ಕೊಪ್ಪಳ ಬಸ್ ಡಿಪೋದಲ್ಲಿ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕೊಪ್ಪಳ
ಕೊಪ್ಪಳ ತಾಲೂಕು ಸ್ವೀಪ್ ಸಮಿತಿ ವತಿಯಿಂದ ನಗರದ ಬಸ್ ಡಿಪೋದಲ್ಲಿ ಕಲ್ಯಾಣ ಕರ್ನಾಟಕ ಬಸ್ ಸಾರಿಗೆ ಸಂಸ್ಥೆಯ ನೌಕರರು ಹಾಗೂ ಸಿಬ್ಬಂದಿ ಮಾನವ ಸರಪಳಿ ನಿರ್ಮಿಸುವ ಮೂಲಕ ಮತದಾನ ಜಾಗೃತಿ ಮೂಡಿಸಿದರು.ತಾಲೂಕು ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಹನುಮಂತಪ್ಪ ಮಾತನಾಡಿ, ಮೇ 7ರಂದು ಜರುಗುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶವನ್ನಾಗಿ ನಿರ್ಮಿಸಲು ನಾವೆಲ್ಲರೂ ಕೈ ಜೋಡಿಸೋಣ. ಪ್ರತಿ ಮತ ದೇಶಕ್ಕೆ ಹಿತ ಎನ್ನುವಂತೆ ಕುಟುಂಬದಲ್ಲಿರುವ 18 ವರ್ಷ ಮೇಲ್ಪಟ್ಟ ಎಲ್ಲರೂ ಸ್ವತಂತ್ರವಾಗಿ ಮತ ಚಲಾಯಿಸಬೇಕು. ಯಾವುದೇ ಆಸೆ-ಆಮಿಷಗಳಿಗೆ ಒಳಗಾಗದೇ ನಿರ್ಭೀತರಾಗಿ ಮತ ಚಲಾಯಿಸಬೇಕು. ಬೇಸಿಗೆ ಇರುವುದರಿಂದ ಮುಂಜಾನೆಯ ಅವಧಿಯಲ್ಲಿ ಚುನಾವಣೆ ಆಯೋಗವು ನಿರ್ದೇಶನ ನೀಡಿರುವ ಅಗತ್ಯ ದಾಖಲಾತಿಯನ್ನು ಮತಗಟ್ಟೆಗೆ ತೆಗೆದುಕೊಂಡು ಹೋಗಿ ನಿಮ್ಮ ಹಕ್ಕನ್ನು ಚಲಾಯಿಸಿರಿ. ಅವಿದ್ಯಾವಂತರಿಗಿಂತ ವಿದ್ಯಾವಂತ ವರ್ಗವೇ ಮತದಾನದಿಂದ ದೂರ ಉಳಿಯುತ್ತಾರೆ ಎಂಬ ಅಪವಾದ ಇದೆ. ಇದನ್ನು ಅಳಿಸಲು ಪ್ರಾಮಾಣಿಕವಾಗಿ ಮತ ಚಲಾಯಿಸೋಣ ಎಂದರು.
ನಂತರ ಕಡ್ಡಾಯ ಮತದಾನ ಮಾಡಲು ಎಲ್ಲ ನೌಕರರು, ಕಾರ್ಮಿಕರಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.ಸ್ವೀಪ್ ಕಾರ್ಯಕ್ರಮದಲ್ಲಿ ಡಿಪೋ ಮ್ಯಾನೇಜರ್ ಬಸವರಾಜ ಬಟ್ಟೂರ, ತಾಪಂ ಸಹಾಯಕ ನಿರ್ದೇಶಕ ಮಹೇಶ್, ತಾಲೂಕು ಯೋಜನಾಧಿಕಾರಿ ರಾಜೇಸಾಬ್ ನದಾಫ್, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ್ ಚಿತ್ರಗಾರ, ತಾಲೂಕು ಸಂಯೋಜಕ ದೇವರಾಜ ಪತ್ತಾರ, ತಾಲೂಕು ಸ್ವೀಪ್ ಸಮಿತಿ ಸದಸ್ಯರಾದ ಬಸವರಾಜ ಬಳಿಗಾರ, ವಿರೇಶ್ ಬಡಿಗೇರ, ತಾಪಂ ಸಿಬ್ಬಂದಿ ಗಿರೀಶ್, ನಾಗರಾಜ ಚಿಲವಾಡಗಿ, ಬಸ್ ಸಾರಿಗೆ ಸಿಬ್ಬಂದಿ ಚಾಲಕರು, ನಿರ್ವಾಹಕರು, ತಾಂತ್ರಿಕ ವಿಭಾಗದ ಸಿಬ್ಬಂದಿ ಸೇರಿದಂತೆ 65ಕ್ಕೂ ಹೆಚ್ಚು ನೌಕರರು ಭಾಗವಹಿಸಿದ್ದರು.