ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್: ಕೊಡಗಿನಲ್ಲಿ ಕೇವಲ ಶೇ.೨೦ ಪ್ರಗತಿ

KannadaprabhaNewsNetwork | Published : Feb 14, 2024 2:17 AM

ಸಾರಾಂಶ

2019ರ ಏ.1ಕ್ಕಿಂದ ಮೊದಲು ಖರೀದಿಸಿದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ನೋಂದಣಿಗೆ ಸರ್ಕಾರದ ಸೂಚನೆಯಂತೆ ಫೆ.17 ಗಡುವು. ಆದರೆ ಕೊಡಗಿನಲ್ಲಿ ಶೇ.80ರಷ್ಟು ಹಳೆ ವಾಹನಗಳ ನಂಬರ್ ಪ್ಲೇಟ್ ಇನ್ನೂ ಬದಲಾಗಿಲ್ಲ. ಹೊಸ ನಂಬರ್ ಪ್ಲೇಟ್ ಮಾಡಿಸಲು ವಾಹನ ಮಾಲೀಕರು ಮನಸ್ಸು ಮಾಡುತ್ತಿಲ್ಲ. ಇಲ್ಲಿ ಸೂಕ್ತ ಕೇಂದ್ರಗಳ ಕೊರತೆಯೂ ಇದೆ.

ವಿಘ್ನೇಶ್ ಎಂ. ಭೂತಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಹಳೆಯ ವಾಹನಗಳಿಗೆ ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಮಾಡಿಸಲು ಕೊಡಗಿನ ವಾಹನ ಮಾಲೀಕರು ಸಮಸ್ಯೆಗೆ ಸಿಲುಕಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ನೋಂದಣಿ ಕಾರ್ಯ ನಿರೀಕ್ಷೆಯಷ್ಟು ಪ್ರಗತಿ ಕಂಡಿಲ್ಲ. ಜಿಲ್ಲೆಯಲ್ಲಿ ಕೇಂದ್ರಗಳು ಕೂಡ ಇಲ್ಲದಿರುವುದರಿಂದ ವಾಹನ ಮಾಲೀಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೈ ರೆಸಲ್ಯೂಷನ್ ನಂಬರ್ ಪ್ಲೇಟ್ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲವಿದೆ. ಕೊಡಗಿನಲ್ಲಿ ಈ ಬಗ್ಗೆ ಹಲವರಿಗೆ ಮಾಹಿತಿಯ ಕೊರತೆಯೂ ಕಂಡುಬಂದಿದೆ. ಗ್ರಾಮೀಣ ಭಾಗದ ಜನರಿಗೂ ಕೂಡ ನೋಂದಣಿ ಮಾಡಿಸಲು ಅನಾನುಕೂಲ ಉಂಟಾಗಿದೆ. 2019ರ ಏ.1ಕ್ಕಿಂದ ಮೊದಲು ಖರೀದಿಸಿದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ ನೋಂದಣಿಗೆ ಸರ್ಕಾರದ ಸೂಚನೆಯಂತೆ ಫೆ.17 ಗಡುವು. ಆದರೆ ಕೊಡಗಿನಲ್ಲಿ ಶೇ.80ರಷ್ಟು ಹಳೆ ವಾಹನಗಳ ನಂಬರ್ ಪ್ಲೇಟ್ ಇನ್ನೂ ಬದಲಾಗಿಲ್ಲ. ಹೊಸ ನಂಬರ್ ಪ್ಲೇಟ್ ಮಾಡಿಸಲು ವಾಹನ ಮಾಲೀಕರು ಮನಸ್ಸು ಮಾಡುತ್ತಿಲ್ಲ.

ಇತ್ತ ಸಾರಿಗೆ ಇಲಾಖೆ ಕೂಡ ಕಟ್ಟುನಿಟ್ಟಿನ ಕ್ರಮವನ್ನು ಮಾಡುತ್ತಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ಈ ಬಗ್ಗೆ ಯಾವುದೇ ಜಾಗೃತಿ ಮೂಡಿಸುವ ಕೆಲಸವನ್ನು ಕೂಡ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂಬುವುದು ಸಾರ್ವಜನಿಕರ ಆರೋಪವಾಗಿದೆ.

ಕಾಡುವ ಸರ್ವರ್‌ ಸಮಸ್ಯೆ: ಆನ್ ಲೈನ್ ಮೂಲಕ ಹಳೆ ವಾಹನಗಳಿಗೆ ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ನೋಂದಣಿ ಕಾರ್ಯ ಆಗುತ್ತಿರುವುದರಿಂದ ಆಗಾಗ್ಗೆ ಸರ್ವರ್ ಸಮಸ್ಯೆಯೂ ಎದುರಾಗುತ್ತಿದೆ. ಅಲ್ಲದೆ ಫೆ.17ರಂದು ನೋಂದಣಿ ಮಾಡಿಸಿಕೊಳ್ಳಲು ಕೊನೆಯ ದಿನವಾಗಿರುವುದರಿಂದ ವಾಹನ ಮಾಲೀಕರು ಮುಗಿ ಬೀಳುತ್ತಿದ್ದಾರೆ. ಇದರಿಂದ ಒತ್ತಡ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಈ ಆದೇಶವನ್ನು ಹೊರಡಿಸಿದ್ದು, ಅತಿ ಸುರಕ್ಷಿತ ನೋಂದಣಿ ಫಲಕ ಕಡ್ಡಯಗೊಳಿಸಿದೆ. 2019ರ ಎಪ್ರಿಲ್ 1ರಿಂದ ಅನುಷ್ಠಾನಕ್ಕೆ ಬಂದಿದೆ. ಆದರೆ ಅದಕ್ಕಿಂತ ಮೊದಲು ನೋಂದಣಿಯಾಗಿದ್ದ ವಾಹನಗಳಗೂ ಎಚ್.ಎಸ್.ಆರ್.ಪಿ. ಅವಳಡಿಸಲಾಗುತ್ತಿದೆ.

ಪ್ಲೇಟ್‌ ಅಳವಡಿಕೆ ಕೇಂದ್ರಗಳೇ ಇಲ್ಲ!: ಕೊಡಗಿನಲ್ಲಿ ಹೊಸ ಬಗೆಯ ನಂಬರ್ ಪ್ಲೇಟ್ ಬದಲಿಸಲು ಯಾವುದೇ ಕೇಂದ್ರಗಳಿಲ್ಲ‌. ಕೊಡಗಿನಲ್ಲಿ ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ತಯಾರಕರು ಕೂಡ ಇಲ್ಲ. ಪಕ್ಕದ ಮೈಸೂರು ಹಾಗೂ ದ.ಕ. ಜಿಲ್ಲೆಯನ್ನು ಅವಲಂಬಿಸಬೇಕಿದೆ. ಆನ್‌ಲೈನ್‌ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತಿದ್ದು, ಅಲ್ಲಿ ನೀಡುವ ದಿನದಂತೆ ವಾಹನಗಳನ್ನು ತೆಗೆದುಕೊಂಡು ಹೋದರೆ ಅಲ್ಲಿ ನಂಬರ್ ಪ್ಲೇಟ್ ಅನ್ನು ಅಳವಡಿಸಲಾಗುತ್ತಿದೆ. ಇದರಿಂದ ಕೆಲವರು ಮೈಸೂರಿಗೆ ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡರೂ ಕೂಡ ಕೆಲವರಿಗೆ ಮಾರ್ಚ್‌, ಏಪ್ರಿಲ್ ಗೆ ಹೊಸ ನಂಬರ್ ಪ್ಲೇಟ್ ದೊರಕುತ್ತದೆ ಎಂದು ಮಾಹಿತಿ ಲಭ್ಯವಾಗುತ್ತಿದೆ. ಜಿಲ್ಲೆಯ ಕೆಲವು ಶೋರೂಂಗಳಲ್ಲಿ ಕೂಡ ಡೀಲರ್ ಮೂಲಕ ಹೊಸ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಡಲಾಗುತ್ತಿದೆ. ಇತ್ತೀಚೆಗೆ ದ್ವಿಚಕ್ರ ವಾಹನಗಳಿಗೆ ಆನ್ಲೈನ್ ನಲ್ಲಿ ಬುಕ್ಕಿಂಗ್ ಸಿಗುತ್ತಿರಲಿಲ್ಲ. ಆದ್ದರಿಂದ ಈ ಬಗ್ಗೆ ಕೇಂದ್ರ ಕಚೇರಿಗೆ ಫೆ.8ರಂದು ಪತ್ರ ಕಳುಹಿಸುವುದರೊಂದಿಗೆ ಖುದ್ದಾಗಿ ಕೂಡ ದೂರವಾಣಿ ಮೂಲಕ ಮಾಹಿತಿ ನೀಡಲಾಗಿದೆ. ಅಲ್ಲದೆ ಕೊಡಗಿನ ಡೀಲರ್ ಗೂ ಕೂಡ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜು ಹೇಳುತ್ತಾರೆ.ವಿಸ್ತರಣೆ ಸಾಧ್ಯತೆ : ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಮಾಡಿಸಲು 2023ರ ನವೆಂಬರ್ ತಿಂಗಳಿಂದ ಮತ್ತೆ ಮೂರು ತಿಂಗಳ ಅವಕಾಶ ನೀಡಲಾಗಿತ್ತು. ಇದೀಗ ಫೆ.17 ಕೊನೆಯ ದಿನವಾಗಿದೆ. ಆದರೂ ಕೂಡ ಶೇ.80ರಷ್ಟು ವಾಹನಗಳಿಗೆ ಇನ್ನೂ ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಮಾಡಿಸಲು ಸಾಧ್ಯವಾಗಿಲ್ಲ. ಇದರಿಂದ ನೋಂದಣಿ ಅವಧಿಯನ್ನು ಮತ್ತೆ ವಿಸ್ತರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆಸಕ್ತಿ ತೋರದ ವಾಹನ ಮಾಲೀಕರು!

ಹಳೆ ವಾಹನಗಳಿಗೆ ಎಚ್.ಎಸ್.ಆರ್.ಪಿ. ನಂಬರ್ ಪ್ಲೇಟ್ ಬದಲಿಸಲು ಸರ್ಕಾರ ನೀಡಿರುವ ಸಮಯ ಹತ್ತಿರ ಬರುತ್ತಿದೆ. ಆದರೂ ಕೂಡ ಕೊಡಗಿನಲ್ಲಿ ವಾಹನ ಮಾಲೀಕರು ಈ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿಲ್ಲ. ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಕೂಡ ಈ ಬಗ್ಗೆ ಯಾವುದೇ ಮಾಹಿತಿ ಹಾಗೂ ಜಾಗೃತಿ ಮೂಡಿಸದಿರುವುದು ಜನರಲ್ಲಿ ಗೊಂದಲ ಮೂಡಿಸಿದೆ.----------ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಕಡ್ಡಾಯವಾಗಿ ವಾಹನಗಳಿಗೆ ಅಳವಡಿಸಬೇಕೆಂದು ಕೇಂದ್ರದ ಸೂಚನೆಯಿದೆ. ಅದರಂತೆ ಆನ್ಲೈನ್ ಮೂಲಕ ನಾವೂ ಕೂಡ ಬುಕ್ಕಿಂಗ್‌ ಮಾಡಿ ನಮ್ಮ ವಾಹನಗಳನ್ನು ಅಳವಡಿಸುತ್ತಿದ್ದೇವೆ. ಫೆ.17ರಂದು ಕಡೆಯ ದಿನವಾಗಿದ್ದು, ದಿನಾಂಕ ವಿಸ್ತರಿಸುವ ಬಗ್ಗೆ ಚಿಂತನೆ ಸರ್ಕಾರದ ಹಂತದಲ್ಲಿದೆ.

-ನಾಗರಾಜು, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಡಿಕೇರಿ.

Share this article