ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಹೇಳಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ಮುಕ್ತಿ ಅಲಿಯನ್ಸ್ ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಶುಕ್ರವಾರ ಏರ್ಪಡಿಸಲಾದ ಜೀತ ಪದ್ಧತಿ ನಿಷೇಧ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ನಿಷೇಧಗೊಂಡಿರುವ ಜೀತ ಪದ್ಧತಿ, ಆಧುನಿಕ ಕಾಲಕ್ಕೆ ತಕ್ಕಂತೆ ಈಗ ಬೇರೆಯದೇ ಸ್ವರೂಪದಲ್ಲಿ ನಡೆದಿದ್ದು, ನಿರ್ಮೂಲನೆ ಸವಾಲಿನ ವಿಷಯವಾಗಿದೆ ಎಂದು ಹೇಳಿದರು.
ಜೀತ ಹಿಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿದ್ದಂತಹ ಅತ್ಯಂತ ಕೆಟ್ಟ ಪದ್ಧತಿ. ನಿರ್ಮೂಲನೆಗಾಗಿಯೇ 1976ರ ಫೆಬ್ರವರಿ 09 ರಂದು ಜೀತ ಪದ್ಧತಿ ನಿಷೇಧ ಕಾಯ್ದೆ ಜಾರಿಗೆ ಬಂದಿತು. ಇದರ ಸ್ಮರಣೆಗಾಗಿ ಪ್ರತಿ ವರ್ಷ ಫೆಬ್ರವರಿಯಲ್ಲಿ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿಂದೆ ಇದ್ದಂತಹ ಜೀತ ಪದ್ಧತಿ ಪ್ರಸ್ತುತ ದಿನಗಳಲ್ಲಿ ಇಲ್ಲ, ನಿರ್ಮೂಲನೆ ಆಗಿದೆ ಎಂಬ ಭಾವನೆ ಇದೆ. ಜಿಲ್ಲೆಯಲ್ಲಿಯೂ ಕೂಡ ಇಂತಹ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದರು.ಜಿಲ್ಲೆಯಲ್ಲಿ ಪ್ರಕರಣ ವರದಿಯಾಗಿಲ್ಲ ಎಂದ ಮಾತ್ರಕ್ಕೆ ಇದು ಸಂಪೂರ್ಣ ನಿರ್ಮೂಲನೆ ಆಗಿದೆ ಎಂದು ಹೇಳಲು ಆಗುವುದಿಲ್ಲ. ಕಾಲ ಕಳೆದಂತೆ ಜೀತ ಪದ್ಧತಿಯು ಅನೇಕ ರೂಪಗಳನ್ನು ಪಡೆದು, ಅಸ್ತಿತ್ವದಲ್ಲಿದೆ, ಇದರ ಸ್ವರೂಪವೂ ಬದಲಾಗಿದೆ. ನವೀನ ಮಾದರಿಯ ಜೀತಪದ್ಧತಿ, ಮಾನವ ಕಳ್ಳ ಸಾಗಾಣಿಕೆ, ಬಲವಂತವಾಗಿ ದುಡಿಸಿಕೊಳ್ಳುವಿಕೆ, ಈ ಮೂರು ವಿಧಾನಗಳು ಈಗಲೂ ಕಂಡುಬರುತ್ತವೆ. ಹೀಗಾಗಿ ಇದರ ನಿರ್ಮೂಲನೆಗೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜೀತ ಕಾರ್ಮಿಕ ಪದ್ಧತಿ ನಿಷೇಧ ಅಧಿಕಾರಿಗಳ ನೇಮಿಸಿ ಕಳೆದ ವರ್ಷ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಕಾರಿಗಳು, ಕಾಯ್ದೆ ಹಾಗೂ ಕರ್ತವ್ಯಗಳ ಬಗ್ಗೆ ಅರಿತುಕೊಂಡು, ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿ ನಿರ್ವಹಿಸಬೇಕು ಎಂದರು.
ಈ ಹಿಂದೆ ಮದುವೆ, ಮನೆ ಇತ್ಯಾದಿಗಾಗಿ ಸಾಲ ಪಡೆದು, ಅವರ ಹೊಲ ಮನೆಗಳಲ್ಲಿಯೇ ಸಾಲ ಹಾಗೂ ಬಡ್ಡಿ ತೀರಿಸಲು ಬೇಸಾಯ, ಕುರಿ ಕಾಯುವುದು, ದನಕರುಗಳನ್ನು ಕಾಯುವಂತಹ ಪ್ರಕರಣಗಳು ಹೆಚ್ಚು ಇದ್ದವು. 1976 ರಲ್ಲಿಯೇ ಜೀತ ಪದ್ಧತಿ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ್ದು, ಸಂತ್ರಸ್ಥರನ್ನು ಜೀತದಿಂದ ಮುಕ್ತಿಗೊಳಿಸಿ, ಅವರಿಗೆ ಪುನರ್ವಸತಿ ಹಾಗೂ ಪರಿಹಾರ ಒದಗಿಸುವ ಕಾರ್ಯವನ್ನು ಸರ್ಕಾರದಿಂದೇ ಮಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಜೀತ ಪದ್ಧತಿ ನಿರ್ಮೂಲನೆ ಕುರಿತು ಎಲ್ಲ ಗಣ್ಯರು, ಅಧಿಕಾರಿಗಳು ಇದೇ ವೇಳೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಮುಕ್ತಿ ಅಲನ್ಸ್ ಸಂಚಾಲಕ ಬೃಂದಾ ಅಡಿಗ, ರಾಜೇಂದ್ರನ್ ಇದ್ದರು.