ಹುಬ್ಬಳ್ಳಿ-ಧಾರವಾಡ ಮಹಾ ನಿರ್ಲಕ್ಷ್ಯ, ಹುಸಿಯಾದ ನಿರೀಕ್ಷೆ

KannadaprabhaNewsNetwork | Published : Mar 7, 2025 11:45 PM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ನಲ್ಲಿ ರಾಜ್ಯದ ಎರಡನೆಯ ದೊಡ್ಡ ನಗರವೆನಿಸಿರುವ ಹುಬ್ಬಳ್ಳಿ- ಧಾರವಾಡವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 16ನೆಯ ಹಾಗೂ ಈ ಸರ್ಕಾರದ 3ನೆಯ ಬಜೆಟ್‌ನಲ್ಲಿ ರಾಜ್ಯದ ಎರಡನೆಯ ದೊಡ್ಡ ನಗರವೆನಿಸಿರುವ ಹುಬ್ಬಳ್ಳಿ- ಧಾರವಾಡವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ. ಯಾವುದೇ ನಿರೀಕ್ಷೆ ಈಡೇರಿಸುವ ಗೋಜಿಗೆ ಹೋಗಿಲ್ಲ.

ಏನೇನು ಸಿಕ್ಕಿದೆ

ಸ್ಟಾರ್ಟ್‌ಅಪ್‌ಗಳಿಗೆ ಉತ್ತೇಜಿಸುವ ಸಲುವಾಗಿ ಕಿಯೋನಿಕ್ಸ್‌ ವತಿಯಿಂದ ಪ್ಲಗ್‌ ಆ್ಯಂಡ್‌ ಫ್ಲೇ ಸೌಲಭ್ಯಗಳನ್ನು ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರವನ್ನು (ಜಿಟಿಸಿ) ರಾಜ್ಯದ 3 ಕಡೆಗಳನ್ನು ಸ್ಥಾಪಿಸುವುದಾಗಿ ಹೇಳಿಕೊಂಡಿದೆ. ಅದರಲ್ಲಿ ಹುಬ್ಬಳ್ಳಿ ಕೂಡ ಸೇರಿಕೊಂಡಿದೆ. ಇದರಿಂದ ತಂತ್ರಜ್ಞಾನದಲ್ಲಿ ಸ್ಟಾರ್ಟ್‌ಅಪ್‌ ಮಾಡುವ ಉದ್ದೇಶ ಹೊಂದಿರುವ ಯುವ ಸಮೂಹಕ್ಕೆ ನೆರವು ಸಿಗಲಿದೆ.

ನಾವೀನ್ಯತೆ ಮತ್ತು ಉದ್ಯಮಶೀಲತೆ ಉತ್ತೇಜಿಸಲು ಸ್ಥಳೀಯ ಆರ್ಥಿಕ ಅಕ್ಸಿಲರೇಟರ್‌ ಕಾರ್ಯಕ್ರಮ (LEAP) ಪ್ರಾರಂಭಿಸಲಾಗುತ್ತಿದೆ. ಇದಕ್ಕೆ ಪ್ರಸಕ್ತ ಸಾಲಿನಲ್ಲಿ ಆರು ಜಿಲ್ಲೆಗಳಲ್ಲಿ ₹200 ಕೋಟಿ ವೆಚ್ಚ ವಿನಿಯೋಗಿಸಲಿದೆ. ಅದರಲ್ಲಿ ಹುಬ್ಬಳ್ಳಿ-ಧಾರವಾಡ ಕೂಡ ಒಂದಾಗಿದೆ. ನವೋದ್ಯಮ ಪ್ರಾರಂಭಿಸಲು ವಾತಾವರಣ ಸೃಷ್ಟಿ ಮಾಡುವುದಾಗಿ ಸರ್ಕಾರ ಘೋಷಿಸಿದೆ.

ಇನ್ನು ಜಾಗತಿಕ ಸಾಮರ್ಥ್ಯ ಕೇಂದ್ರಗಳ ವಲಯದಲ್ಲಿ ಕಿಯೋನಿಕ್ಸ್‌ ಮೂಲಕ ಗ್ಲೋಬಲ್‌ ಇನ್ನೋವೇಶನ್‌ ಡಿಸ್ಟ್ರಿಕ್ಟ್‌ ಅನ್ನಾಗಿ ಧಾರವಾಡ ಜಿಲ್ಲೆಯನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿಕೊಂಡಿದೆ. ಈ 3 ಯೋಜನೆಗಳಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಧಾರವಾಡ ಜಿಲ್ಲೆಗೆ ಕೊಂಚ ಆದ್ಯತೆ ನೀಡಿದಂತಾಗಿದೆ.

ಇದಲ್ಲದೇ, ಸಂಚಾರ ನಿಯಮ ಉಲ್ಲಂಘನೆ ತಡೆಯುವ ಉದ್ದೇಶದಿಂದ 10 ಜಿಲ್ಲೆಗಳಲ್ಲಿ 60 ಸ್ಥಳಗಳಲ್ಲಿ ₹50 ಕೋಟಿ ಖರ್ಚು ಮಾಡಿ ಎಐ ಆಧಾರಿತ ಕ್ಯಾಮೆರಾ ಅಳವಡಿಸುವುದಾಗಿ ಘೋಷಿಸಿದೆ. ಅದರಲ್ಲಿ ಧಾರವಾಡ ಜಿಲ್ಲೆಯೂ ಸೇರಿಕೊಂಡಿದೆ. ಅಂದರೆ ಜಿಲ್ಲೆಯಲ್ಲಿ 6 ಕಡೆಗಳಲ್ಲಿ ಎಐ ಆಧಾರಿತ ಕ್ಯಾಮೆರಾಗಳ ಅಳವಡಿಕೆಯಾಗಲಿದೆ.

ಇವುಗಳನ್ನು ಹೊರತುಪಡಿಸಿ ಉಳಿದಂತೆ ಹುಬ್ಬಳ್ಳಿಯಲ್ಲಿನ ದೃಷ್ಟಿದೋಷವುಳ್ಳ ಮಕ್ಕಳ ಪ್ರಾಥಮಿಕ ಶಾಲೆಯನ್ನು ಪ್ರೌಢಶಾಲೆಯನ್ನಾಗಿಸುವುದು. ಅಳ್ನಾವರ, ಅಣ್ಣಿಗೇರಿಯಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಉನ್ನತೀಕರಿಸುವುದಾಗಿ ಹೇಳಿದೆ.

ಹಳೇ ಯೋಜನೆ ಪ್ರಸ್ತಾಪ

ಕಳಸಾ- ಬಂಡೂರಿ ಯೋಜನೆಯನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ. ಪ್ರತಿಸಲದಂತೆ ಕೇಂದ್ರ ಅನುಮೋದನೆ ನೀಡಿದ ಬಳಿಕ ಕಾಮಗಾರಿಗೆ ಆರಂಭ ಎಂದು ಹೇಳಿಕೊಂಡಿದ್ದಾರೆ. ಇನ್ನು ಬೆಣ್ಣಿಹಳ್ಳಕ್ಕೆ ₹200 ಕೋಟಿ ಕೂಡ ಕೊಟ್ಟಿದ್ದು ಆಗಿದೆ. ಅದನ್ನೇ ಮತ್ತೇ ಪ್ರಸ್ತಾಪಿಸಲಾಗಿದೆ. ಜತೆಗೆ ಧಾರವಾಡ ಮಹಾನಗರ ಪಾಲಿಕೆಯನ್ನಾಗಿ ಘೋಷಿಸಲಾಗಿದೆ. ಅದನ್ನೇ ಬಜೆಟ್‌ನಲ್ಲಿ ಹೇಳಲಾಗಿದೆ. ಆದರೆ, ನಯಾಪೈಸೆ ಅನುದಾನ ನೀಡಿಲ್ಲ.

ನಿರೀಕ್ಷೆ ಏನಿತ್ತು?

ಹಾಗೇ ನೋಡಿದರೆ ರಾಜ್ಯದ ಎರಡನೆಯ ದೊಡ್ಡ ನಗರ ಎನಿಸಿಕೊಂಡಿರುವ ಹುಬ್ಬಳ್ಳಿ- ಧಾರವಾಡ ಮುಂಬೈ- ಚೈನ್ನೈ ಕೈಗಾರಿಕಾ ಕಾರಿಡಾರ್‌ ಮಧ್ಯದಲ್ಲಿ ಬರುತ್ತದೆ. ಹೀಗಾಗಿ, ಏನಾದರೂ ದೊಡ್ಡ ಕೈಗಾರಿಕೆ ಸ್ಥಾಪನೆ ಅಥವಾ ಕಾರಿಡಾರ್‌ಗೆ ಪೂರಕವೆಂಬಂತೆ ಏನಾದರೂ ಯೋಜನೆ ಘೋಷಿಸುತ್ತದೆಯೇನೋ ಎಂಬ ನಿರೀಕ್ಷೆಯಿತ್ತು.

ಇನ್ನು ಬಿಆರ್‌ಟಿಎಸ್‌ ಬೇಡ ಎಂಬ ಆಂದೋಲನವೇ ಶುರುವಾಗಿದೆ. ಇದಕ್ಕೆ ಪೂರಕವೆಂಬಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರೇ ಸಮೀಕ್ಷೆಯನ್ನೂ ಮಾಡಿಸಿದ್ದಾರೆ. ಬಿಆರ್‌ಟಿಎಸ್‌ ಬದಲಿಗೆ ಎಲ್‌ಆರ್‌ಟಿಯನ್ನೂ ಘೋಷಿಸುತ್ತಾರೋ ಅಥವಾ ಮೆಟ್ರೋ, ಮೋನೋ ರೈಲಿನ ಬಗ್ಗೆ ಪ್ರಸ್ತಾಪಿಸುತ್ತಾರೆ ಎಂಬ ನಿರೀಕ್ಷೆ ಜನರದ್ದಾಗಿತ್ತು. ಕೃಷಿಗೆ ಪೂರಕವಾಗುವಂತಹ ಕೈಗಾರಿಕೆ, ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ವಿಶೇಷ ಅನುದಾನ ಘೋಷಿಸಬಹುದಿತ್ತು ಎಂಬ ನಿರೀಕ್ಷೆಯಿತ್ತು. ಆದರೆ ಅದ್ಯಾವುದು ಆಗಿಲ್ಲ. ಮಾಹಿತಿ ತಂತ್ರಜ್ಞಾನದ ಒಂದೆರಡು ಯೋಜನೆಗಳನ್ನು ಹುಬ್ಬಳ್ಳಿ ಧಾರವಾಡ ಹೆಸರನ್ನು ಸೇರಿಸುವ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಸಿದ್ದರಾಮಯ್ಯ ಮಾಡಿದ್ದಾರೆ ಎಂಬ ಅಸಮಾಧಾನ ಸಾರ್ವಜನಿಕರದ್ದಾಗಿದೆ. ಏನೇನು ಸಿಕ್ಕಿವೆ?

- ಅಳ್ನಾವರ, ಅಣ್ಣಿಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಉನ್ನತೀಕರಣ

- ಹುಬ್ಬಳ್ಳಿಯಲ್ಲಿ ಫ್ಲಗ್‌ ಆ್ಯಂಡ್‌ ಪ್ಲೇ ಸೌಲಭ್ಯವುಳ್ಳ ಜಾಗತಿಕ ತಂತ್ರಜ್ಞಾನ ಕೇಂದ್ರ (ಜಿಟಿಸಿ) ಸ್ಥಾಪನೆ

- ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ವಲಯದಲ್ಲಿ ಗ್ಲೋಬಲ್‌ ಇನ್ನೋವೇಶನ್‌ ಡಿಸ್ಟ್ರಿಕ್ಟ್‌ ಆಗಿ ಧಾರವಾಡ ಅಭಿವೃದ್ಧಿ

- ಸ್ಥಳೀಯ ಆರ್ಥಿಕ ಆಕ್ಸಿಲರೇಟರ್‌ ಕಾರ್ಯಕ್ರಮ (leap) ನಡಿ ಹುಬ್ಬಳ್ಳಿ- ಧಾರವಾಡ ನವೋದ್ಯಮ ಪರಿಸರ ವ್ಯವಸ್ಥೆ ಅಭಿವೃದ್ಧಿ

- ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಪತ್ತೆ ಹಚ್ಚಲು ಎಐ ಆಧಾರಿತ ವಿದ್ಯುನ್ಮಾನ ಕ್ಯಾಮೆರಾ. ಹಳೆಯ ಯೋಜನೆ

- ಕಳಸಾ- ಬಂಡೂರಿ ಮತ್ತೊಮ್ಮೆ ಪ್ರಸ್ತಾವನೆ

- ಬೆಣ್ಣಿಹಳ್ಳಕ್ಕೆ ₹200 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ

- ಧಾರವಾಡ ಪ್ರತ್ಯೇಕ ಪಾಲಿಕೆಯನ್ನಾಗಿ ಘೋಷಿಸಿರುವುದು

Share this article