ವಚನ ಸಾಹಿತ್ಯದಲ್ಲಿದೆ ಮಾನವೀಯ ಮೌಲ್ಯ: ರಾಜೂರ

KannadaprabhaNewsNetwork | Published : Jan 12, 2024 1:46 AM

ಸಾರಾಂಶ

ತ್ಯಾಗವೀರ ಶಿರಸಂಗಿ ಲಿಂಗರಾಜರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರ ತತ್ವಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು

ಹುಬ್ಬಳ್ಳಿ: ವಚನ ಸಾಹಿತ್ಯಗಳಲ್ಲಿ ಮಾನವೀಯ ಮೌಲ್ಯಗಳಿದ್ದು, ವಿದ್ಯಾರ್ಥಿಗಳು ವಚನ ಸಾಹಿತ್ಯ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಧಾರವಾಡದ ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ಅಭಿಪ್ರಾಯಪಟ್ಟರು.

ಇಲ್ಲಿಯ ಶ್ರೀ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ. ವಿಜ್ಞಾನ ಸಂಸ್ಥೆಯಲ್ಲಿ ಬುಧವಾರ ಏರ್ಪಡಿಸಿದ್ದ ಅಂತರ ಕಾಲೇಜು ವಚನ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

ತ್ಯಾಗವೀರ ಶಿರಸಂಗಿ ಲಿಂಗರಾಜರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರ ತತ್ವಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಡಾ.ಉಮಾ ನೇರ್ಲೆ ಮಾತನಾಡಿ, ವಿದ್ಯಾರ್ಥಿಗಳು ಶರಣರ, ಮಹಾತ್ಮರ ಜೀವನ ಚರಿತ್ರೆ ಓದಿ, ತಿಳಿದುಕೊಳ್ಳಬೇಕು ಎಂದರು.

ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಪ್ರಧಾನ ಧರ್ಮದರ್ಶಿ ರಾಜೇಂದ್ರ ಹಳ್ಳಿಕೇರಿ, ಹಿರಿಯ ಧರ್ಮದರ್ಶಿ ವೀರಣ್ಣ ಚಕ್ಕಿ ಸೇರಿದಂತೆ ಹಲವರಿದ್ದರು.

ವಿದ್ಯಾರ್ಥಿ ಶ್ರೀಹರಿ ರಾಮದುರ್ಗಕರ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಮತ್ತು ಕಾಲೇಜು ಒಕ್ಕೂಟದ ಅಧ್ಯಕ್ಷೆ ಡಾ. ವಿಜಯಶ್ರೀ ಹಿರೇಮಠ ಸ್ವಾಗತಿಸಿದರು. ಉಪನ್ಯಾಸಕ ಡಾ.ಆರ್.ಐ.ಹರಕುಣಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು.ಉಪನ್ಯಾಸಕ ಸಿದ್ಧಲಿಂಗಯ್ಯ ಗುಡೇನಕಟ್ಟಿ ನಿರೂಪಿಸಿದರು. ಕನ್ನಡ ಉಪನ್ಯಾಸಕಿ ಮಲ್ಲಮ್ಮ ವನ್ನಳ್ಳಿ ವಂದಿಸಿದರು.

ವಿಜೇತರು: ಪದವಿ ಕಾಲೇಜು ವಿಭಾಗದಲ್ಲಿ ಕಾಲೇಜಿನ ಬಿ.ಎ.ಅಂತಿಮ ವರ್ಷದ ವಿದ್ಯಾರ್ಥಿನಿ ಆವಂತಿ ಹೆಗಡೆ ಮತ್ತು ಇದೇ ಕಾಲೇಜಿನ ಪಿಯುಸಿ ವಿಭಾಗದಲ್ಲಿ ಮನಶ್ರೀ ಕಾಟಿಗರ ಪ್ರಥಮ ಬಹುಮಾನ ಪಡೆದುಕೊಂಡರು. ಪದವಿ ವಿಭಾಗದಲ್ಲಿ ಧಾರವಾಡದ ಕರ್ನಾಟಕ ಆರ್ಟ್ಸ್‌ ಕಾಲೇಜಿನ ಪದವಿ ಪೂರ್ವ ದ್ವಿತೀಯ ಸ್ಥಾನ, ಧಾರವಾಡದ ಜೆಎಸ್ಎಸ್‌ ಕಾಲೇಜಿನ ಈಶ್ವರಿ ಪಾಟೀಲ ತೃತೀಯ ಸ್ಥಾನ, ಎಸ್.ಜೆ.ಎಂ.ವಿ. ಮಹಾಂತ ಕಾಲೇಜಿನ ಅಯ್ಯಪ್ಪ ಅಂತಕ್ಕನವರ ಸಮಾಧಾನಕರ ಬಹುಮಾನ ಪಡೆದುಕೊಂಡರು.

ಪಿ.ಯು.ವಿಭಾಗದಲ್ಲಿ ಧಾರವಾಡದ ಗುರುದೇವ ಪಿ.ಯು.ಕಾಲೇಜಿನ ಲಕ್ಷ್ಮೀ ಹಳ್ಳೂರ ದ್ವಿತೀಯ, ಎಚ್.ಎಸ್.ಕೆ.ವಿಜ್ಞಾನ ಸಂಸ್ಥೆಯ ತೇಜಸ್ವಿನಿ ಬಡಿಗೇರ ತೃತೀಯ ಸ್ಥಾನ ಪಡೆದುಕೊಂಡರು. ವಿಜೇತರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ, ಪುಸ್ತಕ ನೀಡಲಾಯಿತು. ತೀರ್ಪುಗಾರರಾಗಿ ಹಿಂದೂಸ್ತಾನಿ ಸಂಗೀತಗಾರ ಮಧುರಾ ದೀಕ್ಷಿತ ಮತ್ತು ರೇಖಾ ಹೆಗಡೆ ಆಗಮಿಸಿದ್ದರು.

Share this article