ಶಿವಾನಂದ ಗೊಂಬಿ ಹುಬ್ಬಳ್ಳಿ
ಹುಬ್ಬಳ್ಳಿ ವಿಮಾನ ನಿಲ್ದಾಣ ಖಾಸಗೀಯವರಿಗೆ ವಹಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.ನಿರೀಕ್ಷಿತ ಮಟ್ಟದಲ್ಲಿ ಆದಾಯ ತಂದುಕೊಡದ 11 ವಿಮಾನ ನಿಲ್ದಾಣಗಳನ್ನು ಪಿಪಿಪಿ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳಿಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಹುಬ್ಬಳ್ಳಿ ನಿಲ್ದಾಣವನ್ನು ಭುವನೇಶ್ವರ ಅಂತಾರಾಷ್ಟ್ರೀಯ ನಿಲ್ದಾಣದೊಂದಿಗೆ ವಿಲೀನಗೊಳಿಸಿ ಖಾಸಗಿಗೆ ನೀಡಲು ಈಗಾಗಲೇ ಪ್ರಕ್ರಿಯೆ ಶುರುವಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಹೀಗಿದೆ ನಿಲ್ದಾಣ:ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಒಂದು ಕೆಫೆ, ವಿಐಪಿ ಲಾಂಜ್ ಇದೆ. ಇವುಗಳನ್ನು ಹೊರತುಪಡಿಸಿದರೆ ಅಷ್ಟೇನೂ ಸೌಲಭ್ಯಗಳಿಲ್ಲ. ಹುಬ್ಬಳ್ಳಿಯಿಂದ ಪ್ರತಿ ವಾರ ಇಂಡಿಗೋ ಸಂಸ್ಥೆಯ 78 ವಿಮಾನಗಳು ಕಾರ್ಯಾಚರಣೆ ನಡೆಸುತ್ತವೆ. ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಪುಣೆಗೆ ಇಲ್ಲಿಂದ ವಿಮಾನ ಹಾರಾಡುತ್ತಿವೆ.ವಿಮಾನ ನಿಲ್ದಾಣದಲ್ಲಿ ಎಎಐ ಪ್ರಾಧಿಕಾರದಡಿ 70 ಸಿಬ್ಬಂದಿ ಇದ್ದರೆ, ಉಳಿದ 250ಕ್ಕೂ ಹೆಚ್ಚು ಸಿಬ್ಬಂದಿ ಖಾಸಗಿ ಏಜೆನ್ಸಿಗಳಿಂದ ನೇಮಕವಾದವರಿದ್ದಾರೆ.
ನಿಲ್ದಾಣ ಮೇಲ್ದರ್ಜೆಗೆ: ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದ್ದು, ಕಾಮಗಾರಿಯೂ ಕಳೆದ ವರ್ಷದಿಂದ ಭರದಿಂದ ಸಾಗಿದೆ. 2026ರ ಮಾರ್ಚ್‌ನಲ್ಲಿ ಪೂರ್ಣವಾಗಲಿದೆ. ಸದ್ಯ 3600 ಚದರ ಮೀಟರ್ ಇರುವ ವಿಮಾನ ನಿಲ್ದಾಣ 20 ಸಾವಿರ ಚದುರ ಮೀಟರ್ ಆಗಲಿದೆ. ಸದ್ಯ 300 ಪ್ರಯಾಣಿಕರು ಏಕಕಾಲಕ್ಕೆ ನಿರ್ಗಮನ, ಆಗಮನದ ಸಾಮರ್ಥ್ಯ ಹೊಂದಿದೆ. ಆದರೆ ಮೇಲ್ದರ್ಜೆಗೇರಿದ ಮೇಲೆ ಬರೋಬ್ಬರಿ 2400 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಲಿದೆ. 3 ಏರ್ ಕ್ರಾಫ್ಟ್ ಸ್ಟ್ಯಾಂಡಿಂಗ್ ಸಾಮರ್ಥ್ಯ ಇದೆ. ಹೊಸ ನಿಲ್ದಾಣದಲ್ಲಿ 10 ಏರ್‌ಕ್ರಾಪ್ಟ್ ಸ್ಟ್ಯಾಂಡಿಂಗ್ ಸಾಮರ್ಥ್ಯ. ನಾಲ್ಕು ಏರೋಬ್ರಿಡ್ಜ್ ಇರಲಿವೆ.ಹೀಗೆ ಮುಂದಿನ ವರ್ಷದೊಳಗೆ ಮೇಲ್ದರ್ಜೆಗೇರಿ ಪ್ರಯಾಣಿಕರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲಿದೆ. ಖಾಸಗಿಗೆ ನೀಡಿದರೆ ಉತ್ತಮ ನಿರ್ವಹಣೆ ಮತ್ತು ಅಭಿವೃದ್ಧಿ ಜತೆಗೆ ಹೆಚ್ಚಿನ ಸೌಲಭ್ಯ ಸಿಗುತ್ತವೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚುತ್ತದೆ ಎಂಬುದು ಕೇಂದ್ರದ ಲೆಕ್ಕಾಚಾರ.
ನಿರ್ವಹಣೆ ಅಭಿವೃದ್ಧಿ ಮಾತ್ರ:ನಿಲ್ದಾಣದ ನಿರ್ವಹಣೆ, ಅಭಿವೃದ್ಧಿ ಹೊಣೆ ಮಾತ್ರ ಖಾಸಗಿ ಸಂಸ್ಥೆಗೆ ನೀಡಲಾಗುತ್ತಿದ್ದು, ವಾಯು ಸಂಚಾರ ದಟ್ಟಣೆ ನಿಯಂತ್ರಣ (ಎಟಿಸಿ) ಮತ್ತು ಸಂವಹನ, ನ್ಯಾವಿಗೇಷನ್ ಮತ್ತು ಕಣ್ಗಾವಲು ವ್ಯವಸ್ಥೆ (ಸಿಎನ್‌ಎಸ್)ಯನ್ನು ಭಾರತ ವಿಮಾನ ನಿಲ್ದಾಣಗಳ ಪ್ರಾಧಿಕಾರವೇ (ಎಎಐ) ನಿರ್ವಹಿಸಲಿದೆ.ಪ್ರಯಾಣಿಕರು ಎಷ್ಟು?: ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜತೆಗೆ ಸಾಕಷ್ಟು ವಿಮಾನಯಾನ ಸಂಸ್ಥೆಗಳು ಇಲ್ಲಿಂದ ಸೇವೆ ಕಲ್ಪಿಸಲು ಉತ್ಸುಕತೆ ತೋರಿಸುತ್ತಿವೆ. ಹೀಗಾಗಿ ವಿಮಾನಗಳ ಸಂಖ್ಯೆಯೂ ಹೆಚ್ಚಾಗುತ್ತಲೇ ಸಾಗಿದೆ. 2021-22ರ ಸಾಲಿನಲ್ಲಿ 1,88,272, 2022-23ರಲ್ಲಿ 3,18,130, 2023-24ರಲ್ಲಿ 3,58,754 ಜನ ಪ್ರಯಾಣಿಸಿದ್ದಾರೆ.
ಯಾವ ರೀತಿ ಇರಲಿದೆ?: ದೆಹಲಿ ಮತ್ತು ಮುಂಬೈ ಏರ್ಪೋರ್ಟ್‌ನ್ನು ಆದಾಯ ಹಂಚಿಕೆ ಮೇಲೆ ಖಾಸಗಿ ಸಂಸ್ಥೆಗೆ ನಿರ್ವಹಣೆ ಹೊಣೆ ನೀಡಲಾಗಿದೆ. ವಾರ್ಷಿಕ ಆದಾಯದಲ್ಲಿ ಅರ್ಧದಷ್ಟು ಎಎಐಗೆ ನೀಡಿದರೆ, ಉಳಿದ ಅರ್ಧದಷ್ಟು ಖಾಸಗಿ ಸಂಸ್ಥೆ ಪಡೆದುಕೊಳ್ಳುತ್ತದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಆಧರಿಸಿ ಎಎಐ ಪ್ರಾಧಿಕಾರಕ್ಕೆ ಹಣ ಪಾವತಿಸಲಾಗುತ್ತದೆಯಂತೆ. ಹುಬ್ಬಳ್ಳಿ ನಿಲ್ದಾಣದ್ದು ಯಾವ ಸ್ವರೂಪದ್ದು ಎಂಬುದನ್ನು ಇನ್ನು ಗೊತ್ತಾಗಬೇಕಿದೆ. ಒಟ್ಟು 30 ವರ್ಷಗಳ ಕಾಲ ಗುತ್ತಿಗೆ ನೀಡುವ ಉದ್ದೇಶವಿದೆ.ಆಕ್ರೋಶ: ವಿಮಾನ ನಿಲ್ದಾಣಗಳನ್ನು ಖಾಸಗಿಗೆ ಕೊಡಲು ಮುಂದಾಗಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಖಾಸಗೀಕರಣಗೊಳಿಸಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಘಟನೆಗಳು ಎಚ್ಚರಿಕೆ ನೀಡಿವೆ.
ದೇಶದ 11 ನಿಲ್ದಾಣಗಳ ಅಭಿವೃದ್ಧಿ ಮತ್ತು ನಿರ್ವಹಣೆ ಜವಾಬ್ದಾರಿ ಖಾಸಗಿ ಸಂಸ್ಥೆಗೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅದರಲ್ಲಿ ಹುಬ್ಬಳ್ಳಿ ನಿಲ್ದಾಣವೂ ಸೇರಿದೆ. ಈಗಾಗಲೇ ಈ ಪ್ರಕ್ರಿಯೆ ಶುರುವಾಗಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ರೂಪೇಶಕುಮಾರ ಹೇಳಿದ್ದಾರೆ.ಹುಬ್ಬಳ್ಳಿ ವಿಮಾನ ನಿಲ್ದಾಣ ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಈ ನಿರ್ಧಾರವನ್ನು ಕೈಬಿಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ಹಿಂದೆ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ ಕೊಡುವಲ್ಲೂ ಸಮಸ್ಯೆಯಾಗಿತ್ತು. ಆಗಲೂ ಹೋರಾಟಮಾಡಿದ್ದೇವು. ಈಗ ಖಾಸಗೀಕರಣ ವಿರೋಧಿಸಿ ಹೋರಾಟ ಮಾಡುತ್ತೇವೆ ಎಂದು ಸಾಮಾಜಿಕ ಹೋರಾಟಗಾರ ರಾಜಶೇಖರ ಮೆಣಸಿನಕಾಯಿ ತಿಳಿಸಿದ್ದಾರೆ.