ಹೊನ್ನಾಳಿಯಲ್ಲಿ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿ ಸಂಪನ್ನ

KannadaprabhaNewsNetwork | Published : Dec 16, 2024 12:45 AM

ಸಾರಾಂಶ

ಹೊನ್ನಾಳಿ ಪಟ್ಟಣದ ದೊಡ್ಡಕೇರಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯಿಂದ ಕಾರ್ತಿಕೋತ್ಸವದ ಅಂಗವಾಗಿ ಅಂತಿಮ ದಿನದ ಕುಸ್ತಿ ಪಂದ್ಯಾವಳಿ ಹಾಗೂ ಹೊನಲು ಬೆಳಕಿನ ಕುಸ್ತಿ ಪಂದ್ಯಗಳು ಸಂಪನ್ನಗೊಂಡವು.

- ಅಥಣಿಯ ಮಹೇಶ್ ವಿರುದ್ಧ ಪುಣೆಯ ಫಾರೂಕ್, ಪುಣೆಯ ಶ್ರೀನಿವಾಸ್ ವಿರುದ್ಧ ಕಾಮೇಶ್ ಪಾಟೀಲ್ ಜಯಭೇರಿ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ದೊಡ್ಡಕೇರಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯಿಂದ ಕಾರ್ತಿಕೋತ್ಸವದ ಅಂಗವಾಗಿ ಅಂತಿಮ ದಿನದ ಕುಸ್ತಿ ಪಂದ್ಯಾವಳಿ ಹಾಗೂ ಹೊನಲು ಬೆಳಕಿನ ಕುಸ್ತಿ ಪಂದ್ಯಗಳು ಸಂಪನ್ನಗೊಂಡವು.

ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಶ್ಯಾಮ್ ವರ್ಗೀಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಬೆಳ್ಳಿಗದೆ ಹಿಡಿದು ಅಖಾಡವನ್ನು ಒಂದು ಸುತ್ತು ಸುತ್ತಿ ಬಂದು ಹೊನಲು ಬೆಳಕಿನ ಕುಸ್ತಿ ಪಂದ್ಯಕ್ಕೆ ಚಾಲನೆ ನೀಡಿದರು. ಮೂರನೇ ದಿನವಾದ ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ ಆರಂಭವಾದ ಕುಸ್ತಿ ಪಂದ್ಯಗಳು ರಾತ್ರಿ 8.30 ಗಂಟೆಯವರೆಗೂ ಕುಸ್ತಿ ಪಂದ್ಯಗಳನ್ನು ನಡೆಸಲಾಯಿತು.

ಹೊನಲು ಬೆಳಕಿನ ಕುಸ್ತಿ ಪಂದ್ಯದಲ್ಲಿ ಕರ್ನಾಟಕ ಕೇಸರಿ ಅಥಣಿಯ ಮಹೇಶ್ ವಿರುದ್ಧ ರಾಷ್ಟ್ರಪ್ರಶಸ್ತಿ ವಿಜೇತ ಪುಣೆಯ ಫಾರೂಕ್ ಅವರು ಸೆಣಸಿ ವಿಜೇತರಾದರು. ಅವರಿಗೆ ₹50 ಸಾವಿರ ನಗದು ಹಾಗೂ ಬೆಳ್ಳಿ ಗದೆಯನ್ನು ನೀಡಲಾಯಿತು. ಅಂತೆಯೇ, ಪುಣೆಯ ಪೈಲ್ವಾನ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ್ ಪಾತ್ರೋಟ ವಿರುದ್ಧ ಕರ್ನಾಟಕ ಕಂಠೀರವ ಪ್ರಶಸ್ತಿ ವಿಜೇತ ಕಾಮೇಶ್ ಪಾಟೀಲ್ ಸೆಣಸಿ ವಿಜೇತರಾದರು. ಅವರಿಗೆ ₹50 ಸಾವಿರ ನಗದು ಹಾಗೂ ಬೆಳ್ಳಿಗದೆ ನೀಡಲಾಯಿತು.

ಕುಸ್ತಿ ಪಂದ್ಯದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸುರೇಂದ್ರಗೌಡ, ದೇವರ ಗಣಮಕ್ಕಳು ಪ್ರಭುಸ್ವಾಮಿ, ಅಣ್ಣಪ್ಪಸ್ವಾಮಿ, ಎಚ್.ಬಿ. ಗಿಡ್ಡಪ್ಪ, ತೆಂಗಿನಮರದ ಮಾದಪ್ಪ, ಗೌಡರ ನರಸಪ್ಪ, ಬುದ್ಧಿವಂತರ ನರಸಿಂಹಪ್ಪ, ಹಿರಿಯ ಮುಖಂಡರಾದ ಎಚ್.ಎ. ಉಮಾಪತಿ, ಎಂ.ಆರ್. ಮಹೇಶ್, ಸಿಪಿಐ ಸುನೀಲ್‌ಕುಮಾರ್, ಪುರಸಭೆ ಅಧ್ಯಕ್ಷ ಮೈಲಪ್ಪ, ಸದಸ್ಯರಾದ ಧರ್ಮಪ್ಪ, ಕೆ.ವಿ. ಶ್ರೀಧರ್, ಎಚ್.ಡಿ. ವಿಜೇಂದ್ರಪ್ಪ, ರಂಗಪ್ಪ, ಕಾಟ್ಯಾ ಕುಮಾರ್, ರವಿಗಾಳಿ, ಕತ್ತಿಗೆ ನಾಗರಾಜ್ ಗಣ್ಯರು ಉಪಸ್ಥಿತರಿದ್ದರು.

- - -

ಬಾಕ್ಸ್‌ * ಸರ್ಕಾರಿ ಕೆಲಸಕ್ಕೆ ಕುಸ್ತಿ ಕ್ರೀಡೆ ಪೂರಕ: ಮಂಜಪ್ಪ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಕುಸ್ತಿಗೆ ಹೆಚ್ಚು ಆದ್ಯತೆ ನೀಡುವ ಉದ್ದೇಶದಿಂದ ಸುಮಾರು 65 ವರ್ಷಗಳಿಂದ ಹಿರಿಯರು ಹೊನ್ನಾಳಿಯಲ್ಲಿ ಕುಸ್ತಿ ಪಂದ್ಯಗಳನ್ನು ನಡೆಸುತ್ತಿದ್ದಾರೆ. ಈಗ ನಾವು ಆ ಜನಪದ ಕ್ರೀಡೆಯನ್ನು ಮುಂದುವರಿಸುತ್ತಿದ್ದೇವೆ. ಯುವಕರು ವಿದ್ಯಾಭ್ಯಾಸದ ಜೊತೆಗೆ ಕುಸ್ತಿ ಸೇರಿದಂತೆ ಇತರೆ ಕ್ರೀಡಾ ಖೋಟಾದಡಿಯಲ್ಲಿ ಸರ್ಕಾರಿ ಕೆಲಸಗಳನ್ನು ದಕ್ಕಿಸಿಕೊಳ್ಳಲು ಸಾಧ್ಯವಿದೆ ಎಂದರು. ಈ ಬಾರಿ ಧಾರವಾಡ, ಕೊಲ್ಲಾಪುರ, ಹರಪನಹಳ್ಳಿ, ಮೈಸೂರು, ಶಿಕಾರಿಪುರ, ಶಿವಮೊಗ್ಗ, ಬೊಮ್ಮನಹಳ್ಳಿ, ಹಿತ್ತಲ, ಮಾಸೂರು, ಬೆಳಗಾಂ, ಜಮಖಂಡಿ, ಮುಂಡುಗೋಡು, ಮೂಡಬಿದಿರೆ, ಗುಲ್ಬರ್ಗಾ, ಅಥಣಿ, ಪುಣೆ ಭಾಗಗಳಿಂದ ಕುಸ್ತಿಪಟುಗಳು ಆಗಮಿಸಿದ್ದವು. ಅಂದಾಜು ₹3 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ವಿಜೇತ ಪೈಲ್ವಾನರಿಗೆ ಬಹಮಾನವಾಗಿ ನೀಡಿ, ಗೌರವಿಸಲಾಗಿದೆ ಎಂದರು.

- - - -14ಎಚ್.ಎಲ್.ಐ1:

ಹೊನ್ನಾಳಿಯಲ್ಲಿ ಶುಕ್ರವಾರ ರಾತ್ರಿಯವರೆಗೆ ನಡೆದ ಹೊನಲು ಬೆಳಕಿನ ಕುಸ್ತಿ ಪಂದ್ಯದಲ್ಲಿ ವಿಜೇತರಾದ ಬೆಳಗಾವಿಯ ಕಾಮೇಶ್ ಪಾಟೀಲ್ ಅವರಿಗೆ ಬೆಳ್ಳಿಗದೆ ನೀಡಲಾಯಿತು. ಕುಸ್ತಿ ಕಮಿಟಿ ಅಧ್ಯಕ್ಷ ಎಚ್.ಬಿ.ಅಣ್ಣಪ್ಪ ಹಾಗೂ ಇತರರು ಇದ್ದಾರೆ.

Share this article