ರಾಯಚೂರು : ವಾಯುಭಾರ ಕುಸಿತದಿಂದ ಹಿಂಗಾರು ಮಳೆಯಬ್ಬರ ಈರುಳ್ಳಿ ಬೆಳೆ ಸಂಪೂರ್ಣ ಹಾನಿ

KannadaprabhaNewsNetwork |  
Published : Oct 21, 2024, 01:30 AM ISTUpdated : Oct 21, 2024, 10:07 AM IST
20ಕೆಪಿಆರ್‌ಸಿಆರ್‌ 01: | Kannada Prabha

ಸಾರಾಂಶ

ರಾಯಚೂರು ತಾಲೂಕಿನ ಕಡಗಮದೊಡ್ಡಿ ಗ್ರಾಮದಲ್ಲಿ ಸತತ ಮಳೆಯಿಂದಾಗಿ ರೈತ ಮಹಿಳೆ ಅಂಜನಮ್ಮ ಹಾಗೂ ರೈತ ಮುಖಂಡ ಲಕ್ಷ್ಮಣ ಗೌಡ ಕಡಗಮದೊಡ್ಡಿ ಅವರ ಜಮೀನಿನಲ್ಲಿ ಬೆಳೆದ ಈರುಳ್ಳಿ ಬೆಳೆನಾಶಗೊಂಡಿದೆ.

 ರಾಯಚೂರು : ವಾಯುಭಾರ ಕುಸಿತದಿಂದಾಗಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸತತವಾಗಿ ಸುರಿದ ಹಿಂಗಾರು ಮಳೆ ರವಿವಾರ ವಿರಾಮ ನೀಡಿದೆ.ಮಳೆಯಿಂದಾಗಿ ರಾಯಚೂರು, ಸಿರವಾರ, ಸಿಂಧನೂರು, ಮಾನ್ವಿ, ಲಿಂಗಸುಗೂರು, ದೇವದುರ್ಗ ಮತ್ತು ಮಸ್ಕಿ ತಾಲೂಕುಗಳಲ್ಲಿ ರೈತರ ಬೆಳೆದ ವಿವಿಧ ಬೆಳೆಗಳು ಹಾನಿಗೀಡಾಗಿವೆ. 

ಜಮೀನಿನಲ್ಲಿ ಮಳೆ ನೀರು ನಿಂತ ಪರಿಣಾಮ ಹತ್ತಿ, ತೊಗರಿ, ಈರುಳ್ಳಿ ಸೇರಿ ತೋಟಗಾರಿಕೆ ಹಾಗೂ ಕಾಯಿಪಲ್ಲೆ ಬೆಳೆಗಳ ಇಳುವರಿ ಕುಂಟಿತಗೊಂಡಿದ್ದು, ಇದರಿಂದಾಗಿ ರೈತರು ಆತಂಕಕ್ಕೊಳಲಾಗಿದ್ದಾರೆ.ಸತತ ಮಳೆಯಿಂದಾಗಿ ರಾಯಚೂರು ತಾಲೂಕಿನ ಚಂದ್ರಬಂಡಾ ಹೋಬಳಿ ವ್ಯಾಪ್ತಿಯ ಕಡಗಂದೊಡ್ಡಿ ಗ್ರಾಮದಲ್ಲಿ ರೈತ ಮಹಿಳೆ ಅಂಜನಮ್ಮ ಹಾಗೂ ರೈತ ಮುಖಂಡ ಲಕ್ಷ್ಮಣಗೌಡ ಕಡಗಮದೊಡ್ಡಿ ಅವರ ಜಮೀನಿನಲ್ಲಿ ಬಳೆದ ಈರುಳ್ಳಿ ಬೆಳೆ ನಾಶಗೊಂಡು ಲಕ್ಷಾಂತರ ರು.ನಷ್ಟ ಉಂಟಾಗಿದ್ದು, ಕೂಡಲೇ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆನಷ್ಟದ ಸರ್ವೇ ನಡೆಸಿ ಅಗತ್ಯ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ವಾಯುಭಾರ ಕುಸಿತ ಹಾಗೂ ಹಿಂಗಾರು ಚುರುಕುಗೊಂಡ ಪರಿಣಾಮ ಎಲ್ಲೆಡೆ ಮಳೆಯಾಗುತ್ತಿರುವುದರಿಂದ ಬಸವಸಾಗರ ಜಲಾಶಯವು 32.14 ಟಿಎಂಸಿ ನೀರು ಸಂಗ್ರಹ ಗೊಂಡು ಶೇ.97 ರಷ್ಟು ಭರ್ತಿಯಾಗಿದ್ದು, 90 ಸಾವಿರ ಕ್ಯುಸೆಕ್‌ ಒಳಹರಿವು ಇರುವ ಕಾರಣಕ್ಕೆ 19 ಕ್ರಸ್ಟ್‌ ಗೇಟ್‌ಗಳಿಂದ 84 ಸಾವಿರ ಕ್ಯುಸೆಕ್‌ ನೀರನ್ನು ಕೃಷ್ಣಾ ನದಿಗೆ ಬಿಡಲಾಗಿದೆ ಇನ್ನು 105 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಡ್ಯಾಂ 101 ಟಿಎಂಸಿಯಷ್ಟು ಭರ್ತಿಗೊಂಡಿದೆ. ಜಲಾಶಯಕ್ಕೆ 52 ಸಾವಿರ ಕ್ಯುಸೆಕ್‌ ಒಳಹರಿವಿದ್ದು 51 ಸಾವಿರ ಕ್ಯುಸೆಕ್‌ ನೀರನ್ನು ತುಂಗಭದ್ರಾ ನದಿಗೆ ಹರಿದುಬಿಡಲಾಗುತ್ತಿದೆ.

ಎಲ್ಲೆಲ್ಲಿ ಎಷ್ಟು ಮಳೆ ?

ಕಳೆದ ವಾರ ಜಿಲ್ಲೆಯಾದ್ಯಂತ ಸುಮಾರು 26 ಮಿ.ಮೀ. ಮಳೆಯಾಗಿದೆ. ಇದರಲ್ಲಿ ದೇವದುರ್ಗ ತಾಲೂಕಿನಲ್ಲಿ 23 ಮಿ.ಮೀ., ಲಿಂಗಸುಗೂರಿನಲ್ಲಿ 24 ಮಿ.ಮೀ., ಮಾನ್ವಿಯಲ್ಲಿ 16 ಮಿಮೀ, ರಾಯಚೂರಿನಲ್ಲಿ 29 ಮಿ,ಮೀ,, ಸಿಂಧನೂರಿನಲ್ಲಿ 38 ಮಿಮೀ, ಮಸ್ಕಿಯಲ್ಲಿ 29 ಮಿ.ಮೀ. ಮತ್ತು ಸಿರವಾರ ತಾಲೂಕಿನಲ್ಲಿ 27 ಮಿ.ಮೀ. ಪ್ರಮಾಣದಲ್ಲಿ ಮಳೆಯಾಗಿದೆ.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ