಎಂದು ಪ್ರಾರ್ಥಿಸುವ ಮೂಲಕ ಕಾಮಣ್ಣನ ಹಬ್ಬ ಆಚರಿಸುವುದು ವಿಶೇಷ.

ರಾಜ್ಯದ ಹಲವು ಭಾಗಗಳಲ್ಲಿ ಆಚರಿಸುವ ಕಾಮನ ಹುಣ್ಣಿಮೆಯ ಅಂಗವಾಗಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಅದೇ ರೀತಿಯಾಗಿ ಶಿರಹಟ್ಟಿಯಲ್ಲಿ ಹೋಳಿ ಆಚರಣೆಯನ್ನು ವಿಶೇಷವಾಗಿ ಆಚರಣೆ ಮಾಡುತ್ತಾರೆ. ಬೃಹತ್ತಾದ ಹುಲಗಾಮನನ್ನು ಸಿದ್ಧಪಡಿಸಿ ಮಂಗಳವಾರ ರಾತ್ರಿಯೇ ಕಾಮನ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕುಂಬಾರ ಓಣಿಯಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿದ ನಂತರ ಬಣ್ಣ ಎರಚುವುದು ಪ್ರಾರಂಭವಾಗುತ್ತದೆ.

ರಸ್ತೆಗಳಲ್ಲಿ ಯುವಕರ ಗುಂಪುಗಳು ಹಲಗೆ ಬಡಿದು ಕುಣಿಯುತ್ತ ಸ್ನೇಹಿತರಿಗೆ, ಪರಿಚಯಸ್ತರಿಗೆ ಬಣ್ಣ ಎರಚಿ ಹೋಳಿ ಹಬ್ಬದ ಶುಭಾಶಯ ಕೋರಿದರು. ಪಟ್ಟಣದ ಕುಂಬಾರ ಓಣಿ, ಮರಾಠಾ ಗಲ್ಲಿ, ಮಹಿಷಿ ಓಣಿ, ಕುರುಬರ ಓಣಿ, ಮ್ಯಾಗೇರಿ ಓಣಿ, ಅಂಬೇಡಕರ ನಗರ, ವಿಜಯ ನಗರ, ವಿದ್ಯಾ ನಗರ ಹೀಗೆ ಎಲ್ಲೆಡೆ ಜನರು ಪರಸ್ಪರ ಬಣ್ಣ ಹಚ್ಚುವ ಮೂಲಕ ಜಾನಪದ ಹಾಡು ಹೇಳುತ್ತಾ ಸಂಭ್ರಮಿಸಿದರು.

ಬಣ್ಣದಾಟದಲ್ಲಿ ಯುವಕರೇ ಹೆಚ್ಚಾಗಿದ್ದರು. ಬೈಕ್‌ಗಳಲ್ಲಿ ಬಡಾವಣೆಯಿಂದ ಬಡಾವಣೆಗೆ ಸುತ್ತುತ್ತಾ ಎಲ್ಲರಿಗೂ ಬಣ್ಣ ಹಚ್ಚುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರತಿ- ಮನ್ಮಥರನ್ನು ಪ್ರತಿಷ್ಠಾಪಿಸಿದ್ದ ಕೆಲವು ಓಣಿಗಳಲ್ಲಿ ಮಕ್ಕಳು, ಮಹಿಳೆಯರೆಲ್ಲರೂ ಬಣ್ಣದಾಟ ಆಡಿದರು. ಪಟ್ಟಣದ ಜನರೆಲ್ಲ ಒಂದಾಗಿ ಜಾತಿ, ಧರ್ಮದ ಭೇದವಿಲ್ಲದೇ ಹಬ್ಬ ಆಚರಿಸಿದ್ದು ವಿಶೇಷ. ಯುವಕರು ಗುಂಪು ಗುಂಪಾಗಿ ಹಲಗೆ ಬಡಿದು ಕುಣಿಯುತ್ತಾ ಬಣ್ಣ ಎರಚುತ್ತಿದ್ದರಿಂದ ಪಟ್ಟಣದ ಎಲ್ಲ ಬಡಾವಣೆಗಳು, ಪ್ರಮುಖ ರಸ್ತೆಗಳು ರಂಗೇರಿದ್ದವು. ಕೆಂಪು, ಹಸಿರು, ಕೇಸರಿ, ಹಳದಿ, ನೀಲಿ ಹೀಗೆ ಎಲ್ಲ ಬಣ್ಣಗಳು ಗಾಳಿಯಲ್ಲಿ ತೂರಲ್ಪಟ್ಟವು.

ಸಣ್ಣ ಮಕ್ಕಳಂತು ಪಿಚಕಾರಿ ಹಿಡಿದು ಹಿಂದಿನಿಂದ ಬಣ್ಣದ ನೀರು ಹಾಕಿ ಓಡುತ್ತಿದ್ದರು. ವಿಚಿತ್ರ ವೇಷಧಾರಿಗಳು ಬಣ್ಣ ಎರಚುತ್ತಾ ಅಡ್ಡಾಡುತ್ತಿದ್ದರು. ತಲೆಗೆ ಋಷಿಗಳ ರೀತಿಯಲ್ಲಿ ಕೂದಲು ಕಟ್ಟಿಕೊಂಡು ಕೆಲವರು ಅಡ್ಡಾಡಿದರೆ, ಇನ್ನು ಕೆಲವರು ಮುಖವಾಡಗಳ ಹಾಕಿಕೊಂಡು, ಜೋಕರ್ ಟೋಪಿ ಸಿಕ್ಕಿಕೊಂಡು ತಮಟೆ ಶಬ್ದಕ್ಕೆ ಹೆಜ್ಜೆ ಹಾಕುತ್ತಿದ್ದರು. ಮಧ್ಯಾಹ್ನ ೧೨ ಗಂಟೆಯಾದರೂ ಬಣ್ಣ ಕೊಳ್ಳುವುದು, ಬಣ್ಣ ಹಚ್ಚುವುದು ಮುಂದುವರೆದಿತ್ತು. ರಂಗಿನಾಟ ನಿಲ್ಲಿಸುವ ಮನಸ್ಸು ಯಾರಿಗೂ ಇದ್ದಂತಿರಲಿಲ್ಲ.

ಪೊಲೀಸ್ ಬಂದೋಬಸ್ತ-

ಬಣ್ಣದಾಟದ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಚೆನ್ನಯ್ಯ ದೇವೂರ ಅವರು ಬಿಗಿಯಾದ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು. ಎಲ್ಲಾ ವೃತ್ತಗಳಲ್ಲೂ ಪೊಲೀಸ್‌ರನ್ನು ನಿಯೋಜಿಸಲಾಗಿತ್ತು. ಬಣ್ಣದಾಟದ ನಂತರ ರಂಗಪಂಚಮಿಯ ಭವ್ಯ ಮೆರವಣಿಗೆ ನಡೆಯಿತು. ಪಟ್ಟಣದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ರತಿ-ಮನ್ಮಥರನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ರಗ್ಗಲಗಿ, ತಮಟೆ ಇತ್ಯಾದಿ ವಾದ್ಯಗಳೊಂದಿಗೆ ಕುಣಿದು ಕುಪ್ಪಳಿಸಿದ ಯುವಕರು, ಬಣ್ಣ ಹಚ್ಚುವುದನ್ನು ಮೆರವಣಿಗೆಯಲ್ಲೂ ಮುಂದುವರೆಸಿದ್ದರು.

Share this article