ಕನ್ನಡಪ್ರಭ ವಾರ್ತೆ ಗುಬ್ಬಿ
ಜನಸೇವೆಗೆ ಪ್ರತಿನಿಧಿಯಾಗಿ ಆಯ್ಕೆಯಾದ ನಂತರ ಜನಪರ ಕೆಲಸ ಮಾಡುವಾಗ ನನ್ನ ನೇರ ನುಡಿ ಬಹಳ ಜನರಿಗೆ ಬೇಸರ ತರಿಸಿರಬಹುದು. ಆದರೆ ಸುಳ್ಳು ಭರವಸೆ ನೀಡಿ ಜನರಿಗೆ ಮಂಕು ಬೂದಿ ಎರಚುವ ಕೆಲಸವನ್ನು ನಾನೆಂದಿಗೂ ಮಾಡಿಲ್ಲ. ನನ್ನ ಅವಧಿಯಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಸಂಸದ ಜಿ.ಎಸ್.ಬಸವರಾಜು ತಮ್ಮ ಮನದಾಳದ ಮಾತುಗಳನ್ನಾಡಿದರು.ತಾಲೂಕಿನ ನಿಟ್ಟೂರು ಹೋಬಳಿ ಕುಂದರನಹಳ್ಳಿ ಗ್ರಾಮದಲ್ಲಿ ನಡೆದ ‘ಕುಂದರನಹಳ್ಳಿ ಘೋಷಣೆ’ ಎಂಬ ಅಭಿವೃದ್ಧಿ ನಿರ್ಣಯ ಕೈಗೊಳ್ಳುವ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಡತನ ರೇಖೆಗಿಂತ ಕೆಳಗಿದ್ದ ಗುಬ್ಬಿ ತಾಲೂಕು ಹೇಮಾವತಿ ನೀರು ಬಂದ ಬಳಿಕ ಪೈಲೆಟ್ ತಾಲೂಕು ಎನಿಸಿದೆ. ಎಚ್ ಎಎಲ್ ಘಟಕ ನಿರ್ಮಾಣದ ಬಳಿಕ ಕೈಗಾರಿಕಾ ವಲಯದಲ್ಲಿ ಕ್ರಾಂತಿ ನಡೆಯಲಿದೆ. 5 ಸಾವಿರ ಉದ್ಯೋಗಿಗಳು ಇಲ್ಲಿ ನೆಲೆಸಿ ಕುಂದರನಹಳ್ಳಿ ನಗರ ಎನಿಸಲಿದೆ ಎಂದರು.
ನೀರಾವರಿ ಯೋಜನೆ ಜಾರಿಯದಂತೆ ತಾಲೂಕಿನಲ್ಲಿ 38 ವಿದ್ಯುತ್ ಉಪಸ್ಥಾವರಗಳು ನಿರ್ಮಾಣವಾಗಿವೆ. ಅತೀ ಹೆಚ್ಚು ಕೊಳವೆಬಾವಿ ಇರುವ ಈ ತಾಲೂಕಿನಲ್ಲಿ 3.50 ಲಕ್ಷ ಐಪಿ ಸೆಟ್ ಇದೆ. ಇವೆಲ್ಲದರ ಜೊತೆ ರೈತರ ಪರ ಕೆಲಸ ಸಾಕಷ್ಟು ನಡೆದಿದೆ ಎಂದ ಅವರು, ಗ್ರಾಮೀಣ ರೈತ ಮಕ್ಕಳಿಗೆ ಉದ್ಯೋಗ ಸೃಷ್ಟಿಯಾಗಬೇಕಿದೆ. ಮುಂದಿನ ದಿನಗಳಲ್ಲಿ ರಾಜಕೀಯ ವಿಚಾರ ಹೊರತುಪಡಿಸಿ ಅಭಿವೃದ್ಧಿ ವಿಚಾರವನ್ನು ಮಾತ್ರ ಚರ್ಚೆ ಮಾಡುತ್ತೇನೆ. ಪಕ್ಷಾತೀತ ನಿಲುವು ನಮ್ಮದಾಗಿರುತ್ತದೆ ಎಂದರು.ನೀರಾವರಿ ಯೋಜನೆಗೆ ಒತ್ತು ನೀಡಿ ಸಿ.ನಂದಿಹಳ್ಳಿ ಸಮೀಪ 185 ಅಡಿ ಎತ್ತರದಲ್ಲಿ ನೀರು ಶೇಖರಣೆ ಮಾಡುವ ಅಣೆಕಟ್ಟು ಹಾಗೂ 22 ಟಿಎಂಸಿ ನೀರು ಸಂಗ್ರಹದ ಡ್ಯಾಂ ಬೊಮ್ಮರಸನಹಳ್ಳಿ ಬಳಿ ಬರಲಿದೆ, ವಸಂತ ಸರಸಾಪುರ ಬಳಿಯ ಕೈಗಾರಿಕಾ ವಲಯ ದೇಶದಲ್ಲಿ ಅತೀ ದೊಡ್ಡ ವಲಯವಾಗಲಿದೆ. ಹೀಗೆಯೇ ಎಚ್ ಎಎಲ್ ಘಟಕ ಸ್ಥಾಪನೆ ವಿಶ್ವಕ್ಕೆ ಪಸರಿಸಿದೆ. ಈ ಕೆಲಸಗಳು ನನ್ನ ಅವಧಿಯಲ್ಲಿ ನಡೆದಿರುವುದು ನೆಮ್ಮದಿ ತಂದಿದೆ ಎಂದರು.
ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸೂಚಿಸಲು ಚಿಂತನ ಮಂಥನ ಕಾರ್ಯಕ್ರಮ ನಡೆಸಲಾಗಿದೆ. ಇಲ್ಲಿ ‘ಕುಂದರನಹಳ್ಳಿ ಘೋಷಣೆ’ ಎಂಬ ಹೆಸರಿನಲ್ಲಿ ನಿರ್ಣಯ ಕೈಗೊಳ್ಳಲು ಎಲ್ಲರ ಅಭಿಪ್ರಾಯ ಕೇಳಲಾಗಿದೆ. ಶಕ್ತಿಪೀಠ ಪೌಂಡೇಷನ್, ಅಭಿವೃದ್ಧಿ ರೆವ್ಯೂಲೇಷನ್ ಫೋರಂ ಜೊತೆಯಲ್ಲಿ ಪ್ರಗತಿಪರ ಚಿಂತಕರ ಜೊತೆಗೂಡಿ ಪ್ರಧಾನಿ ಮೋದಿ ಅವರ ವಿಕಸಿತ ಭಾರತ 2047, ಸಿಎಂ ಸಿದ್ದರಾಮಯ್ಯ ಅವರ ಪರಿಕಲ್ಪನೆಯ ಕರ್ನಾಟಕ ಅಭಿವೃದ್ಧಿ ಮಾದರಿ ಹಾಗೂ ಡಿಸಿಎಂ ಶಿವಕುಮಾರ್ ಅವರ ಬ್ರ್ಯಾಂಡ್ ಬೆಂಗಳೂರು ಈ ಎಲ್ಲಾ ಮಾದರಿಗಳ ಅನುಷ್ಠಾನಕ್ಕೆ ಪಣ ತೊಡುವ ಕೆಲಸ ಮಾಡಲಾಗಿದೆ ಎಂದರು.ಶಕ್ತಿ ಪೀಠದ ಮೂಲಕ ಡಿಜಿಟಲ್ ಅಧ್ಯಯನ, ಜಲ ಪೀಠದಲ್ಲಿ ಊರಿಗೊಂದು ಕೆರೆ, ಆ ಕೆರೆಗೆ ನದಿ ನೀರು ಯೋಜನೆಯಡಿ 3 ಸಾವಿರ ಗ್ರಾಮಗಳಿಗೆ ನೀರು, ಅಭಿವೃದ್ಧಿ ಪೀಠದ ಮೂಲಕ ಕೇಂದ್ರ, ರಾಜ್ಯ ಸರ್ಕಾರದ 545 ಅಧ್ಯಯನ ಪೀಠಗಳು ತಲಾ 5 ಕೋಟಿಯಂತೆ 2725 ಕೋಟಿ ವೆಚ್ಚದಲ್ಲಿ ಸ್ಥಾಪಿಸುವ ಕೆಲಸಕ್ಕೆ ಶ್ರಮಿಸುವುದು ಹಾಗೂ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಪುಸ್ತಕ ಭಂಡಾರ, ಎಚ್ ಎಎಲ್ ಘಟಕದಲ್ಲಿ ಸ್ಟೂಡೆಂಟ್ ಸ್ಪೆಷಲ್ ಏಕನಾಮಿಕ್ ಜೋನ್, ಸ್ಪರ್ಧಾತ್ಮಕ ಪರೀಕ್ಷೆಗಳ ಹಾಸ್ಟೆಲ್ ಹೀಗೆ ಅಬಿವೃದ್ಧಿ ಕೆಲಸಗಳ ಜೊತೆ ತುಮಕೂರು ಜಿಲ್ಲೆ ಡಾಟಾ ಜಿಲ್ಲೆಯನ್ನಾಗಿ ಘೋಷಿಸಿ ಲೋಕಸಭಾ ಅಧ್ಯಯನ ಪೀಠ ಸ್ಥಾಪನೆ ಮಾಡಲಾಗುವುದು. ಈ ಎಲ್ಲಾ ಕಾರ್ಯಗಳಿಗೆ ಆಸಕ್ತರು ಇದೇ ತಿಂಗಳ 15 ರೊಳಗೆ ಸಲಹೆ ನೀಡಬಹುದು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿ ಉಪ ಕುಲಪತಿ ವೆಂಕಟೇಶ್ವರಲು, ಸಂಪನ್ಮೂಲ ವ್ಯಕ್ತಿ ರಘೋತ್ತಮರಾವ್, ಇಂಜಿನಿಯರ್ ಸತ್ಯಾನಂದ, ಪ್ರೊ.ಪರಶುರಾಮ್, ಸಂಪಾದಕ ಎಸ್.ನಾಗಣ್ಣ ಇತರರು ಇದ್ದರು.