ಜನರ ಬಳಿಗೇ ಮಾನವಹಕ್ಕು ಆಯೋಗ

KannadaprabhaNewsNetwork | Published : Oct 5, 2024 1:40 AM

ಸಾರಾಂಶ

ಅನ್ಯಾಯಕ್ಕೆ ಒಳಗಾದವರು ಅರ್ಜಿಗಳನ್ನು ಬೆಂಗಳೂರಿಗೆ ಬಂದು ನೀಡಿ ಇತ್ಯರ್ಥಪಡಿಸಿಕೊಳ್ಳಲು ಕಷ್ಟವಾಗುತ್ತಿದೆ. ಇದನ್ನು ಅರಿತ ಆಯೋಗವು ಕಳೆದ ಎಂಟು ತಿಂಗಳಿನಿಂದ ಜಿಲ್ಲೆಗಳಿಗೆ ಭೇಟಿ ನೀಡಿ ಸಂಬಂಧ ಪಟ್ಟ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಅರ್ಜಿಗಳನ್ನು ಜಿಲ್ಲಾ ಕೇಂದ್ರಗಳಲ್ಲೇ ಬಗೆಹರಿಸುವ ಪ್ರಯತ್ನವನ್ನು ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ ಕಳೆದ ವರ್ಷದ ನವೆಂಬರ್ ಮಾಹೆಯಲ್ಲಿ 8054 ಪ್ರಕರಣಗಳು ಬಾಕಿ ಇದ್ದವು , ಅವುಗಳ ಪೈಕಿ 5,456 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ, ಪ್ರಸ್ತುತ 2,598 ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಟಿ. ಶ್ಯಾಮ್ ಭಟ್ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಹೆಚ್ಚಾಗಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ. ನಂತರದ ಸ್ಥಾನದಲ್ಲಿ ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಿಸಿದ ಪ್ರಕರಣಗಳು ಇವೆ ಎಂದರು.

ಜನರ ಬಳಿಗೇ ಆಯೋಗ

ಅನ್ಯಾಯಕ್ಕೆ ಒಳಗಾದವರು ಅರ್ಜಿಗಳನ್ನು ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಬಂದು ದೂರು ನೀಡಿ ಇತ್ಯರ್ಥಪಡಿಸಿಕೊಳ್ಳಲು ಕಷ್ಟ ಸಾಧ್ಯವಾಗುತ್ತಿದ್ದನ್ನು ಅರಿತ ಆಯೋಗವು ಕಳೆದ ಎಂಟು ತಿಂಗಳಿನಿಂದ 14 ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲೆಗೆ ಸಂಬಂಧ ಪಟ್ಟ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳ ಅರ್ಜಿಗಳನ್ನು ಜಿಲ್ಲಾ ಕೇಂದ್ರಗಳಲ್ಲೇ ಬಗೆಹರಿಸುವ ಪ್ರಯತ್ನವನ್ನು ಮಾಡುತ್ತಿದೆ. ಅಲ್ಲದೆ ಹೊಸ ದೂರು ಮತ್ತು ಅಹವಾಲು ಅರ್ಜಿಗಳನ್ನು ಸಹ ಸ್ವೀಕರಿಸಿ ವಿಲೆಗೆ ಅಗತ್ಯ ಕ್ರಮ ವಹಿಸುತ್ತಿದ್ದೆವೆ ಎಂದರು.

ಸಾಮಾಜಿಕ ಬಹಿಷ್ಕಾರ, ಭ್ರೂಣ ಹತ್ಯೆ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಪಟ್ಟಂತೆ ಮಾಧ್ಯಮಗಳಲ್ಲಿ ವರದಿಯಾದ ಆಧಾರದ ಮೇಲೆ ಆಯೋಗವು ಪ್ರಕರಣಗಳನ್ನು ಸ್ವಯಂ ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಮಾನವ ಹಕ್ಕುಗಳ ಉಲ್ಲಂಘನೆಗೆ ಒಳಗಾದವರು ಅಥವಾ ಅವರ ಪರವಾಗಿ ಇನ್ನೊಬ್ಬರು ದೂರನ್ನು ನೇರವಾಗಿ ಆಯೋಗಕ್ಕೆ ಅಥವಾ ಇ-ಮೇಲ್ ಮತ್ತು ಅಂಚೆ ಮೂಲಕ ಸಲ್ಲಿಸಬಹುದು ಇಲ್ಲವೇ ಈ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಿದಲ್ಲಿ ಆಯೋಗವು ಸ್ವಯಂ ದೂರು ದಾಖಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು

ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಆಸ್ಪತ್ರೆ, ಹಾಸ್ಟೆಲ್ ಗಳು, ಜೈಲು, ಪೊಲೀಸ್ ಠಾಣೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳನ್ನು ತಡೆಗಟ್ಟುವುದಕ್ಕೆ ಏನೇನು ಕ್ರಮ ತೆಗೆದುಕೊಳ್ಳಬೇಕು ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮಾನವನ ಹಕ್ಕುಗಳ ಆಯೋಗದ ಅಗತ್ಯ ಕ್ರಮ ವಹಿಸುತ್ತಿದೆ ಎಂದರು.ಪತ್ರಿಕಾಗೋಷ್ಠಿಗೂ ಮುನ್ನ ಆಯೋಗದ ಅಧ್ಯಕ್ಷರು, ಸದಸ್ಯರು ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹ, ವಿದ್ಯಾರ್ಥಿ ನಿಲಯ,

ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು.ಈ ಸಂದರ್ಭದಲ್ಲಿ ಅಪರ ಡೀಸಿ ಡಾ.ಎನ್. ಭಾಸ್ಕರ್, ಹೆಚ್ಚುವರಿ ಎಸ್ಪಿ ಆರ್.ಐ ಖಾಸಿಂ, ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ, ಸಮಾಜ ಕಲ್ಯಾಣ ಇಲಾಖೆಯ ತೇಜಾನಂದ ರೆಡ್ಡಿ, ಡಾ.ರಮೇಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Share this article