ಕನ್ನಡಪ್ರಭ ವಾರ್ತೆ ಮೈಸೂರುಕೃಷಿ,ತೋಟಗಾರಿಕೆಯಲ್ಲಿ ಆಧುನಿಕ ಪದ್ಧತಿಯನ್ನು ಅನುಸರಿಸಿ ಆದಾಯ ಕಂಡುಕೊಳ್ಳಬೇಕು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಬರುವಂತಹ ಬೆಳೆಗಳನ್ನು ಬೆಳೆಯುವ ಕಡೆಗೆ ರೈತರು ಮುಂದಾಗಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ತಾಲೂಕಿನ ತೋಟಗಾರಿಕೆ ಕಾಲೇಜು ಆವರಣದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ಸಹಯೋಗದೊಂದಿಗೆ ಹುಣಸೂರು ತಾಲೂಕಿನ ಕೆಬ್ಬೆಕೊಪ್ಪಲು ಗ್ರಾಮದ ರೈತರಿಗೆ ಏರ್ಪಡಿಸಿದ್ದ ತೋಟಗಾರಿಕೆ ಆಧಾರಿತ ಕೃಷಿ ಪದ್ಧತಿಯ ತರಬೇತಿ ಹಾಗೂ ಪರಿಕರಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಬೇಸಾಯ ತುಂಬಾ ಕಷ್ಟವಾಗಿದೆ. ಏನೇ ಕಷ್ಟವಾದರೂ ಭೂಮಿ ತಾಯಿ ನಂಬಿಕೊಂಡು ಕಷ್ಟಪಟ್ಟು ಬಿತ್ತನೆ ಮಾಡುತ್ತೇವೆ. ಭೀಕರ ಬರಗಾಲ ಬಂದಾಗ ಒಣಗುತ್ತದೆ. ಒಂದೊಮ್ಮೆ ಮಳೆ ಜಾಸ್ತಿಯಾದರೂ ತೊಂದರೆಯಾಗುತ್ತದೆ. ಆದರೆ, ತೋಟಗಾರಿಕೆ ಬೆಳೆಯಲ್ಲಿ ಈ ರೀತಿಯಾಗಲ್ಲ. ತೋಟಗಾರಿಕೆ ಬೆಳೆಗಳನ್ನು ಅನುಸರಿಸಿದರೆ ಶಾಶ್ವತವಾಗಿ ಉಳಿದು ಮೊಮ್ಮಕ್ಕಳ ಕಾಲದ ತನಕವೂ ಉಳಿಸಬಹುದು. ದಾಳಿಂಬೆ, ಸಪೋಟ, ಪಪ್ಪಾಯಿ ಬೆಳೆಯನ್ನು ಸುಲಭವಾಗಿ ಬೆಳೆಯಬಹುದು. ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯವೂ ಬರಲಿದೆ ಎಂದರು.ಹೊಗೆಸೊಪ್ಪು ಬೆಳೆಯುವ ಜತೆಗೆ ತರಕಾರಿ, ಹೂವು ಬೆಳೆದರೆ ಖರ್ಚಿಗೆ ದುಡ್ಡು ಬರಲಿದೆ. ಎರಡು ಎಕರೆಯಲ್ಲಿ ಒಂದು ಎಕರೆಯನ್ನು ಸಮಗ್ರ ಕೃಷಿ ಪದ್ಧತಿಗೆ ಅನುಸರಿಸಬೇಕು. ಇಂದು ತರಕಾರಿ, ಹಣ್ಣುಗಳ ದರ ಹೆಚ್ಚಾಗಿರುವ ಕಾರಣ ಆದಾಯ ಮಾತ್ರ ತಪ್ಪುವುದಿಲ್ಲ. ತೋಟಗಾರಿಕೆ ಕೃಷಿ ಮಾಡಲು ಹೆಚ್ಚು ನೀರು ಬೇಕಿಲ್ಲ. ಹನಿ ನೀರಾವರಿ ಬಳಸಬಹುದು. ಸರ್ಕಾರದಿಂದಲೂ ಹನಿ, ತುಂತುರು ನೀರಾವರಿಗೆ ಸಬ್ಸಿಡಿ ಕೊಡುವುದರಿಂದ ರೈತರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ರೈತರು ಯಾವ ಕಾಲಕ್ಕೆ ಯಾವ ಬೆಳೆಗಳನ್ನು ಹಾಕಬೇಕು. ಯಾವ್ಯಾವ ಸಮಯದಲ್ಲಿ ಬೆಲೆ ಹೆಚ್ಚಾಗುತ್ತವೆ ಎಂಬುದನ್ನು ನೋಡಿ ಬೆಳೆ ಹಾಕಬೇಕು. ತರಕಾರಿ ಪದಾರ್ಥಗಳಿಗೆ ನಿತ್ಯ ಬೆಲೆ ಇದೆ. ಟೋಮಾಟೋ, ಹೂಕೋಸು, ಸೊಪ್ಪಿಗೆ ಬೆಲೆ ಇದ್ದೇ ಇರುತ್ತದೆ. ಇಂತಹವುಗಳನ್ನು ಬೆಳೆಯಬೇಕು ಎಂದು ನುಡಿದರು.ರೈತರು ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿದ್ದಾರೆ. ಮುಂದಿನ ಪೀಳಿಗೆಗೆ ಉಳಿಸಿಕೊಳ್ಳಲು ಯೋಚಿಸುತ್ತಿಲ್ಲ. ಜಮೀನಿನ ಬೆಲೆ ಕೋಟಿ ರೂ. ದಾಟಿದೆ ಎಂದು ಖರೀದಿದಾರರು ಬಂದಾಕ್ಷಣ ಮಾರಿ ಮದುವೆ ಮಾಡುತ್ತಾರೆ. ಕೆಲವರು ಸಾಲ ಮಾಡಿ ಮದುವೆ ಮಾಡಿ ಅಮೇಲೆ ಜಮೀನು ಮಾರಿ ತೀರಿಸುತ್ತಾರೆ. ಅದರ ಬದಲಿಗೆ ಸರಳ ವಿವಾಹ ಮಾಡಿ ಜಮೀನು ಉಳಿಸಿಕೊಳ್ಳಬೇಕು ಎಂದು ಅವರು ರೈತರಲ್ಲಿ ಮನವಿ ಮಾಡಿದರು.
ದುಡಿದರೆ ರೈತ ನೆಮ್ಮದಿಯಾಗಿ ಇರುತ್ತಾನೆ. ಶ್ರೀಮಂತರು ನೆಮ್ಮದಿಯಿಂದ ಇರಲ್ಲ. ಬಡವರು ನೆಮ್ಮದಿಯಿಂದ ಜೀವನ ಮಾಡುತ್ತಾರೆ ಎಂಬುದನ್ನು ಗಮನಿಸಬೇಕು ಎಂದರು. ಹುಣಸೂರು ತಾಲೂಕು ಅಭಿವೃದ್ಧಿಹುಣಸೂರು ತಾಲೂಕಿನಲ್ಲಿ 35 ಸಾವಿರ ಎಕರೆಯಲ್ಲಿ ಸಣ್ಣ ನೀರಾವರಿ ಇದ್ದರೂ ಕೃಷಿ ಮಾಡುತ್ತಿರಲಿಲ್ಲ. ನಾನು ಶಾಸಕನಾದ ಮೇಲೆ ಅದನ್ನು ದೊಡ್ಡ ನೀರಾವರಿಯನ್ನಾಗಿ ಮಾಡಿದ್ದರಿಂದ ತುಂಬಾ ಅನುಕೂಲವಾಯಿತು. ಹೋಬಳಿಗೊಂದು ಕೆಇಬಿ ಸ್ಟೇಷನ್ ಸ್ಥಾಪಿಸಲಾಯಿತು. ಕಟ್ಟೆಮಳಲವಾಡಿಯಲ್ಲಿ 24 ದಿನಗಳಲ್ಲಿ ಚಾನೆಲ್ ತೆಗೆಸಿ ನೀರು ಕೊಡಲಾಯಿತು. ಬಿಳಿಕೆರೆ, ಧರ್ಮಪುರ, ಹಳೇಬೀಡು ಹೋಬಳಿಯಲ್ಲಿ ಹಾಸ್ಟೆಲ್, 16 ಹೈಸ್ಕೂಲ್ ಗಳ ಸ್ಥಾಪನೆ, ಮೂರು ಪದವಿ ಕಾಲೇಜು, ಐದು ಪಿಯು ಕಾಲೇಜು, ಐದು ಪಶು ಆಸ್ಪತ್ರೆಗಳು ಆರಂಭವಾಗುವಂತೆ ಮಾಡಿದ್ದೆ ಎಂದರು.ಹುಣಸೂರು ತಾಲೂಕಿನಲ್ಲಿ ಕೃಷಿ ಚಟುವಟಿಕೆ ಮಾಡಲು ನಾಲೆ, ಕೆರೆಕಟ್ಟೆಗಳು ಇವೆ. ಫಲವತ್ತಾದ ಭೂಮಿ ಇದೆ. ಕೊಡಗಿನಲ್ಲಿ ಫಲವತ್ತತೆ ಇಲ್ಲ. ನಾನು ತೆಂಗಿನ ಮರಗಳನ್ನು ಬೆಳೆಸಿದ್ದೇನೆ. ಸುಮಾರು ವರ್ಷಗಳಿಂದ ತೆಂಗಿಗೆ ಬೆಲೆಯೇ ಸಿಕ್ಕಿರಲಿಲ್ಲ. ತೆಂಗಿನಕಾಯಿ, ಎಳನೀರು, ಕೊಬ್ಬರಿಗೆ ಒಳ್ಳೆಯ ಬೆಲೆ ಬಂದಿದೆ. ಸುಮಾರು ವರ್ಷಗಳಿಂದ ಬೆಲೆಯೇ ಇರಲಿಲ್ಲ. ತೋಟಗಾರಿಕೆ ಬೆಳೆಗಳನ್ನು ಮಾಡದಿದ್ದರೆ ತುಂಬಾ ಕಷ್ಟವಾಗಲಿದೆ ಎಂದು ಹೇಳಿದರು.ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಜನಾರ್ಧನ್ ಅಧ್ಯಕ್ಷತೆ ವಹಿಸಿದ್ದರು. ಗುಂಗ್ರಾಲ್ ಛತ್ರದ ಅಧ್ಯಕ್ಷ ಮಂಜುಳಾ, ಗೇರು ಸಂಶೋಧನಾ ಸಂಸ್ಥೆ ವಿಜ್ಞಾನಿ ಡಾ.ಸಿ.ಎನ್. ಮಂಜೇಶ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ. ನಾಗರಾಜು ಇದ್ದರು.ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಆರ್. ಸಿದ್ದಪ್ಪ, ಡಾ.ಕೆ.ಸಿ. ಕಿರಣಕುಮಾರ್, ಕೆ.ಎಂ. ಶಿವಕುಮಾರ್, ಡಾ. ಮನುಕುಮಾರ್ ಪಾಲ್ಗೊಂಡಿದ್ದರು.---ಕೋಟ್ಹುಣಸೂರಿನ ಕ್ಷೇತ್ರದ ಜನರು ಕೈ ಹಿಡಿದಿದ್ದರಿಂದ ಈ ಮಟ್ಟಕ್ಕೆ ಬಂದಿದ್ದೇನೆ. ಎರಡು ಬಾರಿ ಸೋತಿದ್ದೇನೆ. ಲೋಕಸಭೆಯಲ್ಲಿ ಸೋತಿದ್ದೇನೆ. ಒಮ್ಮೆ ಬಿಜೆಪಿಗೆ ಹೋಗಿದ್ದರಿಂದ ಜನರು ಸೋಲಿಸಿದರು. ಅಂದು ಏನಾದರೂ ಗೆಲ್ಲಿಸಿದ್ದರೆ ಉಪ ಮುಖ್ಯಮಂತ್ರಿಯಾಗಿ ಬಿಡುತ್ತಿದ್ದೆ. ಹುಣಸೂರು ಜನರು ಎಂದರೆ ಎಲ್ಲಿಲ್ಲದ ಪ್ರೀತಿ. ನಾನು ಹುಣಸೂರು ಬಿಟ್ಟು ಬಂದರೂ ಒಂದು ಕಣ್ಣು ಇರುತ್ತದೆ. ನನ್ನ ಪತ್ನಿಯನ್ನು ಜಿಪಂಗೆ ಕಳುಹಿಸಿದ್ದರು. ಈಗ ಮಗನನ್ನು ಗೆಲ್ಲಿಸಿದ್ದಾರೆ.- ಜಿ.ಟಿ. ದೇವೇಗೌಡ, ಶಾಸಕರು.