ಕನ್ನಡಪ್ರಭ ವಾರ್ತೆ ಬಳ್ಳಾರಿ
ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕರು ಮುಂಜಾಗ್ರತಾ ಕ್ರಮ ವಹಿಸಬೇಕು.
ಸಾರ್ವಜನಿಕರು ರೇಡಿಯೋ, ಟಿವಿ, ದಿನ ಪತ್ರಿಕೆಗಳಲ್ಲಿ ಬರುವ ಅತಿಯಾದ ಬಿಸಿಲಿನ ಕುರಿತು ಮುನ್ಸೂಚನೆ ಪಡೆದುಕೊಳ್ಳಬೇಕು. ಬಾಯಾರಿಕೆಯಿಲ್ಲದಿದ್ದರೂ ಸಾಕಷ್ಟು ಮತ್ತು ಸಾಧ್ಯವಾದಷ್ಟು ಹೆಚ್ಚಾಗಿ ನೀರನ್ನು ಕುಡಿಯಬೇಕು. ಹಗುರ, ತಿಳಿ-ಬಣ್ಣ, ಸಡಿಲವಾದ ಮತ್ತು ರಂಧ್ರವುಳ್ಳ ಹತ್ತಿ ಬಟ್ಟೆ ಧರಿಸಬೇಕು. ಬಿಸಿಲಿನಲ್ಲಿ ಹೋಗುವಾದ ರಕ್ಷಣಾತ್ಮಕ ಕನ್ನಡಕಗಳು, ಛತ್ರಿ/ಟೋಪಿ, ಬೂಟುಗಳು ಅಥವಾ ಚಪ್ಪಲಿ ಬಳಸಬೇಕು.ಹೊರಗೆ ಹೋಗಿ ಕೆಲಸ ಮಾಡುವವರು ಟೋಪಿ ಅಥವಾ ಛತ್ರಿ ಬಳಸಿ ಮತ್ತು ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಸಹ ಬಳಸಬಹುದು. ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ಶರಬತ್, ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಬಳಸಿ ಅದು ದೇಹವನ್ನು ಪುನಃ ತಂಪಾಗಿಡಲು ಸಹಾಯ ಮಾಡುತ್ತದೆ. ಪ್ರಾಣಿ-ಪಕ್ಷಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸಿ. ಆದಷ್ಟು ಫ್ಯಾನ್‌ಗಳನ್ನು ಬಳಸಿ, ಒದ್ದೆಯಾದ ಬಟ್ಟೆಗಳನ್ನು ಮತ್ತು ಆಗಾಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡಿ, ಕೆಲಸವನ್ನು ಆದಷ್ಟು ತಂಪಾದ ಸಮಯದಲ್ಲಿ ಮಾಡುವುದು ಉತ್ತಮ ಹಾಗೂ ಕೆಲಸದ ಸ್ಥಳದ ಬಳಿ ತಂಪಾದ ಕುಡಿಯುವ ನೀರನ್ನು ಇರಿಸಿಕೊಳ್ಳಬೇಕು.
ಮಕ್ಕಳು ಅಥವಾ ಸಾಕುಪ್ರಾಣಿಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದ ವಾಹನಗಳ ಹತ್ತಿರ ಬಿಡಬಾರದು. ವಾಹನಗಳ ಒಳಾಂಗಣದಲ್ಲಿನ ಹೆಚ್ಚಿನ ತಾಪಮಾನವು ಅವರಿಗೆ ಮತ್ತು ಅವುಗಳಿಗೆ ಅಪಾಯಕಾರಿಯಾಗಬಹುದು. ಕಪ್ಪುಬಟ್ಟೆ ಅಥವಾ ಬಿಗಿಯಾದ ಬಟ್ಟೆ ಧರಿಸುವುದನ್ನು ತಪ್ಪಿಸಿ. ಹೊರಗಿನ ತಾಪಮಾನ ಹೆಚ್ಚಾದಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ. ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ರವರೆಗೆ ಹೊರಗೆ ಕೆಲಸ ಮಾಡುವುದನ್ನು ತಪ್ಪಿಸಬೇಕು. ಬಿಸಿಲಿನ ಸಮಯದಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಬೇಕು. ಅಡುಗೆ ಪ್ರದೇಶವನ್ನು ಸಮರ್ಪಕವಾಗಿ ಗಾಳಿಯಾಡಲು ಬಾಗಿಲು ಮತ್ತು ಕಿಟಕಿ ತೆರೆಯಬೇಕು. ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಹಾನಿಕಾರಕ ತಂಪು ಪಾನೀಯಗಳನ್ನು ಸೇವಿಸಬೇಡಿ. ಹಾನಿಕಾರಕವಾದ ಆಹಾರ ಮತ್ತು ಹಳಸಿದ ಆಹಾರವನ್ನು ಸೇವಿಸಬಾರದು. ಚಪ್ಪಲಿ ಧರಿಸದೆ ಹೊರಹೋಗುವ ಅಭ್ಯಾಸ ತಪ್ಪಿಸಬೇಕು.
ಸಾರ್ವಜನಿಕರಿಗೆ ಯಾವುದೇ ತೊಂದರೆಗಳು ಕಂಡುಬಂದಲ್ಲಿ ತುರ್ತು ಸಹಾಯಕ್ಕಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರದ ದೂ.08392-277100 ಮತ್ತು ಮೊ.8277888866 ಗೆ ಕರೆಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.