ಕನ್ನಡಪ್ರಭ ವಾರ್ತೆ ಬೆಂಗಳೂರು
ಸಾಲುಸಾಲು ರಜೆ ಹಿನ್ನೆಲೆ ಗುರುವಾರ ರಾತ್ರಿಯಿಂದ ಸಂಚರಿಸುವ ಖಾಸಗಿ ಬಸ್‌ಗಳು ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಮಾಮೂಲಿ ದರಕ್ಕಿಂತ ದುಪಟ್ಟು ಪ್ರಯಾಣ ದರ ನಿಗದಿ ಮಾಡಿವೆ. ಸಾರಿಗೆ ಇಲಾಖೆ ಎಚ್ಚರಿಕೆಯನ್ನೂ ಲೆಕ್ಕಿಸದೆ ಪ್ರಯಾಣಿಕರನ್ನು ಸುಲಿಗೆ ಮಾಡುವುದನ್ನು ತಡೆಯಲು ಸಾರಿಗೆ ಇಲಾಖೆ ಗುರುವಾರದಿಂದ ತಪಾಸಣಾ ಕಾರ್ಯ ಆರಂಭಿಸಲಿದೆ.
ಪ್ರತಿ ಬಾರಿ ಹಬ್ಬ ಹಾಗೂ ಧೀರ್ಘ ಸರ್ಕಾರಿ ರಜೆ ಇರುವ ಸಂದರ್ಭದಲ್ಲಿ ಬೆಂಗಳೂರಿನಿಂದ ಬೇರೆ ಊರಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಕಾರಣ ಖಾಸಗಿ ಬಸ್‌ಗಳಲ್ಲಿ ಪ್ರಯಾಣ ದರವನ್ನು ದುಪ್ಪಟ್ಟು ಮಾಡಲಾಗುತ್ತದೆ.
ಇದೀಗ ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಮಾ. 8ರಿಂದ 10ರವರೆಗೆ ರಜೆಯಿದ್ದು, ಗುರುವಾರ ರಾತ್ರಿಯಿಂದಲೇ ಬೆಂಗಳೂರಿನಿಂದ ಬೇರೆ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಲಿದೆ. ಅದರ ಲಾಭ ಪಡೆಯಲು ಖಾಸಗಿ ಬಸ್ ಮಾಲೀಕರು ಪ್ರಯಾಣ ದರವನ್ನು ದುಪ್ಪಟ್ಟು ಮಾಡಿದ್ದಾರೆ.
ಸುಲಿಗೆ ತಡೆಗೆ ಸಾರಿಗೆ ಇಲಾಖೆ ಕ್ರಮ: ಖಾಸಗಿ ಬಸ್‌ಗಳು ಪ್ರಯಾಣಿಕರಿಂದ ದುಬಾರಿ ಪ್ರಯಾಣ ದರ ವಸೂಲಿ ಮಾಡುವುದನ್ನು ತಡೆಯಲು ಸಾರಿಗೆ ಇಲಾಖೆ ಬೆಂಗಳೂರು ನಗರದಾದ್ಯಂತ 7 ತಂಡಗಳನ್ನು ರಚಿಸಿ ಗುರುವಾರದಿಂದ ತಪಾಸಣಾ ಕಾರ್ಯ ನಡೆಸಲಿದೆ.
ಒಂದು ತಂಡದಲ್ಲಿ ಒಬ್ಬರು ಆರ್‌ಟಿಒ ಅಧಿಕಾರಿ, ಇಬ್ಬರು ಆರ್‌ಟಿಒ ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಇನ್ನಿತರ ಸಿಬ್ಬಂದಿ ಇರಲಿದ್ದಾರೆ. ಈ ತಂಡ ಬಸ್‌ಗಳಲ್ಲಿ ಟಿಕೆಟ್ ವಿತರಣೆ ಸೇರಿದಂತೆ ಇನ್ನಿತರ ಅಂಶಗಳನ್ನು ಪರಿಶೀಲನೆ ನಡೆಸಲಿವೆ.
ಈ ವೇಳೆ ನಿಗದಿಗಿಂತ ಹೆಚ್ಚಿನ ಪ್ರಯಾಣದರ ವಸೂಲಿ ಮಾಡಿರುವುದು ಪತ್ತೆಯಾದರೆ ಖಾಸಗಿ ಬಸ್ ಮಾಲೀಕರಿಗೆ ದುಬಾರಿ ದಂಡ, ಬಸ್‌ಗಳ ಪರ್ಮಿಟ್ ರದ್ದು ಸೇರಿದಂತೆ ಇನ್ನಿತರ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ದರ ಹೆಚ್ಚಳದ ವಿವರ (ಬೆಂಗಳೂರಿನಿಂದ)
ಮಾರ್ಗಮಾಮೂಲಿ ಟಿಕೆಟ್ ದರಶುಕ್ರವಾರದ ಟಿಕೆಟ್ ದರ
ಶಿವಮೊಗ್ಗ450ರಿಂದ 550 ರು.1 ಸಾವಿರದಿಂದ 1200 ರು.
ಹುಬ್ಬಳ್ಳಿ700ರಿಂದ 900 ರು.1,400ರಿಂದ 1,800 ರು.
ಮಂಗಳೂರು850ರಿಂದ 900 ರು.1,500ರಿಂದ 1,800 ರು.
ಉಡುಪಿ750ರಿಂದ 950 ರು.1,300ರಿಂದ 1,700 ರು.
ಬೆಳಗಾವಿ800ರಿಂದ 1 ಸಾವಿರ ರು.1,600ರಿಂದ 2 ಸಾವಿರ ರು.
ದಾವಣಗೆರೆ500ರಿಂದ 700 ರು.1 ಸಾವಿರದಿಂದ 1,500 ರು.