ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಉದ್ದೇಶಿಸಿದ್ದ ಒಂದು ಲಕ್ಷ ಗಿಡ ನೆಡುವ ಕಾರ್ಯಕ್ಕೆ ಇನ್ನೂ ಕಾಲಕೂಡಿ ಬಂದಿಲ್ಲ. ಜೂನ್ ತಿಂಗಳಲ್ಲೇ ಸಾಂಕೇತಿಕವಾಗಿ ಆರಂಭಿಸಲು ಉದ್ದೇಶಿಸಿದ್ದ ಈ ಕಾರ್ಯ ಜುಲೈ ಆರಂಭಗೊಂಡರೂ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡದಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮಹಾನಗರವನ್ನು ಹಸಿರೀಕರಣಗೊಳಿಸುವ ಉದ್ದೇಶದೊಂದಿಗೆ ಪಾಲಿಕೆಯು ಪ್ರಸಕ್ತ ಮಳೆಗಾಲವನ್ನು ಪ್ರಮುಖವಾಗಿಟ್ಟುಕೊಂಡು ಹಂತ-ಹಂತವಾಗಿ ಒಂದು ಲಕ್ಷ ಸಸಿ ನೆಡಲು ನಿರ್ಧರಿಸಿತ್ತು. ಅರಣ್ಯ ಇಲಾಖೆಯೊಂದಿಗೆ ಪಾಲಿಕೆ ಅಧಿಕಾರಿಗಳು ಚರ್ಚಿಸಿ ಆಲದ ಗಿಡ, ಹೊಳೆ ದಾಸವಾಳ, ಕಾಡು ಸಂಪಿಗೆ, ಬಸವನಪಾದ, ಹತ್ತಿ ಇತ್ಯಾದಿ ಸಸಿ ಸೇರಿದಂತೆ ಭೂಮಿಯಲ್ಲಿ ಅಗಲವಾಗಿ ಬೇರು ಬಿಡದ ಗಿಡಗಳನ್ನು ಗುರುತಿಸಿ ಅಂತಹ ಸಸಿ ಪೂರೈಸಲು ಸೂಚಿಸಿದ್ದರು. ಅದರಂತೆ 25 ಸಾವಿರ ಸಸಿಗಳನ್ನು ಅರಣ್ಯ ಇಲಾಖೆ ಸಿದ್ಧಗೊಳಿಸಿದೆ. ಆದರೆ, ಗಿಡ ನೆಡಲು ಮಾತ್ರ ಪಾಲಿಕೆ ಮುಂದಾಗಿಲ್ಲ.₹ 5 ಕೋಟಿ ವೆಚ್ಚದ ಯೋಜನೆ:
ಮೊದಲು ಮಹಾನಗರದ 575 ಉದ್ಯಾನಗಳ ಖಾಲಿ ಜಾಗ, ಪಾಲಿಕೆ ಒಡೆತನದ ಖಾಲಿ ಜಾಗ, ರಸ್ತೆ ಅಕ್ಕಪಕ್ಕ, ರಸ್ತೆ ವಿಭಜಕಗಳಲ್ಲಿ ಸಸಿ ನೆಡಲು ಉದ್ದೇಶಿಸಲಾಗಿತ್ತು. ಇದಕ್ಕಾಗಿಯೇ ಪಾಲಿಕೆಯು 2024-25ನೇ ಸಾಲಿನ ಬಜೆಟ್‌ನಲ್ಲಿ ಹಸಿರು ಉಸಿರು ಯೋಜನೆಯ ಅಡಿ ₹ 5 ಕೋಟಿ ಅನುದಾನ ಮೀಸಲಿಟ್ಟಿದೆ. ಸಸಿಗಳ ಖರೀದಿ, ಸಂರಕ್ಷಣೆಗೆ ಬೇಕಾಗುವ ಹಣವನ್ನು ಈ ಯೋಜನೆಯಲ್ಲಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಿತ್ತು. ಒಂದು ತಿಂಗಳಿಂದ ಮಳೆ ಆರಂಭವಾಗಿದೆ. ನಗರದಲ್ಲಿ ಉತ್ತಮ ಮಳೆಯೂ ಸುರಿದಿದೆ. ಮಳೆಗಾಲ ಪೂರ್ಣಗೊಳ್ಳುವುದರೊಳಗೆ ಶೇ. 50ರಷ್ಟಾದರೂ ಸಸಿ ನೆಡುವ ಕಾರ್ಯ ಪೂರ್ಣಗೊಳಿಸಬಹುದಾಗಿತ್ತು. ಆದರೆ, ಇನ್ನೂ ಚಾಲನೆಗೆ ಮೀನಮೇಷ ಎಣಿಸುತ್ತಿರುವ ಪಾಲಿಕೆ ಅಧಿಕಾರಿಗಳ ಕಾರ್ಯಕ್ಕೆ ಪರಿಸರ ಪ್ರೇಮಿಗಳ ಆಕ್ರೋಶ ಕಟ್ಟೆ ಹೊಡಿದಿದೆ.25 ಸಾವಿರ ಸಸಿಗಳು ಸಿದ್ಧ:
ಸಸಿ ನೆಡುವ ಕಾರ್ಯಕ್ಕೆ ಮೊದಲ ಹಂತದಲ್ಲಿ ಬೇಕಾದ 25 ಸಾವಿರ ಸಸಿಗಳನ್ನು ನೀಡಲು ಅರಣ್ಯ ಇಲಾಖೆ ಸಿದ್ಧವಾಗಿದೆ. ಆದರೆ, ಪಾಲಿಕೆಯು ಇನ್ನೂ ಕಾರ್ಯಕ್ರಮದ ಚಾಲನೆಗೆ ದಿನಾಂಕ ಹುಡುಕುವುದರಲ್ಲಿ ಕಾಲಹರಣ ಮಾಡುತ್ತಿದೆ. ಮಳೆಗಾಲದೊಳಗೆ ಸಸಿ ಹಚ್ಚಿದರೆ ನೈಸರ್ಗಿಕವಾಗಿ ಮಳೆಯಿಂದ ಸಸಿಗಳಿಗೆ ನೀರು ಲಭ್ಯವಾಗಿ ಸಮೃದ್ಧವಾಗಿ ಬೆಳೆಯಲು ಸಾಧ್ಯವಾಗಲಿದೆ.ಮೇಯರ್ ಆಸಕ್ತಿ ವಹಿಸಲಿ:
ಹಲವು ತಿಂಗಳ ಹಿಂದೆಯೇ ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಂಡಿರುವ ಪಾಲಿಕೆ ಲೋಕಸಭಾ ಚುನಾವಣೆ, ಮೇಯರ್- ಉಪಮೇಯರ್ ಆಯ್ಕೆಯಲ್ಲಿ ನಿರತವಾಗಿತ್ತು. ಹಿಂದಿನ ಮೇಯರ್ ವೀಣಾ ಬರದ್ವಾಡ್ ಅವಧಿ ಪೂರ್ಣಗೊಂಡು ಈಗ ರಾಮಣ್ಣ ಬಡಿಗೇರ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇವರಾದರೂ ಈ ಕಾರ್ಯಕ್ಕೆ ವೇಗ ನೀಡುವರೇ ಎಂದು ಕಾದುನೋಡಬೇಕಿದೆ.ಇರುವ ಗಿಡಗಳಿಗೆ ರಕ್ಷಣೆಯಿಲ್ಲ:
ಮಹಾನಗರ ವ್ಯಾಪ್ತಿಯಲ್ಲಿರುವ ಸಾವಿರಾರು ಗಿಡಗಳಿಗೆ ರಕ್ಷಣೆಯೇ ಇಲ್ಲ. ಹಲವೆಡೆ ಸಮೃದ್ಧವಾಗಿ ಬೆಳೆದಿರುವ ಗಿಡಗಳ ಬುಡಕ್ಕೆ ಬೆಂಕಿ ಹಾಕುವುದು, ಗಿಡಗಳನ್ನು ಕಡಿಯುವ ಮೂಲಕ ಹಾಳು ಮಾಡುತ್ತಿರುವ ಕಾರ್ಯಗಳೂ ನಡೆಯುತ್ತಿವೆ. ಈ ಕುರಿತು ಹಲವು ಪರಿಸರ ಪ್ರೇಮಿಗಳು ಪಾಲಿಕೆ ಆಯುಕ್ತರಿಗೆ ತಿಳಿಸಿದರೂ ಕ್ರಮ ಕೈಗೊಳ್ಳದೇ ಜಾಣಕುರುಡು ನೀತಿ ಅನುಸರಿಸುತ್ತಿದ್ದಾರೆ.ಪಾಲಿಕೆಯಿಂದ ಲಕ್ಷ ಸಸಿ ನೆಡುವ ಕಾರ್ಯ ಕೇಳಿ ತುಂಬಾ ಸಂತಸವಾಗಿತ್ತು. ಈ ವರೆಗೂ ಒಂದೇ ಒಂದು ಸಸಿ ನೆಡುವ ಕಾರ್ಯವಾಗಿಲ್ಲ. ಇತ್ತ ಇರುವ ಗಿಡಗಳ ರಕ್ಷಣೆಗೂ ಪಾಲಿಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪರಿಸರ ಪ್ರೇಮಿ ಮೇಘರಾಜ ಕೆರೂರ ಹೇಳಿದರು.ಪಾಲಿಕೆ ವ್ಯಾಪ್ತಿಯಲ್ಲಿ ಲಕ್ಷ ಗಿಡ ನೆಡುವ ಕಾರ್ಯ ಕೊಂಚ ವಿಳಂಬವಾಗಿದೆ. ಈಗಾಗಲೆ ಇದಕ್ಕೆ ಬೇಕಾದ ಮಾಸ್ಟರ್ ಪ್ಲಾನ್ ಸಿದ್ಧವಾಗಿದೆ. ಜು. 15ರೊಳಗೆ ಸಭೆ ಕರೆದು ದಿನಾಂಕ ಅಂತಿಮಗೊಳಿಸಿ ಚಾಲನೆ ನೀಡಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.