ರೋಗಿಗಳಿಗೆ ಕುಡಿಯಲು ನೀರು ಸಹ ಕೊಡದಿದ್ದರೆ ಹೇಗೆ ?

KannadaprabhaNewsNetwork | Published : Aug 15, 2024 1:57 AM

ಸಾರಾಂಶ

ಪಾವಗಡ ತಾಲೂಕು ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಭೇಟಿ ನೀಡಿ ಪರಿಶೀಲನೆ

ಕನ್ನಡಪ್ರಭ ವಾರ್ತೆ ತುಮಕೂರುಪಾವಗಡ ತಾಲೂಕು ಸಿಕೆ ಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ ಕಂಡು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌದರಿ ಅವರು ಪಾವಗಡ ತಾಲೂಕು ವೈದ್ಯಾಧಿಕಾರಿ ಡಾ. ಕಿರಣ್ ರನ್ನು ತರಾಟೆಗೆ ತೆಗೆದುಕೊಂಡರು.ಪಾವಗಡ ತಾಲೂಕು ಸಿಕೆಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಆರೋಗ್ಯ ತಪಾಸಣಾ ಅಭಿಯಾನ ಮತ್ತು ಗರ್ಭಿಣಿಯರ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ಸಿಕೆಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು.ಶೌಚಗೃಹ ಬಳಸಿಯೇ ಇಲ್ಲ

ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯಗಳಿದ್ದರೂ ಜನರ ಸೇವೆ ಮಾಡುವುದಕ್ಕೆ ಏನಾಗಿದೆ ಎಂದು ಕೋಪಗೊಂಡ ಅವರು ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ಜನರು ಸಮಸ್ಯೆಯನ್ನು ಅನುಭವಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ಅವರು ಶೀಘ್ರವಾಗಿ ಸಮಸ್ಯೆಗಳನ್ನು ಬಗೆಹರಿಸಿ ಮಾಹಿತಿ ನೀಡುವಂತೆ ಸೂಚಿಸಿದರು. ಸಿಕೆಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಶೌಚಗೃಹವನ್ನು ಗಮನಿಸಿದ ಅವರು ಆಸ್ಪತ್ರೆ ಪ್ರಾರಂಭವಾದಾಗಿಂದ ಶೌಚಗೃಹ ಬಳಸಿಯೇ ಇಲ್ಲ. ಇದೇ ಹಾದಿಯಲ್ಲಿ ಮುಂದುವರೆದರೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳನ್ನು ಅಮಾನತುಗೊಳಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಹೇಳುತ್ತಾ ಅಲ್ಲಿಯೇ ಇದ್ದ ತಹಸೀಲ್ದಾರ್ ವರದರಾಜು ಹಾಗೂ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಮ್ ಅವರನ್ನು ತಾವು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವುದಿಲ್ಲವೇ ಎಂದು ತರಾಟೆ ತೆಗೆದುಕೊಂಡರು. ನಂತರ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಅವರು ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲದಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಆಸ್ಪತ್ರೆಗೆ ಕನಿಷ್ಠ ಕುಡಿಯುವ ನೀರಿನ ಸೌಲಭ್ಯವನ್ನು ಮಾಡದೇ ಇದ್ದರೆ ತಾವೆಲ್ಲ ಇರುವುದು ಏತಕ್ಕೆ ಎಂದರು. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡ ಅವರು ಈ ಬಗ್ಗೆ ಸ್ಥಳದಲ್ಲಿಯೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿಯನ್ನು ಪಡೆದರು. ಪ್ರಸವ ನಂತರದ ಕೊಠಡಿಗೆ ಭೇಟಿ ನೀಡಿದ ಅವರು ಬಾಣಂತಿಯರ ಆರೋಗ್ಯವನ್ನು ವಿಚಾರಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಪಾವಗಡ ತಾಲೂಕಿನ ಅಧಿಕಾರಿಗಳು ಬೇಜವಾಬ್ದಾರಿತನದಿಂದ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಕನಿಷ್ಟ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವೆಂದರೆ ಆಸ್ಪತ್ರೆ ನಿರ್ವಹಣೆಯನ್ನು ಎಷ್ಟರ ಮಟ್ಟಿಗೆ ನಿಭಾಯಿಸುತ್ತಿದ್ದಾರೆ ಎನ್ನುವುದು ಕಂಡುಬರುತ್ತದೆ. ವೈದ್ಯರ ಕೊರತೆ ಇರುವುದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ವರದಿ ಸಲ್ಲಿಸಿ ಸಮಸ್ಯೆಗಳನ್ನ ಬಗೆಹರಿಸಲು ಮುಂದಾಗುತ್ತೇನೆ ಎಂದರು.ಬಳಿಕ ಪಟ್ಟಣದ ಡಾ: ಬಿ ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಸಮಾಜದಲ್ಲಿ ಎದುರಾಗುವಂತಹ ದೌರ್ಜನ್ಯ ಮತ್ತು ಶೋಷಣೆಗಳಿಗೆ ತಾವು ತಲೆಬಾಗದೆ ಧೈರ್ಯದಿಂದ ಹೋರಾಟ ಮಾಡುವಂತಹ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ, ಸಿಪಿಐ ಸುರೇಶ್, ಸಿಡಿಪಿಓ ಸುನಿತಾ, ತಾಲೂಕು ವೈದ್ಯಾಧಿಕಾರಿ ಡಾ: ಕಿರಣ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ್, ಪಶುಪಾಲನಾ ಇಲಾಖೆಯ ಹೊರಕೆರಪ್ಪ, ತೋಟಗಾರಿಕಾ ಇಲಾಖೆಯ ವಿಶ್ವನಾಥ್ ಗೌಡ, ಬೆಸ್ಕಾಂ ಎಇಇ ಕೃಷ್ಣಮೂರ್ತಿ, ಬಿಇಓ ಇಂದ್ರಾಣಮ್ಮ, ಆರೋಗ್ಯ ಅಧಿಕಾರಿ ಶಂಸುದ್ದೀನ್, ಆಡಳಿತ ವೈದ್ಯಧಿಕಾರಿ ಎಎಸ್‌ಎಲ್ ಬಾಬು, ಬಿಸಿಎಂ ಅಧಿಕಾರಿ ಗೋಪಾಲಪ್ಪ, ಯಮುನಾ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Share this article