ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ: ಮಲೆನಾಡಿನ ಸೆರಗು ಎಂದೇ ಗುರುತಿಸಿಕೊಳ್ಳುವ ಧಾರವಾಡ ಜಿಲ್ಲೆಯಲ್ಲಿ ಬಿಸಿಲಿನ ಬೇಗುದಿ ತಾಳದಂತಹ ಸ್ಥಿತಿ ನಿರ್ಮಾಣವಾಗಿದೆ. ಹಸಿರುಕರಣಕ್ಕೆ ಆದ್ಯತೆ ನೀಡಬೇಕಿದ್ದ ಹು-ಧಾ ಪಾಲಿಕೆಯ ನಿರ್ಲಕ್ಷ್ಯ ವಹಿಸಿದೆ. ಮಹಾನಗರದಲ್ಲಿರುವ ಉದ್ಯಾನಗಳು ಹಾಳಾಗುವ ಸ್ಥಿತಿಗೆ ತಲುಪಿರುವುದು ಪಾಲಿಕೆಯ ಕಾರ್ಯವೈಖರಿ ಹೇಗಿದೆ ಎಂಬುದು ತೋರಿಸುತ್ತಿವೆ.ಹಸಿರು ನಗರವನ್ನಾಗಿಸಲು, ನಗರಗಳ ಸೌಂದರ್ಯಕ್ಕೆ ಉದ್ಯಾನಗಳ ಪಾತ್ರ ಪ್ರಮುಖವಾಗಿದೆ. ಆದರೆ, ಹು-ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಶೇ. 70ರಷ್ಟು ಉದ್ಯಾನಗಳು ನಿರ್ಲಕ್ಷ್ಯಕ್ಕೊಳಗಾಗಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಯಾವುದೇ ಒಂದು ನಗರ ಸುಂದರವಾಗಿ ಕಾಣಲು ಅಲ್ಲಿನ ಉದ್ಯಾನಗಳ ಅಭಿವೃದ್ಧಿ ಪ್ರಮುಖವಾದುದು. ಇಂತಹ ಉದ್ಯಾನಗಳ ಅಭಿವೃದ್ಧಿಗೆ ಆದ್ಯತೆ ನೀಡಬೇಕಾಗಿದ್ದ ಪಾಲಿಕೆ ಸಹ ಈ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದೆ. ಪರಿಸರ ಪ್ರೇಮಿಗಳ ಆಕ್ರೋಶದಿಂದ ಈಗ ಎಚ್ಚೆತ್ತುಕೊಂಡಿರುವ ಪಾಲಿಕೆ ಅಧಿಕಾರಿಗಳು ಆಮೆಗತಿಯಲ್ಲಿ ಪಾಲಿಕೆ ವ್ಯಾಪ್ತಿಯ ಉದ್ಯಾನಗಳ ಅಭಿವೃದ್ಧಿಗೆ ಮುಂದಾಗಿದ್ದಾರೆ.ಗರಿಷ್ಠ ತಾಪಮಾನ: ಈ ಬಾರಿ ಮಹಾನಗರದಲ್ಲಿಯೇ ಬೀಸಿಲಿನ ಬೇಗೆಯಿಂದ ಜನತೆ ಸಂಕಷ್ಟ ಅನುಭವಿಸಿದ್ದರು. ಪ್ರತಿ ವರ್ಷವೂ 36ರಿಂದ 38 ಡಿಗ್ರಿ ತಾಪಮಾನವಿರುತ್ತಿತ್ತು. ಆದರೆ, ಈ ಬಾರಿ 42ರ ಗಡಿಗೆ ದಾಟಿದ್ದು ಜನರ ಆತಂಕಕ್ಕೆ ಕಾರಣವಾಗಿತ್ತು. ಇದಕ್ಕೆ ಕಾರಣ ನಗರದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಗಿಡಮರಗಳ ಮಾರಣ ಹೋಮವೇ ಪ್ರಮುಖ ಕಾರಣ. ಗಿಡಗಳನ್ನು ಕಡಿದು ಹಾಕಲಾಗುತ್ತಿದೆ. ಆದರೆ, ಬೆಳೆಸುವ ಕಾರ್ಯವಾಗದೇ ಇರುವುದು ಸಾರ್ವಜನಿಕರ, ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತ ಪಾಲಿಕೆ ಈ ವರ್ಷ ಹೆಚ್ಚೆಚ್ಚು ಗಿಡಮರಗಳನ್ನು ಬೆಳೆಸುವ ಸಂಕಲ್ಪ ತೊಟ್ಟಿದ್ದು, ತಿಂಗಳಾಂತ್ಯದೊಳಗೆ ಹು-ಧಾ ಮಹಾನಗರದಲ್ಲಿ 25 ಸಾವಿರ ಸಸಿ ನೆಡುವ ಕಾರ್ಯಕ್ಕೆ ಮುಂದಾಗಿದೆ.
ಏಕೆ ನಿರ್ಲಕ್ಷ್ಯ?: ಹಲವು ಉದ್ಯಾನಗಳ ನಿರ್ಲಕ್ಷ್ಯಕ್ಕೆ ಪಾಲಿಕೆ ಅಷ್ಟೇ ಅಲ್ಲ ಸಾರ್ವಜನಿಕರ ಪಾತ್ರವೂ ಪ್ರಮುಖ ಕಾರಣವಾಗಿದೆ. 10 ವರ್ಷಗಳ ಹಿಂದೆ ಇದ್ದ ಉದ್ಯಾನಗಳ ಸ್ಥಿತಿ ಇಂದಿಗೂ ಹಾಗೆಯೇ ಇದೆ. ಅಲ್ಲದೇ ಕೆಲವು ಉದ್ಯಾನಗಳನ್ನು ಪಾಲಿಕೆಯಿಂದ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ, ಜನರ ನಿರ್ಲಕ್ಷ್ಯದಿಂದಾಗಿ ಅವೆಲ್ಲ ಇಂದು ಹಾಳಾಗಿ ಹೋಗಿವೆ. ಇನ್ನೂ ಕೆಲವು ಕಡೆಗಳಲ್ಲಿ ಸೂಕ್ತ ನಿರ್ವಹಣೆ ಕೊರತೆಯಿಂದಾಗಿಯೂ ಉದ್ಯಾನಗಳು ತಮ್ಮ ಸೌಂದರ್ಯ ಕಳೆದುಕೊಂಡಿವೆ. ಪಾಲಿಕೆಯ ಅಧಿಕಾರಿಗಳು ಎಚ್ಚೆತ್ತು ನಗರವನ್ನು ಹಸಿರೀಕರಣಗೊಳಿಸುವುದಕ್ಕೆ ಹಾಗೂ ಉದ್ಯಾನಗಳ ಅಭಿವೃದ್ಧಿಗೆ ಆದ್ಯತೆ ನೀಡುಬೇಕು ಎಂಬುದು ಪರಿಸರ ಪ್ರೇಮಿಗಳ ಒಕ್ಕೋರಲ ಒತ್ತಾಯವಾಗಿದೆ.ಹುಬ್ಬಳ್ಳಿ- ಧಾರವಾಡದಲ್ಲಿವೆ 575 ಉದ್ಯಾನಗಳು: ಹು-ಧಾ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 575 ಉದ್ಯಾನಗಳಿವೆ. ಹುಬ್ಬಳ್ಳಿಯಲ್ಲಿ 381, ಧಾರವಾಡದಲ್ಲಿ 194 ಉದ್ಯಾನಗಳಿವೆ. ಇವುಗಳಲ್ಲಿ ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿಯಾಗಿದ್ದು ಕೇವಲ 98 ಉದ್ಯಾನಗಳು. ಹುಬ್ಬಳ್ಳಿಯಲ್ಲಿ ಸಂಪೂರ್ಣ ಹಸರೀಕರಣದೊಂದಿಗೆ ಅಭಿವೃದ್ಧಿ ಹೊಂದಿದ ಉದ್ಯಾನಗಳು 77 ಇದ್ದರೆ, ಧಾರವಾಡದಲ್ಲಿ ಕೇವಲ 21 ಇವೆ. ಇನ್ನು ಹಸರೀಕರಣದ ಅಭಿವೃದ್ಧಿಗೆ ಪ್ರಗತಿಯಲ್ಲಿರುವ ಕಾಮಗಾರಿ ನಡೆಯುತ್ತಿರುವ ಉದ್ಯಾನಗಳು ಹುಬ್ಬಳ್ಳಿಯಲ್ಲಿ 10 ಇದ್ದರೆ, ಧಾರವಾಡದಲ್ಲಿ ಕೇವಲ 1 ಉದ್ಯಾನವಿದೆ. ಹಸರೀಕರಣಕ್ಕಾಗಿ ಅಭಿವೃದ್ಧಿ ಮಾಡಬೇಕಾದ ಉದ್ಯಾನಗಳು ಹುಬ್ಬಳ್ಳಿಯಲ್ಲಿ 294 ಇದ್ದರೆ ಧಾರವಾಡದಲ್ಲಿ 172 ಉದ್ಯಾನಗಳಿವೆ. ಈ ಸಂಖ್ಯೆಗಳನ್ನು ಅವಲೋಕಿಸಿದರೆ ಹು-ಧಾ ಮಹಾನಗರದಲ್ಲಿರುವ ಉದ್ಯಾನಗಳ ಪೈಕಿ ಬೆರಳೆಣಿಕೆಯಷ್ಟು ಉದ್ಯಾನಗಳು ಮಾತ್ರ ಅಭಿವೃದ್ಧಿ ಹೊಂದಿದ್ದು, ಇನ್ನುಳಿದವುಗಳು ನಿರ್ಲಕ್ಷ್ಯಕ್ಕೊಳಗಾಗಿವೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.ಹು-ಧಾ ಮಹಾನಗರದಲ್ಲಿ ಬೆರಳೆಣಿಕೆಯಷ್ಟು ಉದ್ಯಾನಗಳು ಅಭಿವೃದ್ಧಿಯಾಗಿವೆ. ಇನ್ನುಳಿದ ಉದ್ಯಾನಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ಪಾಲಿಕೆ ಅಧಿಕಾರಿಗಳು ಇನ್ನು ಮುಂದಾದರೂ ಉದ್ಯಾನಗಳ ಅಭಿವೃದ್ಧಿಗೆ ಆದ್ಯತೆ ನೀಡಲಿ ಎಂದು ಪರಿಸರ ಕಾರ್ಯಕರ್ತ ಲಿಂಗರಾಜ ಧಾರವಾಡಶೆಟ್ಟರ ಹೇಳುತ್ತಾರೆ.ಉದ್ಯಾನಗಳ ಅಭಿವೃದ್ಧಿಗೆ ಈಗಾಗಲೇ ಆದ್ಯತೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ಉದ್ಯಾನಗಳ ಸಮೀಕ್ಷೆ ಕೈಗೊಂಡು ಆದಷ್ಟು ಬೇಗನೆ ಮೂಲಸೌಲಭ್ಯವಿಲ್ಲದ ಉದ್ಯಾನಗಳಿಗೆ ಸೌಲಭ್ಯ ಕಲ್ಪಿಸಿ ಹಸಿರೀಕರಣಗೊಳಿಸಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳುತ್ತಾರೆ.