ಆಸ್ಪತ್ರೆ ಡಿ ಗ್ರೂಪ್‌ ನೌಕರರಿಗೆ ವೇತನ ದೊರೆಯದೆ ಸಂಕಷ್ಟ

KannadaprabhaNewsNetwork | Published : Jan 6, 2024 2:00 AM

ಸಾರಾಂಶ

. ತಕ್ಷಣವೇ ಬಾಕಿ ಉಳಿದಿರುವ ವೇತನವನ್ನು ನೀಡದಿದ್ದಲ್ಲಿ ವಿರಾಜಪೇಟೆ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿವಿರಾಜಪೇಟೆ ಸರ್ಕಾರಿ ಆಸ್ಪತ್ರೆಯ ಆಸ್ಪತ್ರೆಯ ಡಿ ಗ್ರೂಪ್ ಮತ್ತು ನಾನ್ ಕ್ಲೀನಿಂಗ್ ನೌಕರರಿಗೆ ಕಳೆದ ಮೂರು ತಿಂಗಳಿನಿಂದ ವೇತನ ದೊರಕದೆ ಸಂಕಷ್ಟಕ್ಕೆ ಸಿಲುಕಿರುವುದಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯ ಸ್ವಚ್ಛತಾ ಮತ್ತು ಇತರೆ ಕಾರ್ಮಿಕರ ಸಂಘದ ಕೊಡಗು ಜಿಲ್ಲಾ ಸಮಿತಿಯ ಅಧ್ಯಕ್ಷ ಪಿ.ಆರ್.ಭರತ್ ತಿಳಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಡಿ ಗ್ರೂಪ್ ಮತ್ತು ನಾನ್ ಕ್ಲೀನಿಂಗ್ ನೌಕರರಿಗೆ ಮೂರು ತಿಂಗಳಿನಿಂದ ವೇತನ ನೀಡದೇ ಸಾಲ ಪಡೆದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸಂಘದ ವತಿಯಿಂದ ಸಂಬಂಧಪಟ್ಟ ಗುತ್ತಿಗೆದಾರರನ್ನು ವಿಚಾರಿಸಿದಾಗ ನಮಗೆ ಬಿಲ್ ಪಾವತಿ ಆಗದೇ ಇರುವುದರಿಂದ ಸರಿಯಾದ ರೀತಿಯಲ್ಲಿ ವೇತನ ನೀಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಆಸ್ಪತ್ರೆಯ ಅಧಿಕಾರಿಗಳನ್ನು ವಿಚಾರಿಸಿದಾಗ ವೇತನಕ್ಕಾಗಿ ಮೀಸಲಾಗಿದ್ದ 10 ಲಕ್ಷವನ್ನು ಆಸ್ಪತ್ರೆಯ ಸಾಮಾಗ್ರಿಗಳ ಖರೀದಿಗೆ ಬಳಸಿಕೊಂಡಿರುವುದು ಕಂಡು ಬಂದಿದೆ ಎಂದರು.

ಗುತ್ತಿಗೆ ಆಧಾರದಲ್ಲಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ನೌಕರರ ವೇತನಕ್ಕೆ ಅಡಚಣೆಯಾಗಬಾರದೆನ್ನುವ ದೃಷ್ಟಿಯಿಂದ ಮೀಸಲು ಇರಿಸಿದ್ದ ಹಣವನ್ನು 2022ರಲ್ಲಿ ಆಸ್ಪತ್ರೆಗೆ ಬೆಡ್ ಶೀಟ್, ಹಾಸಿಗೆ ಖರೀದಿಗೆ ಬಳಸಿರುವಂತೆ ತೋರಿಸಲಾಗಿದೆ. ಆದರೆ 2023ನೇ ಸಾಲಿನಲ್ಲಿ ಮತ್ತೆ ಆಸ್ಪತ್ರೆಗೆ ಬೆಟ್‌ಶೀಟ್‌ ಮತ್ತಿತರ ಸಾಮಗ್ರಿಗಳಿಗೆ ಬೇಡಿಕೆ ಇಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕೆಂದು ಒತ್ತಾಯಿಸಿದರು.ಆಸ್ಪತ್ರೆಯ ಕಾರ್ಮಿಕರ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಹೊರಗುತ್ತಿಗೆ ನೌಕರರನ್ನು ಒದಗಿಸುವ ಸಂಸ್ಥೆಯೊಂದು ಎರಡು ತಿಂಗಳ ವೇತನ ನೀಡಿರುವುದಾಗಿ ತಿಳಿದು ಬಂದಿದೆ. ತಕ್ಷಣವೇ ಬಾಕಿ ಉಳಿದಿರುವ ವೇತನವನ್ನು ನೀಡದಿದ್ದಲ್ಲಿ ವಿರಾಜಪೇಟೆ ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಸಮಿತಿ ಕಾರ್ಯದರ್ಶಿ ಹೆಚ್.ಕೆ.ಜಾನಕಿ ಹಾಗೂ ಸದಸ್ಯೆ ಕೆ.ಬಿ.ಬೇಬಿ ಸುದ್ದಿಗೋಷ್ಠಿಯಲ್ಲಿ ಇದ್ದರು.

Share this article