ಕನ್ನಡಪ್ರಭ ವಾರ್ತೆ ಮುನಿರಾಬಾದ
ಒಂದು ದಶಕದಲ್ಲಿ ಭಾರತೀಯ ರೈಲ್ವೆ ಇಲಾಖೆಯಲ್ಲಿ ಬಾರಿ ಅಭಿವೃದ್ಧಿಯಾಗಿದೆ ಎಂದು ತಹಸೀಲ್ದಾರ ವಿಠ್ಠಲ್ ಚೌಗಲೆ ನುಡಿದರು. ಮಂಗಳವಾರ ಮುನಿರಾಬಾದ ರೈಲ್ವೆ ನಿಲ್ದಾಣದಲ್ಲಿ ಒಂದು ಸ್ಟೇಶನ್ ಒಂದು ಉತ್ಪನ್ನ ಮಳಿಗೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ರೈಲ್ವೆ ಹಳಿಗಳನ್ನು ದ್ವಿಪಥಗೊಳಿಸಲಾಗಿದೆ. ಅನೇಕ ಮಾರ್ಗಗಳನ್ನು ವಿದ್ಯುದ್ದೀಕರಣಗೊಳಿಸಲಾಗಿದೆ. ರೈಲ್ವೆ ನಿಲ್ದಾಣಗಳನ್ನು ನವೀಕರಣಗೊಳಿಸಲಾಗಿದೆ. ಇದರಿಂದ ಜನರಿಗೆ ತುಂಬಾ ಅನುಕೂಲವಾಗಿದೆ. ಅವರ ಪ್ರಯಾಣದ ಸಮಯದಲ್ಲಿ ಬಾರಿ ಉಳಿತಾಯವಾಗಿದೆ. ರೈಲ್ವೆ ನಿಲ್ದಾಣಗಳನ್ನು ಕೇಂದ್ರ ಸರ್ಕಾರವು ಏರ್‌ಪೋರ್ಟ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿದೆ. ವಂದೇ ಭಾರತ ರೈಲುಗಳು ರೈಲ್ವೆ ಇತಿಹಾಸದಲ್ಲಿ ಒಂದು ಕ್ರಾಂತಿಯನ್ನೆ ಮಾಡಿದೆ ಎಂದರು.
ತಾಪಂ ಮಾಜಿ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ ಮಾತನಾಡಿ, ಕೇಂದ್ರ ಸರ್ಕಾರವು ಮುನಿರಾಬಾದ ರೈಲ್ವೆ ನಿಲ್ದಾಣದ ಆಧುನೀಕರಣಕ್ಕಾಗಿ ₹20 ಕೋಟಿ ರೂಪಾಯಿ ಮಂಜೂರು ಮಾಡಿದೆ ಹಾಗೂ ಹುಲಿಗೆಮ್ಮ ಭಕ್ತರ ಅನುಕೂಲಕ್ಕಾಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ಅನುಕೂಲಕ್ಕಾಗಿ ₹30 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಮೇಲ್ ಸೇತುವೆ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಿಸಿದೆ ಎಂದರು.ಮಳಿಗೆಗೆ ಚಾಲನೆ ನೀಡಿದ ಬಿಜೆಪಿ ಮಹಿಳಾ ಮುಖಂಡೆ ಮಂಜುಳಾ ಕರಡಿ ಮಾತನಾಡಿ, ಮುನಿರಾಬಾದ ರೈಲ್ವೆ ನಿಲ್ದಾಣದಲ್ಲಿ ಒಂದು ನಿಲ್ದಾಣ ಒಂದು ಉತ್ಪನ್ನ ಅಡಿಯಲ್ಲಿ ಉತ್ತರ ಕರ್ನಾಟಕದ ಪ್ರಸಿದ್ಧಿ ಪಡೆದ ಜೋಳದ ರೊಟ್ಟಿ ಹಾಗೂ ಗುರೆಳ್ಳ ಪುಡಿ ಹಾಗೂ ಈ ಭಾಗದ ರೈತರು ಬೆಳೆದ ಪ್ರತಿಷ್ಠಿತ ಸುಗಂದಿ ಬಾಳೆ ಹಣ್ಣು ಕೂಡಾ ಲಭ್ಯವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಹುಲಿಗಿ ಗ್ರಾಪಂ ಅಧ್ಯಕ್ಷೆ ನೀಲಮ್ಮ ಸಿದ್ದಪ್ಪ ಗುಂಗಾಡಿ, ಹುಲಿಗೆಮ್ಮ ದೇವಸ್ಥಾನದ ಸಮಿತಿಯ ಅಧ್ಯಕ್ಷ ವೀರೇಶ, ಜಿಪಂ ಮಾಜಿ ಅಧ್ಯಕ್ಷ ಜನಾರ್ದನ ಹುಲಿಗಿ, ರೆಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು, ಗ್ರಾಮಸ್ಥರಾದ ಬಸವರಾಜ ಮೇಟಿ, ಖಾಜಾಹುಸೇನ್ ಹೊಸಳ್ಳಿ, ಆನಂದ ರಾಜ ಕುಟ್ಟಿ, ಲಿಂಗರಾಜ, ಕೊಟ್ರಯ್ಯಸ್ವಾಮಿ, ಬಸನಗೌಡ ಪಾಟೀಲ, ಪರಶುರಾಮ, ಬಸವರಾಜ ಕರ್ಕಿಹಳ್ಳಿ, ವಸಂತ ನಾಯಕ ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.