ಬೆಂಗಳೂರು ಕಾಲೋನಿಯಲ್ಲಿದ್ದ ಸುರಪುರ ನಿವಾಸಿಗಳ ಶೆಡ್‌ಗಳ ನೆಲಸಮಕ್ಕೆ ಆಕ್ರೋಶ, ಧರಣಿ । ಶಾಸಕ ವೇಣುಗೋಪಾಲ ದೌಡು
ಕನ್ನಡಪ್ರಭ ವಾರ್ತೆ ಸುರಪುರಬೆಂಗಳೂರು ನಗರದ ಪೀಣ್ಯ 2ನೇ ಹಂತದ ಬಡಾವಣೆಯ ಎಸ್.ಆರ್.ಎಸ್ ಕಾಲೋನಿಯಲ್ಲಿ ಸುರಪುರ ಮೂಲದ 60ಕ್ಕೂ ಹೆಚ್ಚು ಕಾರ್ಮಿಕ ಕುಟುಂಬಗಳು ವಾಸವಿದ್ದ ಸ್ಥಳವನ್ನು ಏಕಾಏಕಿ ತೆರವುಗೊಳಿಸಿದ ಮಾಹಿತಿ ತಿಳಿಯುತ್ತಿದ್ದಂತೆ, ಶಾಸಕ ರಾಜಾ ವೇಣುಗೋಪಾಲ ನಾಯಕ್ ಸ್ಥಳಕ್ಕೆ ದೌಡಾಯಿಸಿ, ಸ್ಥಳೀಯ ಸಂಘಟನೆಗಳು ಹಾಗೂ ಮಹಾನಗರ ಪಾಲಿಕೆ ಸದಸ್ಯರೊಂದಿಗೆ ಪ್ರತಿಭಟಿಸಿದರು.
ಈ ವೇಳೆ ಮಾತನಾಡಿದ ಶಾಸಕ ರಾಜಾ ವೇಣುಗೋಪಾಲ ನಾಯಕ, ದೊಡ್ಡ ನಗರಗಳಲ್ಲಿ ಮನೆ ನಿರ್ಮಾಣ ಕಾರ್ಯ ಮಾಡುತ್ತಿರುವ ಕಾರ್ಮಿಕರ ಸೂರು ಕಸಿದು ದೌರ್ಜನ್ಯ ಎಸಗುವುದು ಎಷ್ಟರ ಮಟ್ಟಿಗೆ ಸರಿ? ಇಂತಹ ಹೇಯ ಕೃತ್ಯ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಉತ್ತರ ಕರ್ನಾಟಕ ಭಾಗದಿಂದ ಅನೇಕ ಜನ ಜೀವನೊಪಾಯಕ್ಕಾಗಿ ಮಹಾನಗರಗಳನ್ನು ಅರಸಿ ಬರುತ್ತಾರೆ. ಹಲವು ವರ್ಷಗಳಿಂದ ಮತಕ್ಷೇತ್ರದ ಕಾರ್ಮಿಕರು ಪೀಣ್ಯದ ಎಸ್.ಆರ್.ಎಸ್ ಕಾಲೋನಿಯಲ್ಲಿ ವಾಸವಿದ್ದು. ಅವರ ವಾಸಕ್ಕೆ ಅನುಕೂಲಕ್ಕೆ ತಕ್ಕಂತೆ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇದನ್ನು ಸಹಿಸದ ಸ್ಥಳೀಯ ಶಾಸಕ ಮುನಿರತ್ನ ಅವರು ತಮ್ಮ ಬೆಂಬಲಿಗರನ್ನು ಕಳುಹಿಸಿ, ನನ್ನ ಜನರ ಮೇಲೆ ಗೂಂಡಾವರ್ತನೆ ತೋರಿದ್ದಾರೆ ಎಂದು ಆರೋಪಿಸಿದರು.
ಯಾವುದೇ ಕಾರಣ ವಿಲ್ಲದೆ ಏಕಾಏಕಿ ಬಡವರ ಮನೆಗಳು ನೆಲಸಮಗೊಳಿಸುವುದು ದುಷ್ಕೃತ್ಯ, ಅಂಥವರಿಗೆ ನಮ್ಮ ಸರ್ಕಾರ ತಕ್ಕಪಾಠ ಕಲಿಸಲಿದೆ, ಯಾವುದೇ ಕಾರಣಕ್ಕೂ ಬಡ ಕಾರ್ಮಿಕರು ಆತಂಕ ಪಡುವ ಅಗತ್ಯವಿಲ್ಲ. ಕಾರ್ಮಿಕರೊಟ್ಟಿಗೆ ನಮ್ಮ ಸರ್ಕಾರವಿದೆ ಎಂದು ಧೈರ್ಯ ತುಂಬಿದರು.ಬಡ ಕೂಲಿ ಕಾರ್ಮಿಕರ ಮನೆಗಳು ನೆಲಸಮಗೊಳಿಸಿರುವುದನ್ನು ಈಗಾಗಲೇ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳ ಗಮನಕ್ಕೆ ತಂದಿರುವೆ. ಈ ಕೃತ್ಯವ್ಯೆಸಗಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ. ಸಂತ್ರಸ್ತರಿಗೆ ನೆರವು ನೀಡಲು ಮನವಿ ಮಾಡಿಕೊಳ್ಳಲಾಗುವುದು ಎಂದರು.
ಕೆ.ಪಿ.ಸಿ.ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ ಯಾದವ, ವೆಂಕೋಬ ಸಾಹುಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಲಕ್ಷ್ಮಿನಾರಾಯಣ, ಕಾಳಪ್ಪ ಕವಾತಿ, ಪರಮಣ್ಣ ಶಾಂತಪುರ, ರಂಗನಗೌಡ ದೇವಿಕೇರಾ, ಬಸವರಾಜ ಪಡಕೋಟೆ, ಕೆಂಚಪ್ಪ ಪೂಜಾರಿ ಮಾಲಹಳ್ಳಿ, ಬೀರಲಿಂಗ ಬಾದ್ಯಾಪುರ, ಕೃಷ್ಣ ಹಾವಿನ ಸೇರಿ ಇತರರಿದ್ದರು.