ಪ್ರಜಾಪ್ರಭುತ್ವ ದಿನಕ್ಕೆ 109 ಕಿಮೀ ಮಾನವ ಸರಪಳಿ

KannadaprabhaNewsNetwork |  
Published : Sep 15, 2024, 01:45 AM IST
14ಕೆಪಿಆರ್‌ಸಿಆರ್‌ 02: | Kannada Prabha

ಸಾರಾಂಶ

ರಾಯಚೂರು ಜಿಲ್ಲೆಯಲ್ಲಿ ಹಾದು ಹೋಗುತ್ತಿರುವ ಮಾನವ ಸರಪಳಿ ರಚನೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಬಿಸ್ಕೇಟ್‌ ವಿತರಿಸಲು ರೋಟರಿ ಸಂಸ್ಥೆಯವರು ಬಿಸ್ಕೇಟ್ ಬಾಕ್ಸ್ ಗಳನ್ನು ಜಿಲ್ಲಾಡಳಿತಕ್ಕೆ ನೀಡಿದರು.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ನಿಮಿತ್ತ ರಾಜ್ಯ ಸರ್ಕಾರವು, ಸೆ.15 ರವಿವಾರ ದಂದು ಹಮ್ಮಿಕೊಂಡಿರುವ ಐತಿಹಾಸಿಕ ದಾಖಲೆಯ ಜಗತ್ತಿನ ಅತೀ ಉದ್ದದ ಮಾನವ ಸರಪಳಿ ರಚನೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರಜಾಪ್ರಭುತ್ವದ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಸಾರುವ ಉದ್ದೇಶದಡಿಯಲ್ಲಿ ರೂಪುಗೊಂಡಿರುವ ಐತಿಹಾಸಿಕ ಕಾರ್ಯಕ್ರಮವು ರಾಯಚೂರು ಜಿಲ್ಲೆಯಲ್ಲಿ 109 ಕಿಮೀ ಹಾದು ಹೋಗಲಿದೆ.

ಮಾನವ ಸರಪಳಿಯ ದಾರಿ: ಜಿಲ್ಲೆಯಲ್ಲಿ ನಡೆಯುವ ಈ ಮಾನವ ಸರಪಳಿ ಕಾರ್ಯಕ್ರಮವು ಯಾದಗಿರಿ ಜಿಲ್ಲೆಯಿಂದ ಮುಂದುವರೆಯಲಿದ್ದು, ಜಿಲ್ಲೆಯ ದೇವದುರ್ಗ ತಾಲೂಕಿನ ಗೂಗಲ್‌ ನಿಂದ ಕೊಪ್ಪರ, ಗುಂಡುಗುರ್ತಿ, ದೇವದುರ್ಗ, ಕರಿಗುಡ್ಡ, ಅಮರಾಪೂರ ಕ್ರಾಸ್, ಜಾಲಹಳ್ಳಿ, ಚಿಂಚೋಡಿ, ಬುಂಕಲದೊಡ್ಡಿ, ತಿಂಥಣಿ ಬ್ರಿಡ್ಜ್ ನಿಂದ ಲಿಂಗಸೂಗೂರು ತಾಲೂಕಿನ ಗುರುಗುಂಟಾ, ಲಿಂಗಸೂಗೂರು, ಈಚನಾಳ ತಾಂಡಾ, ಈಚನನಾಳ, ಸುಂಕನಾಳ ಮೂಲಕ ರೋಡಲಬಂಡಾದವರೆಗೂ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 16 ಗ್ರಾಮಗಳ ಮೂಲಕ 109 ಕಿಮೀ ಉದ್ದದ ಮಾನವ ಸರಪಳಿ ರಚಿಸಲಾಗುತ್ತಿದೆ.

80 ಸಾವಿರಕ್ಕೂ ಹೆಚ್ಚು ಜನ ಭಾಗಿ: ಮಾನವ ಸರಪಳಿಯ ಪ್ರತೀ ಕಿಮೀ ಗೆ 700 ರಿಂದ 800 ಜನ ಭಾಗವಹಿಸಲಿದ್ದು, ಜಿಲ್ಲೆಯಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಾನವ ಸರಪಳಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಎಲ್ಲರೂ ಈ ವಿನೂತನ ದಾಖಲೆ ನಿರ್ಮಾಣದ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ.

ಐತಿಹಾಸಿಕ ಕಾರ್ಯಕ್ರಮದ ಯಶಸ್ಸಿಗಾಗಿ ಜಿಲ್ಲಾಡಳಿತದಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮುಖ್ಯ ರಸ್ತೆಯಲ್ಲಿ ಮಾನವ ಸರಪಳಿ ರಚಿಸುತ್ತಿರುವುದರಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ. ಸರ್ಕಾರಿ-ಖಾಸಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ, ಸ್ವಯಂ ಸೇವಾ ಸಂಸ್ಥೆ, ಸಂಘಟನೆಗಳ ಸದಸ್ಯರು, ಪದಾಧಿಕಾರಿಗಳು, ಮುಖಂಡರನ್ನು ಸೇರಿಸಲು ಸೂಚಿಸಲಾಗಿದೆ. ಅಲ್ಲದೇ ಮಕ್ಕಳಿಗೆ ಬಿಸ್ಕೆಟ್‌, ನೀರು ಹಾಗೂ ವಾಹನದ ವ್ಯವಸ್ಥೆ ಸೇರಿದಂತೆ ಇತರೆ ಎಲ್ಲ ರೀತಿಯ ಸಿದ್ಧತೆಗಳನ್ನು ಪೂರೈಸಲಾಗಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ