ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
"ಹುಬ್ಬಳ್ಳಿ - ಧಾರವಾಡ ಪೊಲೀಸ್ ಕಮೀಷನರೇಟ್ " ನಲ್ಲಿ ಹೊಸತೊಂದು ಅಧ್ಯಾಯ ಶುರುವಾಗಿದೆ. ಪೊಲೀಸರೇ ಜನರ ಬಳಿ ತೆರಳಿ ಅವರ ದುಃಖ ದುಮ್ಮಾನ ಕೇಳಿ, ಸಾಧ್ಯವಾದರೆ ಅಲ್ಲಿಯೇ ಬಗೆಹರಿಸಿ, ಇಲ್ಲವೇ ಕಾನೂನು ನೆರವನ್ನು ನೀಡುವ ನಿಟ್ಟಿನಲ್ಲಿ "ಜನಸ್ನೇಹಿ ಪೊಲೀಸಿಂಗ್ " ವ್ಯವಸ್ಥೆ ಜಾರಿಗೆ ತರಲಾಗಿದೆ!ಪೊಲೀಸ್ ಎಂದರೆ ಭಯವಲ್ಲ, ಅದೊಂದು ಅಭಯ. ಆರಕ್ಷಕರೆಂದರೆ ಈ ಸಮಾಜದ ರಕ್ಷಕರು. ಸಮಾಜದಲ್ಲಿ ಕಾನೂನನ್ನು ಜಾರಿಗೊಳಿಸುವ ಒಂದು ಅಂಗ. ಜನಸಾಮಾನ್ಯರಿಗೆ ಬಲು ಹತ್ತಿರವಾಗುವ ನಿಟ್ಟಿನಲ್ಲಿ ಈ ಹೊಸ ಪ್ರಯತ್ನಕ್ಕೆ ಪೊಲೀಸರು ಕೈ ಹಾಕಿದ್ದಾರೆ.
ಸಮಾಜದಲ್ಲಿ ಕೊನೆಯ ವ್ಯಕ್ತಿಯಿಂದ ಮೊದಲ್ಗೊಂಡು ಎಲ್ಲ ಸ್ತರದ ಜನರು ಗೌರವಯುತವಾದ ಜೀವನ ನಡೆಸುವಂತೆ ಇರುವ ಕಾನೂನನ್ನು ಜಾರಿಗೊಳಿಸಿ, ಜನರಿಗೊಂದು ನಂಬಿಕೆಯ ಸೆಲೆಯನ್ನು ಹುಟ್ಟುಹಾಕುವುದೇ ಈ "ಜನಸ್ನೇಹಿ ಪೊಲೀಸ್ " ಗುರಿಯಾಗಿದೆ.ಮನವರಿಕೆ ಕಾರ್ಯ:
ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುವ ಹಿರಿಯ ಅಧಿಕಾರಿಗಳು ಪೊಲೀಸ್ ವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡುತ್ತಾರೆ. ಹಾದಿ-ಬೀದಿಯಲ್ಲಿ ನಿಂತಿರುವ ಜನರನ್ನು ಒಂದೆಡೆ ಸೇರಿಸಿ ಪೊಲೀಸರೊಂದಿಗೆ ಸಾರ್ವಜನಿಕರು ಹೇಗೆ ಸಹಕಾರಿ ಆಗಬೇಕು ಎನ್ನುವುದನ್ನು ಮನದಟ್ಟು ಮಾಡುತ್ತಿದ್ದಾರೆ. ಸಮಾಜದಲ್ಲಿ ವಿದ್ರೋಹಿ ಕೃತ್ಯದಲ್ಲಿ ತೊಡಗಿದವರ ಬಗ್ಗೆ ನಿಗಾ ಇಡಲು, ಪುಂಡ-ಪೋಕರಿಗಳ ಬಗ್ಗೆ ಮಾಹಿತಿ ನೀಡುವ ಕುರಿತೂ ತಿಳುವಳಿಕೆ ನೀಡುತ್ತಿದ್ದಾರೆ.ಪೊಲೀಸರೆಂದರೆ ಈ ಸಮಾಜದಲ್ಲಿ ಒಂದು ಅವ್ಯಕ್ತವಾದ ಮೂಗುಮುರಿಯುವ ಮನಸ್ಥಿತಿ ಈ ಸಮಾಜದಲ್ಲಿದೆ. ಪೊಲೀಸರ ಬಗ್ಗೆ ಇರುವ ಭಾವನೆಗಳೇ ಬೇರೆ. ಅಂಥಹ ಬೇರೂರಿರುವ ಭಾವನೆಗಳ ತೊಳೆಯುವ, ಸಾರ್ವಜನಿಕರಲ್ಲಿ, ಅಸಹಾಯಕರಲ್ಲಿ, ತುಳಿತಕ್ಕೊಳಗಾದವರಲ್ಲಿ ಒಂದು ಸುಭದ್ರ ರಕ್ಷಣೆಯ ಭಾವನೆಯನ್ನು ತರುವುದರಿಂದ ಹಿಡಿದು, ನಿಮ್ಮೊಂದಿಗೆ ನಾವಿದ್ದೇವೆ ಎಂಬ ಧೃಢ ಭಾವವನ್ನು ಎಲ್ಲರಲ್ಲಿ ತರುವ ನಿಟ್ಟಿನಲ್ಲಿ ಈ "ಜನಸ್ನೇಹಿ ಪೊಲೀಸ್ ವ್ಯವಸ್ಥೆ " ಜಾರಿಯಾಗಿದೆ.
ಶಾಲಾ ಮಕ್ಕಳು, ದುಡಿಯುವ ವರ್ಗ, ಅಸಂಘಟಿತ ಕಾರ್ಮಿಕರು ಹಾಗೂ ವಯೋವೃದ್ದರಿಗೂ ಸಹ ಅವರ ಮನಸ್ಸಿಗೆ ನಮ್ಮವರೊಬ್ಬರಿದ್ದಾರೆ ಎಂಬ ಭಾವವನ್ನು ತರುವುದೇ ಇದರ ಹಿಂದಿನ ಉದ್ದೇಶವಾಗಿದೆ. ನೊಂದವರಿಗೆ ನಮ್ಮವರೊಬ್ಬರಿದ್ದಾರೆ ಎಂಬ ಭರವಸೆ ಹುಟ್ಟಿಸುವ ವ್ಯವಸ್ಥೆ ನಡೆದಿದೆ. ಆದುದರಿಂದ ಪೊಲೀಸರು ಸಾರ್ವಜನಿಕರ ಮನೆ - ಮನಗಳ ಬಳಿಗೆ ಹೋಗಿ ಅವರ ಸುಖ ದುಃಖ ಆಲಿಸುವಂತಹ, ಸಮಸ್ಯೆಗಳನ್ನು ಬಗೆಹರಿಸುವಂತಹ ಕಾರ್ಯವೇ ಈ ಹೊಸ ವ್ಯವಸ್ಥೆಯಿಂದ ಆಗುತ್ತಿದೆ.ಜನತೆಯ ಸಹಕಾರ:
ಕೇವಲ ಸಮವಸ್ತ್ರಧಾರಿಗಳು ಈ ಸಮಾಜದಲ್ಲಿನ ವಿವಿಧ ಘಟನೆ, ನಡವಳಿಕೆಗಳನ್ನು ಹತೋಟಿಗೆ ತರಲಾದೀತೆ? ಸಾಧ್ಯವೇ ಇಲ್ಲ. ಇದು ಸಾಧ್ಯವಾಗಬೇಕೆಂದರೆ ಈ ಸಮಾಜದ ಜನರೂ ಸಹ ಸೈನಿಕರಾಗಿ ಸಮಾಜವನ್ನು ರಕ್ಷಿಸಬೇಕೆಂದು ಹೇಳುತ್ತಾರೆ. ಅಂದರೆ ಜನಸ್ನೇಹಿಯಾಗಿ ನಾವಾದರೆ, ಈ ವ್ಯವಸ್ಥೆಯನ್ನು ಕಾಪಾಡಲಿಕ್ಕಾದರೂ ನಮ್ಮ ಸಮಾಜ ಪೊಲೀಸರೊಂದಿಗೆ ಸಹಕಾರ ಕೊಡುವುದು ಸೂಕ್ತವೇ ಆಗಿದೆ.ಈ ಸಮಾಜದಲ್ಲಿ ಸಾರ್ವಜನಿಕರ ಸಹಕಾರವಿಲ್ಲದೆ ಕೇವಲ ಪೊಲೀಸರಿಂದ ಯಾವ ಸಾಧನೆಯೂ ನಡೆಯುವುದಿಲ್ಲ. ಆದುದರಿಂದ ಹುಬ್ಬಳ್ಳಿ-ಧಾರವಾಡ ಮಹಾನಗರದ ಜನತೆ ಈ ವ್ಯವಸ್ಥೆಯ ಬಗ್ಗೆ ಕೈ ಜೋಡಿಸುತ್ತಾರೆ ಎಂದು ನಾವು ನಂಬಿದ್ದೇವೆ ಎನ್ನುತ್ತಾರೆ ಡಿಸಿಪಿ ರವೀಶ್.