ಕನ್ನಡಪ್ರಭ ವಾರ್ತೆ ಬಳ್ಳಾರಿ
ಹುಬ್ಬಳ್ಳಿ-ಗುಂತಕಲ್-ಹುಬ್ಬಳ್ಳಿ ರೈಲು ಪುನರಾರಂಭ ಹಿನ್ನೆಲೆಯಲ್ಲಿ ರೈಲ್ವೆಕ್ರಿಯಾ ಸಮಿತಿ ಸದಸ್ಯರು ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ರೈಲಿಗೆ ಪೂಜೆ ಸಲ್ಲಿಸಿ ಸ್ವಾಗತಿಸಿಕೊಂಡರು.ಇದೇ ವೇಳೆ ಮಾತನಾಡಿದ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ.ಎಂ.ಮಹೇಶ್ವರಸ್ವಾಮಿ, ಹುಬ್ಬಳ್ಳಿ- ಗುಂತಕಲ್ -ಹುಬ್ಬಳ್ಳಿಯ ರೈಲು ಕಳೆದ ಮೂರು ತಿಂಗಳಿಂದ ಬಳ್ಳಾರಿ ಮಾರ್ಗದಲ್ಲಿ ಗುಂತಕಲ್ಲಿಗೆ ಹೋಗಿ ಬರುವ ಸಂಚಾರವನ್ನು ಸ್ಥಗಿತಗೊಳಿಸಿತ್ತು. ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು ಈ ರೈಲನ್ನು ಕೇವಲ ತೋರಣಗಲ್ ವರಗೆ ಓಡಿಸಿ ಅಲ್ಲಿಂದಲೇ ಹುಬ್ಬಳ್ಳಿಗೆ ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದರು.
ಈ ರೈಲಿನ ತಾತ್ಕಾಲಿಕ ನಿಲುಗಡೆಯಿಂದ ಬಳ್ಳಾರಿ ಭಾಗದ ಜನತೆ ಹೊಸಪೇಟೆ ಕೊಪ್ಪಳ ಗದಗ ಹುಬ್ಬಳ್ಳಿ ಹಾಗೂ ಗುಂತಕಲ್ ಗಳಿಗೆ ಹೋಗಿಬರಲು ತುಂಬಾ ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿ ರೈಲ್ವೆ ಮುಂದುವರಿಕೆಗೆ ಒತ್ತಾಯಿಸಲಾಗಿತ್ತು. ಬಳ್ಳಾರಿಯ ಭಾಗದ ಜನರ ಒತ್ತಾಸೆಗೆ ಮಣಿದು ಅಧಿಕಾರಿಗಳು ಈ ರೈಲನ್ನು ಈ ಹಿಂದಿನಂತೆ ಬಳ್ಳಾರಿ ಮಾರ್ಗವಾಗಿ ಸಂಚರಿಸಲು ಅನುಮತಿಸಿದ್ದಾರೆ ಎಂದು ತಿಳಿಸಿದರು.ಬಳ್ಳಾರಿ ಮಾರ್ಗವಾಗಿ ಹಿಂದೆ ಸಂಚರಿಸುತ್ತಿದ್ದ ಎಲ್ಲ ರೈಲುಗಳು ಪುನರಾರಂಭವಾಗಬೇಕು. ಬಳ್ಳಾರಿ ಮಾರ್ಗವಾಗಿ ನೂತನವಾಗಿ ಒಂದೇ ಭಾರತ್ ರೈಲು ಬೆಂಗಳೂರಿನ ಕಡೆಗೆ ಸಂಚಾರವಾಗಬೇಕು. ಬಳ್ಳಾರಿ ರೈಲು ನಿಲ್ದಾಣ ಸಮಗ್ರವಾಗಿ ಅಭಿವೃದ್ಧಿ ಆಗಬೇಕು. ಕರ್ನಾಟಕದ ಬಹುತೇಕ ರೈಲ್ವೆ ಯೋಜನೆಗಳು ಪರಿಪೂರ್ಣವಾಗಬೇಕು ಎಂದು ಒತ್ತಾಯಿಸಿದರು. ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಡಾಕ್ಟರ್ ವಸ್ತ್ರದ್ , ಎನ್.ಸಿ.ವೀರಭದ್ರಪ್ಪ, ಆನೆ ಗಂಗಣ್ಣ, ಎಚ್.ಎಂಂ. ತಿಪ್ಪೇಸ್ವಾಮಿ, ಪಿ. ಬಂಡೇಗೌಡ, ಎಚ್.ಕೆ. ಗೌರಿಶಂಕರ, ಜಿ.ರಾಮಚಂದ್ರಯ್ಯ, ಜಿ.ನೀಲಕಂಠಪ್ಪ, ಕಮಲಾ ಬಸವರಾಜ್ , ಬಿ.ಎ. ಮಲ್ಲೇಶ್ವರಿ, ಚನ್ನಮಲ್ಲಯ್ಯಸ್ವಾಮಿ ಕೋಳೂರು ಚಂದ್ರಶೇಖರ ಗೌಡ, ಕೆ.ಎಂ.ಕೊಟ್ರೇಶ್, ಶರಭಯ್ಯ, ಬಿ.ಎಂ.ಎರಿಸ್ವಾಮಿ ಇತರರಿದ್ದರು.