ಸಿರಿಗೆರೆ: ರಾಜ್ಯದಲ್ಲಿ 2025 ಮತ್ತು ದೇಶದಲ್ಲಿ 2030ರ ಹೊತ್ತಿಗೆ ಕ್ಷಯ ರೋಗ ಮುಕ್ತಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಇದನ್ನು ಸಾಕಾರಗೊಳಿಸಲು ಎಲ್ಲರ ನೆರವು ಅಗತ್ಯವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ತಿಳಿಸಿದರು.
ಸಿರಿಗೆರೆ ಸಮೀಪದ ವಿಜಾಪುರದ ಶಬರಿ ಶಂಕರ ಪ್ರೌಢಶಾಲೆಯಲ್ಲಿ ವಿಜಾಪುರ-ಲಕ್ಷ್ಮೀ ಸಾಗರ ಆರೋಗ್ಯ ಕೇಂದ್ರದವತಿಯಿಂದ ಏರ್ಪಡಿಸಲಾಗಿದ್ದ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡಿದರು.ಯಾರಲ್ಲಿಯಾದರೂ 2 ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು, ಕಫ, ಕಫದಲ್ಲಿ ರಕ್ತ ಬರುವುದು, ತೂಕ ಕಡಿಮೆಯಾಗುವುದು, ಹಸಿವಾಗದಿರುವಂತಹ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಕಫ ಪರೀಕ್ಷೆ ಮಾಡಿಸಬೇಕು. ಕ್ಷಯ ರೋಗ ದೃಢಪಟ್ಟರೆ ರೋಗಿಯ ಮನೆ ಬಾಗಿಲಿಗೆ ಉಚಿತವಾಗಿ ಔಷಧಿ ನೀಡುವುದರ ಮುಖಾಂತರ ರೋಗ ನಿಯಂತ್ರಣಕ್ಕೆ ಕಡಿವಾಣ ಹಾಕಲಾಗುತ್ತದೆ ಎಂದರು.
ಕ್ಷಯ ರೋಗಿಗಳು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ನಿಗದಿತ ಸಮಯದಲ್ಲಿ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದಲ್ಲಿ ರೋಗ ಸಂಪೂರ್ಣವಾಗಿ ಗುಣಪಡಿಸಬಹುದು. ಹದಿಹರೆಯದ ಪ್ರೌಢಾವಸ್ಥೆಯಲ್ಲಿರುವ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಳ್ಳಲು ಶಿಕ್ಷಕರು ಮತ್ತು ಪೋಷಕರ ಮಾರ್ಗದರ್ಶನ ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಮುಖಾಂತರ ಆರೋಗ್ಯವಂತ ದೇಶ ನಿರ್ಮಾಣಕ್ಕೆ ಕೈಜೋಡಿಸಬೇಕೆಂದರು.ವೈಯಕ್ತಿಕ ಸ್ವಚ್ಛತೆ ಮತ್ತು ಪರಿಸರ ಸ್ವಚ್ಛತೆ ಕಾಪಾಡಿಕೊಂಡು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಬೇಸಿಗೆ ಸಮೀಪಿಸುತ್ತಿರುವುದರಿಂದ ನೀರನ್ನು ಮಿತವಾಗಿ ಬಳಸಿ, ಶುದ್ಧ ಕುಡಿಯುವ ನೀರಿನ ಬಳಕೆ ಮಾಡಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ಮುಖ್ಯ ಅತಿಥಿಯಾಗಿದ್ದ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಜನರ ಆರೋಗ್ಯ ಕಾಪಾಡುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅಪಾರವಾದ ವೆಚ್ಚ ಮಾಡುತ್ತಿವೆ. ಜನರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಎಪಿಎಲ್ ಅಥವಾ ಬಿಪಿಎಲ್ ಕುಟುಂಬದವರು ಆಧಾರ್ ಕಾರ್ಡಿನೊಂದಿಗೆ ಮೊಬೈಲ್‌ನಲ್ಲಿಯೇ ಆಯುಷ್ಮಾನ್ ಆರೋಗ್ಯ ಕರ್ನಾಟಕ ಕಾರ್ಡ್ ಅನ್ನು ನೋಂದಣೆ ಮಾಡಿಕೊಳ್ಳಬಹುದು ಎಂದರು.ಬಿಪಿಎಲ್ ಕುಟುಂಬದವರಿಗೆ ಒಂದು ವರ್ಷಕ್ಕೆ 5 ಲಕ್ಷ ರು.ವರೆಗೆ ಉನ್ನತ ಮಟ್ಟದ ಎಂಪೆನಲ್ ಆಸ್ಪತ್ರೆಗಳಲ್ಲಿ ಉಚಿತ ಶಸ್ತ್ರಚಿಕಿತ್ಸಾ ಸೌಲಭ್ಯ ಹಾಗೂ ಎಪಿಎಲ್ ಕುಟುಂಬದವರಿಗೆ ಶೇ.30ರಷ್ಟು ಆಯುಷ್ಮಾನ್ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಶಸ್ತ್ರಚಿಕಿತ್ಸೆಗಳಿಗೆ ಸರ್ಕಾರ ಸಹಪಾವತಿಸಲಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಗೌರಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್, ತಿಪ್ಪಯ್ಯ ದೈಹಿಕ ಶಿಕ್ಷಕ. ಸಹಶಿಕ್ಷಕರಾದ ಭರತ್ ಕುಮಾರ್, ಕೇಶವಮೂರ್ತಿ ಕಾಂಚನ, ಬಿಂದುಶ್ರೀ ಹಾಗೂ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದರು.