ಬರ ಪರಿಹಾರಕ್ಕಾಗಿ ರೈತರ ಬೃಹತ್‌ ಪ್ರತಿಭಟನೆ

KannadaprabhaNewsNetwork | Published : Feb 18, 2024 1:30 AM

ಸಾರಾಂಶ

ಬರ ಪರಿಹಾರ ನೀಡುವಂತೆ ಬೆಂಗಳೂರಿನಲ್ಲಿ ರೈತರು ಬೃಹತ್‌ ಪ್ರತಿಭಟನೆ ನಡೆಸಿದರು. ಸಮಸ್ಯೆ ಆಲಿಸಿದ ಸಚಿವ ಚಲುವರಾಯಸ್ವಾಮಿ ಅವರಿಗೂ ಘೇರಾವ್‌ ಹಾಕಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬರಗಾಲ ಹಿನ್ನೆಲೆಯಲ್ಲಿ ರೈತರ ಸಾಲ ಮನ್ನಾ ಮಾಡಬೇಕು. ತಕ್ಷಣ ಬರ ಪರಿಹಾರವನ್ನು ಘೋಷಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳ ಸಾವಿರಾರು ರೈತರು ಶನಿವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಆಲಿಸಿದ ಕೃಷಿ ಸಚಿವ ಚಲುವರಾಯಸ್ವಾಮಿ ಅವರ ಉತ್ತರಕ್ಕೆ ತೃಪ್ತರಾಗದ ಧರಣಿ ನಿರತರು ಸಚಿವರು ತೆರಳುವ ವೇಳೆ ಕಾರಿಗೆ ಘೇರಾವ್‌ ಹಾಕಲು ಮುಂದಾದರು. ಈ ವೇಳೆ ಪೊಲೀಸರು ಬ್ಯಾರಿಕೇಡ್‌ ಮೂಲಕ ಅವರನ್ನು ತಡೆದರು. ಇದರಿಂದ ತೀವ್ರ ಆಕ್ರೋಶಗೊಂಡು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಾಗ ಮುನ್ನೂರಕ್ಕೂ ಹೆಚ್ಚಿನ ರೈತರನ್ನು ಪೊಲೀಸರು ವಶಕ್ಕೆ ಪಡೆದರು. ಬಸ್‌ಗಳಲ್ಲಿ ಮೈಸೂರು ರಸ್ತೆ ನಗರ ಸಶಸ್ತ್ರ ಮೀಸಲು ಪಡೆ ಮೈದಾನಕ್ಕೆ ಕರೆದೊಯ್ದರು. ಈ ಹಂತದಲ್ಲಿ ವಾಗ್ವಾದ, ತಳ್ಳಾಟ ನೂಕಾಟ ಉಂಟಾಯಿತು. ಸಂಜೆ ರೈತರನ್ನು ಬಿಡುಗಡೆ ಮಾಡಲಾಯಿತು.

ರೈತ ಮುಖಂಡ ಬೀರಪ್ಪ ದೇಶನೂರು ಮಾತನಾಡಿ, ಬರಗಾಲ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕು, ಸಹಕಾರ ಸಂಘ ಸೇರಿ ಖಾಸಗಿ ಸಂಘಗಳಲ್ಲಿನ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ತಕ್ಷಣವೇ ಪ್ರತಿ ಎಕರೆಗೆ ₹ 25ಸಾವಿರ ಪರಿಹಾರ ಘೋಷಿಸಬೇಕು. ದನಕರುಗಳಿಗೆ ಮೇವು ಬ್ಯಾಂಕ್‌ ತೆರೆಯಬೇಕು. ಭತ್ತ, ರಾಗಿ, ಮೆಕ್ಕೆಜೋಳಕ್ಕೆ ಕ್ವಿಂಟಲ್‌ಗೆ ₹500 ಪ್ರೋತ್ಸಾಹಧನ ನೀಡಬೇಕು. ಹಗಲು 10 ಗಂಟೆ ತ್ರಿಫೇಸ್, ರಾತ್ರಿ ಸಿಂಗಲ್‌ ಫೇಸ್‌ ವಿದ್ಯುತ್‌ ಒದಗಿಸಬೇಕು ಎಂದು ಆಗ್ರಹಿಸಿದರು.

ಸಚಿವರ ಎದುರು ಕಣ್ಣೀರು ಹಾಕಿದ ಮಹದೇವಮ್ಮ ಹುಯಿಲಗೋಳ, ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ಕ್ರಮವಹಿಸಬೇಕು. ಕೇವಲ ಭರವಸೆ ನೀಡಿ ಕೈಕಟ್ಟಬಾರದು ಎಂದರು.

ಮನವಿ ಆಲಿಸಿದ ಸಚಿವ ಚಲುವರಾಯಸ್ವಾಮಿ, ಐದು ತಿಂಗಳಿಂದ ಬರಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ₹25 ಸಾವಿರ ಕೋಟಿ ನೀರಾವರಿ ಯೋಜನೆಯನ್ನು ಉತ್ತರ ಕರ್ನಾಟಕಕ್ಕೆ ಕೊಟ್ಟಿದ್ದೇವೆ. ಕುಡಿಯುವ ನೀರು, ಮೇವಿಗೆ ತೊಂದರೆ ಮಾಡಲ್ಲ. ಬ್ಯಾಂಕ್‌ನಿಂದ ಶೋಷಣೆ ಆಗದಂತೆ ಕ್ರಮ ವಹಿಸಲಾಗುವುದು. ಮುಖ್ಯಮಂತ್ರಿಗಳ ಸಮಯ ಪಡೆದು ರೈತರ ನಿಯೋಗವನ್ನು ಭೇಟಿ ಮಾಡಿಸುತ್ತೇನೆ. ಪ್ರತಿಭಟನೆ ನಿಲ್ಲಿಸುವಂತೆ ಕೋರಿದರು.

ಈ ಉತ್ತರದಿಂದ ಸಮಾಧಾನವಾಗದ ರೈತರು ಹಿಂದೆಯೂ ಇದೇ ರೀತಿ ಭರವಸೆ ನೀಡಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿಲ್ಲ ಎಂದರು. ಸಚಿವರು ಹೊರಟಾಗ ಅವರ ಕಾರಿಗೆ ಮುತ್ತಿಗೆ ಹಾಕಲು ಮುಂದಾದರು. ಪೊಲೀಸರು ಬ್ಯಾರಿಕೇಡ್‌ ಮೂಲಕ ತಡೆದಾಗ ವಾಗ್ವಾದ ನಡೆಯಿತು. ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ರೈತರನ್ನು ವಶಕ್ಕೆ ಪಡೆದರು.

ಸಂಘಟನೆಯ ಗೌರವಾಧ್ಯಕ್ಷ ಸಿದ್ಧನಗೌಡ ಪಾಟೀಲ್‌, ಮುಖಂಡ ಇ.ಎನ್‌.ಕೃಷ್ಣೇಗೌಡ, ಚಂದ್ರಶೇಖರ್‌ ಭೋವಿ, ಈರಣ್ಣ ಅಂಗಡಿ ಸೇರಿದಂತೆ ಧಾರವಾಡ, ವಿಜಯಪುರ, ಹಾವೇರಿ, ಗದಗ, ಬಾಗಲಕೋಟೆ ಸೇರಿ ಇತರೆ ಜಿಲ್ಲೆಗಳ ರೈತರು ಪಾಲ್ಗೊಂಡಿದ್ದರು.

Share this article