ಶಿವಾನಂದ ಗೊಂಬಿ
ಹುಬ್ಬಳ್ಳಿ:ಈ ಹಿಂದೇ ಬಡ್ಡಿ ಬಂಗಾರಮ್ಮ ಎಂಬ ಚಲನಚಿತ್ರ ತೆರೆಗೆ ಬಂದಿತ್ತು. ಅದರಲ್ಲಿ ಸಾಮಗ್ರಿಗಳನ್ನು ಅಡವಿಟ್ಟು ಸಾಲ ಕೊಟ್ಟರೆ ಮುಗಿತು. ಆ ಸಾಮಗ್ರಿಗಳೆಲ್ಲ ಆಕೆಯದ್ದೇ ಆಗುತ್ತಿದ್ದವು. ಇದು ಚಿತ್ರದ ಸಾರಾಂಶ. ಇದು ಬಡ್ಡಿ ವ್ಯವಹಾರ ಹೇಗಿರುತ್ತದೆ ಎಂಬುದರ ಝಲಕ ತೋರಿಸಿದ್ದ ಚಿತ್ರ.
ಹುಬ್ಬಳ್ಳಿಯ ಬಡ್ಡಿ ವ್ಯವಹಾರಕ್ಕೂ ಸಾಕಷ್ಟು ಕರಾಳ ಚರಿತ್ರೆ ಇದೆ. ಬಡ್ಡಿ ವ್ಯವಹಾರ ನಗರವನ್ನಷ್ಟೇ ಅಲ್ಲ. ಅಕ್ಕಪಕ್ಕದ ಹಳ್ಳಿಗಳಿಗೂ ಇದರ ಜಾಲ ವ್ಯಾಪಿಸಿದೆ. ಇದರಿಂದ ಹೊಲ, ಮನೆ ಕಳೆದುಕೊಂಡಿದ್ದಾರೆ. ಬಡ್ಡಿ, ಮೀಟರ್ ಬಡ್ಡಿಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲೆ, ಕೊಲೆ ಯತ್ನ, ಹಲ್ಲೆಗಳಂತಹ ಘಟನೆಗಳು ಲೆಕ್ಕವಿಲ್ಲದಷ್ಟು ನಡೆಯುತ್ತಲೇ ಇವೆ. ಪೊಲೀಸರು ಆಗಾಗ ದಾಳಿ, ಕಾರ್ಯಾಚರಣೆ ಮಾಡುತ್ತಲೇ ಇರುತ್ತಾರೆ. ಆದರೆ ಇವೆಲ್ಲ ಕಾಟಾಚಾರಕ್ಕೆ ಎಂಬುದು ಬಹಿರಂಗ ಸತ್ಯ. ಈ ಬಡ್ಡಿ ವ್ಯವಹಾರ ಹತೋಟಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾತ್ರ ಈ ವರೆಗೂ ಯಾರಿಂದಲೂ ಆಗಿಲ್ಲ ಎಂಬುದು ಸ್ಪಪ್ಟ.ಇನ್ನೂ ಭಾನುವಾರ ಸಂಜೆಯಷ್ಟೇ 10ನೇ ತರಗತಿ ವಿದ್ಯಾರ್ಥಿಯೊಬ್ಬ, 9ನೇ ತರಗತಿ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿದ್ದು ಇದೇ ಬಡ್ಡಿ ವ್ಯವಹಾರಕ್ಕಾಗಿಯೇ. ಸಣ್ಣ ಸಣ್ಣ ಮಕ್ಕಳೂ ಬಡ್ಡಿ ವ್ಯವಹಾರಕ್ಕೆ ಇಳಿದರೇ? ಅಥವಾ ದೊಡ್ಡವರೇ ತಮ್ಮ ವ್ಯವಹಾರಕ್ಕೆ ಮಕ್ಕಳನ್ನು ಬಳಸಿಕೊಂಡು ಬಲಿಪಶುಗಳನ್ನಾಗಿ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
₹ 10 ವರೆಗೂ ಬಡ್ಡಿ:ಇಲ್ಲಿನ ವಿಶೇಷವೆಂದರೆ ಶೇ. 3ರಿಂದ ಶೇ. 10-12ರ ವರೆಗೂ ಬಡ್ಡಿ ವ್ಯವಹಾರ ನಡೆಯುತ್ತದೆ. ದಿನದ ಬಡ್ಡಿ, ವಾರದ ಬಡ್ಡಿ, ತಿಂಗಳ ಬಡ್ಡಿ ಎಂದೆಲ್ಲ ವ್ಯವಹಾರಗಳು ನಡೆಯುತ್ತವೆ. ಒಂದೊಂದು ಬಗೆಯ ವ್ಯವಹಾರಕ್ಕೆ ಒಂದೊಂದು ಬಗೆಯ ರೇಟು. ಬಡ್ಡಿ ಫಿಕ್ಸ್ ಮಾಡುವ ಕುಳಗಳು ಇಲ್ಲಿದ್ದಾರೆ. ರೈತರು, ಬಡವರು, ಹಮಾಲಿಗಳು, ರೈಲ್ವೆ ನೌಕರಸ್ಥರು, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರಸ್ಥರಿಗೆ ಇವರು ಬಡ್ಡಿಯಂತೆ ಸಾಲ ಕೊಡುವುದುಂಟು. ವಸೂಲಿಯನ್ನೂ ಅದೇ ರೀತಿ ಮಾಡುತ್ತಾರೆ.
ಬಡ್ಡಿ ಕುಳಗಳೆಲ್ಲ ಒಂದು ಹಂತಕ್ಕೆ ಏರಿದರೆ ರಾಜಕಾರಣಿಗಳಾಗುವುದುಂಟು. ಪಾಲಿಕೆ ಸದಸ್ಯರಾಗಿ ಮಿಂಚಿದ್ದಾರೆ, ಮಿಂಚುತ್ತಲೂ ಇದ್ದಾರೆ. ಬಡ್ಡಿ ವ್ಯವಹಾರಸ್ಥರು ಬೇರೆ ಬೇರೆ ಪಕ್ಷಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಈ ಮೂಲಕ ತಮ್ಮ ಬಡ್ಡಿ ವ್ಯವಹಾರಕ್ಕೆ ರಾಜಕಾರಣ, ಜನಸೇವೆ ಲೇಪನ ಹಚ್ಚಿಕೊಂಡು ಬಚಾವು ಆಗುತ್ತಲೇ ಇದ್ದಾರೆ. ಇದೆಲ್ಲವೂ ಪೊಲೀಸರಿಗೆ ಗೊತ್ತಿದ್ದರು ಹತೋಟಿಗೆ ತರದೇ ಸಾಥ್ ನೀಡುತ್ತಿದ್ದಾರೆ ಎಂಬ ಆರೋಪ ಬಹಿರಂಗವಾಗಿಯೇ ಕೇಳಿ ಬರುತ್ತದೆ. ಒಟ್ಟಿನಲ್ಲಿ ಬಡ್ಡಿ ವ್ಯವಹಾರದಿಂದಾಗಿ ಹುಬ್ಬಳ್ಳಿ ಇದೀಗ ಬಡ್ಡಿ ನಗರಿ ಎಂಬ ಹೆಸರು ಪಡೆಯುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.