ಇಂದು ಸಿಎಂಗೆ ಅದ್ಧೂರಿ ಸನ್ಮಾನ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork | Published : Mar 7, 2024 1:47 AM

ಸಾರಾಂಶ

ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರೆಂದು ಘೋಷಿಸಿದ ಹಿನ್ನೆಲೆ ಮುಖ್ಯಮಂತ್ರಿಗೆ ಅಭಿನಂದಿಸಲಾಗುತ್ತಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಕಾರ್ಯಕ್ರಮಕ್ಕೆ ನೂರಾರು ಮಠಾಧೀಶರು, ಸಚಿವರು ಭಾಗಿ, ವೀರಶೈವ ಲಿಂಗಾಯತ ಮಹಾಸಭಾದಿಂದ ಅಭಿನಂದನೆ. ಬಸವಕಲ್ಯಾಣದ ಥೇರ್‌ ಮೈದಾನ ಸಜ್ಜು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಸವಕಲ್ಯಾಣದಲ್ಲಿ ವೀರಶೈವ ಲಿಂಗಾಯತ ಮಹಾಸಭಾದಿಂದ ಗುರುವಾರ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಅದ್ಧೂರಿ ಆಚರಣೆಗೆ ಥೇರ್‌ ಮೈದಾನವನ್ನು ಸಜ್ಜುಗೊಳಿಸಲಾಗಿದೆ.

ಹತ್ತಾರು ವರ್ಷಗಳಿಂದ ಲಿಂಗಾಯತ ಸಮುದಾಯದ ಪ್ರಮುಖ ಬೇಡಿಕೆಯಾಗಿದ್ದ ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕೆಂಬ ಒತ್ತಾಯಕ್ಕೆ ಸರ್ಕಾರ ಸ್ಪಂದಿಸಿ ಘೋಷಣೆ ಮಾಡಿದ್ದಕ್ಕಾಗಿ ಬಸವಕಲ್ಯಾಣದಲ್ಲಿ ರಾಜ್ಯಮಟ್ಟದ ಬೃಹತ್‌ ಅಭಿನಂದನಾ ಸಮಾರಂಭವನ್ನು ಬಸವಕಲ್ಯಾಣದ ಥೇರ್‌ ಮೈದಾನದಲ್ಲಿ ಗುರುವಾರ ಬೆಳಗ್ಗೆ 11ಕ್ಕೆ ನಡೆಯಲಿದೆ ಎಂದು ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಸಾನ್ನಿಧ್ಯವನ್ನು ನಾಡೋಜ ಬಸವಲಿಂಗ ಪಟ್ಟದ್ದೇವರು ಹಾಗೂ ಹಾರಕೂಡದ ಚನ್ನವೀರ ಶಿವಚಾರ್ಯರು ಒಳಗೊಂಡಂತೆ ಜಿಲ್ಲೆಯ ಹಾಗೂ ರಾಜ್ಯದ ಪ್ರಮುಖ ಮಠಾಧೀಶರು ವಹಿಸಲಿದ್ದಾರೆ. ಅಲ್ಲದೇ ವೀರಶೈವ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳು, ಸಮಾಜ ಚಿಂತಕರು, ಸಾಹಿತಿಗಳು ಭಾಗವಹಿಸಲಿದ್ದಾರೆ. ಈ ಕುರಿತು ಬಸವಕಲ್ಯಾಣದಲ್ಲಿ ಈಗಾಗಲೇ ಎರಡ್ಮೂರು ಸಭೆಗಳು ನಡೆದು ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗಿದೆ.

ಬಸವಣ್ಣನವರು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಅವರು ವಿಶ್ವಗುರು ಆಗುವ ವಿಶ್ವ ಸಾಂಸ್ಕೃತಿಕ ನಾಯಕರಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ. ಕರ್ನಾಟಕ ಸರ್ಕಾರದಿಂದ ಇದು ಪ್ರಾಥಮಿಕ ಹಂತ, ಬಸವಣ್ಣನವರು ವಿಶ್ವಕ್ಕೆ ಶಾಂತಿ ಬಯಸಿದವರು ಸಮಾನತೆ, ಸೌಹಾರ್ದತೆ, ಕಾಯಕ, ದಾಸೋಹ ಮುಂತಾದ ತತ್ವಗಳನ್ನು ನೀಡಿದ್ದಾರೆ. ಹೀಗಾಗಿ, ಈ ಕಾರ್ಯಕ್ರಮ ನಾಡಿನ ಬಸವ ತತ್ವ ಅಭಿಮಾನಿಗಳ ಮತ್ತು ಬಸವಕಲ್ಯಾಣ ಸಮಗ್ರ ಜನತೆಯ ಕಾರ್ಯಕ್ರಮವಾಗಿದೆ. ಎಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ನಿಗದಿತ ಸಮಯದಲ್ಲಿ ಅನುಭವ ಮಂಟಪ ಕಾಮಗಾರಿ ಪೂರ್ತಿ: ಈ ಮೊದಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ನಾನು ಬೀದರ್‌ ಜಿಲ್ಲಾ ಉಸ್ತುವಾರಿ ಸಚಿವನಾಗಿದೆ. ಗೋ.ರು ಚನ್ನಬಸಪ್ಪ ನೇತೃತ್ವದಲ್ಲಿ ನೂತನ ಅನುಭವ ಮಂಟಪ ನಿರ್ಮಾಣದ ರೂಪರೇಷೆಗಳಿಗಾಗಿ ಸಮಿತಿ ರಚಿಸಲಾಗಿದ್ದು ಆ ಸಮಿತಿಯ ವರದಿಯನ್ನು ಸಹ ಸಿದ್ದರಾಮಯ್ಯ ಸ್ವೀಕರಿಸಿದ್ದರು. ಮಧ್ಯದಲ್ಲಿ ಚುನಾವಣೆ ಬಂದು ಸರ್ಕಾರ ಬದಲಾಯಿತು. ನಂತರ ಬಂದ ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ಕಾರ್ಯಕ್ಕೆ ಚಾಲನೆ ನೀಡಿ 200 ಕೋಟಿ ರು. ಒದಗಿಸಿದ್ದು ಸ್ವಾಗತಿಸುತ್ತೇವೆ ಎಂದರು.

ಇದೊಂದು ಸಾಮಾಜಿಕ ಕೆಲಸ, ಇದರಲ್ಲಿ ರಾಜಕಾರಣದ ಅವಶ್ಯಕತೆ ಇಲ್ಲ. ಎಲ್ಲರೂ ಸೇರಿ ಬಸವ ತತ್ವದ ಕೆಲಸ ಮಾಡಬೇಕಾಗಿದೆ. ಇಲ್ಲಿ ನೂತನವಾಗಿ 650 ಕೋಟಿ ರುಪಾಯಿ ವೆಚ್ಚದಿಂದ ನಿರ್ಮಾಣಗೊಳ್ಳುತ್ತಿರುವ ಅನುಭವ ಮಂಟಪ ಕಾಮಗಾರಿಗೆ ಯಾವುದೇ ಹಣಕಾಸಿನ ತೊಂದರೆ ಇಲ್ಲ. ಅದಕ್ಕೆ ಬೇಕಾದ ಎಲ್ಲಾ ರೀತಿಯ ಅನುದಾನವನ್ನು ಒದಗಿಸಲಾಗಿದೆ. ಮುಂದೆಯೂ ಬೇಕಾದ ಎಲ್ಲಾ ಅನುದಾನ ಬಿಡುಗಡೆಗೊಳಿಸಿ ನಿಗದಿತ ಸಮಯದಲ್ಲಿ ಕಟ್ಟದ ಉದ್ಘಾಟಣೆ ಕಾರ್ಯಕ್ರಮ ನಡೆಯಲಿದೆ ಎಂದರು.

Share this article