ಹೊಸಾಕುಳಿ ಸ್ವರ್ಣಗ್ರಾಮ: ಶ್ರೀರಾಘವೇಶ್ವರ ಶ್ರೀ

KannadaprabhaNewsNetwork |  
Published : Mar 10, 2024, 01:48 AM IST
ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶಿರ್ವಚನ ನೀಡುತ್ತಿರುವುದು | Kannada Prabha

ಸಾರಾಂಶ

ಜೀವನದಲ್ಲಿ ಎರಡು ದಾರಿ ಇರುವಂತಹದ್ದು ಒಂದು ಶಿವ, ಇನ್ನೊಂದು ಅಶಿವ. ಶಿವ ಮತ್ತು ಶಿವಪಥ ಎಂದರೆ ಮಂಗಳ, ಶುಭ, ಕಲ್ಯಾಣ, ಒಳಿತು ಎಂದರ್ಥ. ಅಂತಹ ಶಿವಪಥದಲ್ಲಿ ಎಲ್ಲರು ಸಾಗಬೇಕು.

ಹೊನ್ನಾವರ:

ಜೀವನದಲ್ಲಿ ಎರಡು ದಾರಿ ಇರುವಂತಹದ್ದು ಒಂದು ಶಿವ, ಇನ್ನೊಂದು ಅಶಿವ. ಶಿವ ಮತ್ತು ಶಿವಪಥ ಎಂದರೆ ಮಂಗಳ, ಶುಭ, ಕಲ್ಯಾಣ, ಒಳಿತು ಎಂದರ್ಥ. ಅಂತಹ ಶಿವಪಥದಲ್ಲಿ ಎಲ್ಲರು ಸಾಗಬೇಕು ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ತಾಲೂಕಿನ ಹೊಸಾಕುಳಿಯಲ್ಲಿ ಶನಿವಾರ ಉಮಾಮಹೇಶ್ವರ ದೇವಾಲಯದ ಮುಖಮಂಟಪ-ಭಜನಾ ಮಂಟಪ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದರು. ಯಾವುದರಲ್ಲಿ ಜೀವನ ಉದ್ಧಾರ ಆಗುತ್ತದೆಯೋ ಅಂತಹದ್ದೇ ಶಿವ. ನಾವು ಸುಖಪಟ್ಟು ಬೇರೆಯವರು ಸುಖ ಪಡುವಂತೆ ಮಾಡುವುದಾಗಿದೆ ಎಂದರು.ಶಿವನನ್ನು ಸೇರುವ ದಾರಿ ಧರ್ಮ. ಯಾವ ದಾರಿಯಲ್ಲಿ ಹೋದರೆ ನರಕ ಸಿಗುವುದೋ ಅದು ಅಧರ್ಮ. ಧರ್ಮವೇ ನಂದಿಯ ರೂಪದಲ್ಲಿ ಇದೆ. ಅದು ನಾವೆಲ್ಲ ಮಾಡಿದ ಧರ್ಮ, ನಾವು ಮಾಡಿದ ಪುಣ್ಯ. ಆ ಪುಣ್ಯವನ್ನೇ ವಾಹನವನ್ನಾಗಿಸಿಕೊಂಡು ಶಿವ ನಮ್ಮಲ್ಲಿಗೆ ಬಂದು ನಮ್ಮನ್ನು ಅನುಗ್ರಹಿಸುತ್ತಾನೆ ಎಂದರ್ಥವಾಗಿದೆ. ಹಾಗಾಗಿ ನಾವು ಶಿವ ಪಥದಲ್ಲಿ ಸಾಗಬೇಕೆ ಹೊರತು ಅಶಿವ ಪಥದಲ್ಲಲ್ಲ ಎಂದರು.ಇಂದು ದುಡ್ಡು ಕೊಟ್ಟು ವಿಷ ಕೊಂಡುಕೊಂಡು ಊಟ ಮಾಡುತ್ತಿದ್ದೇವೆ. ಬೇಗ ಸಾಯುವ ಆಹಾರವೇ ಪ್ರಿಯವಾಗಿದೆ. ಅಂತಹ ಆಹಾರ ನಮಗೆ ಬೇಡ. ಬಂಗಾರದಂತ ಶರೀರ ಇದೆ. ಬದುಕನ್ನು ಹಾಳು ಮಾಡಿಕೊಳ್ಳುವಂತಹ, ಬೇಗನೆ ರೋಗಗಳು ಬಂದು ಸಾಯುವ ಆಹಾರ ತಿನ್ನುವುದು ಬೇಡ ಎಂದು ಕರೆ ನೀಡಿದರು. ಹೊಸಾಕುಳಿಯನ್ನು ಸ್ವರ್ಣಗ್ರಾಮ ಎಂದು ಶ್ರೀಗಳು ಘೋಷಿಸಿದರು.

ಶಾಸಕ‌ ದಿನಕರ ಶೆಟ್ಟಿ, ಬಿಜೆಪಿ ಮುಖಂಡರಾದ ಶಿವಾನಂದ ಹೆಗಡೆ, ಎಂ.ಜಿ. ಭಟ್ ಸೇರಿದಂತೆ ಗ್ರಾಮದ ಎಲ್ಲ ಸಮುದಾಯದ ಭಕ್ತವೃಂದದವರು ಶ್ರೀಗಳಿಂದ ಫಲ ಮಂತ್ರಾಕ್ಷತೆ ಪಡೆದರು. ಆನಂತರ ದೇವಾಲಯದಲ್ಲಿ ಅನ್ನಸಂತರ್ಪಣೆ ನಡೆಯಿತು.

ಪಾದುಕಾಪೂಜೆ...ಉಮಾಮಹೇಶ್ವರ ದೇವಾಲಯಕ್ಕೆ ಆಗಮಿಸಿದ ಶ್ರೀರಾಘವೇಶ್ವರ ಭಾರತೀ ಶ್ರೀಗಳಿಗೆ ಅದ್ಧೂರಿ ಸ್ವಾಗತ, ಪಾದುಕಾ ಪೂಜೆ ನಡೆಯಿತು. ದೇವಾಲಯದ ಮುಖಮಂಟಪ-ಭಜನಾ ಮಂಟಪ ಲೋಕಾರ್ಪಣೆ ಶ್ರೀಗಳಿಂದ ನಡೆಯಿತು. ಸ್ವರ್ಣಮಂಟಪಸ್ಥಿತ ಶ್ರೀಕರಾರ್ಚಿತ ಶ್ರೀ ಸೀತಾರಾಮಚಂದ್ರಾದಿ ದೇವತಾ ಸೇವೆ, ಸ್ವರ್ಣಪಾದುಕಾ ಪೂಜೆ, ಸ್ವರ್ಣಭಿಕ್ಷಾ, ವಿನಿಯೋಗ ಗ್ರಾಮದ ಸರ್ವಭಜಕರ ವತಿಯಿಂದ ನೆರವೇರಿತು.

PREV

Recommended Stories

ಯಜ್ಞೋಪವಿತ ಧಾರಣೆಯಿಂದ ಮಾನಸಿಕ, ದೈಹಿಕ ಆರೋಗ್ಯ-ಬಾಲಚಂದ್ರಶಾಸ್ತ್ರಿ
ಗಜೇಂದ್ರಗಡ ತಹಸೀಲ್ದಾರ್ ಕಾರ್ಯಾಲಯಕ್ಕೆ ಮಳೆ ನೀರಿನ ಕಾಟ!