ಕನ್ನಡಪ್ರಭ ವಾರ್ತೆ ಬೀದರ್
ಮನೆಯಲ್ಲಿ ಮೂವರು ಶಾಸಕರು, ಅದರಲ್ಲೊಬ್ಬರು ಸಚಿವರು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರು, ಪಿಕೆಪಿಎಸ್ ಅಧ್ಯಕ್ಷರು ಹೀಗೆಯೇ ಸಾಲು ಸಾಲು ರಾಜಕೀಯದ ಅಧಿಕಾರಗಳನ್ನು ದಶಕಗಳ ಕಾಲ ಕಂಡು ಬಲಾಢ್ಯವಾಗಿದ್ದರೂ ಕೆಲ ರಾಜಕೀಯ ಏರಿಳಿತಗಳಿಗೆ ಸಿಲುಕಿದ್ದ ಹುಮನಾಬಾದ್ ಗೌಡ್ರ ಕುಟುಂಬಕ್ಕೆ ವಿಧಾನ ಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಡಾ. ಚಂದ್ರಶೇಖರ ಪಾಟೀಲ್ ಅವರ ಗೆಲುವು ಟಾನಿಕ್ ಸಿಕ್ಕಂತಾಗಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ವಿರುದ್ಧ ಸೋಲುಂಡು, ಇತ್ತೀಚೆಗೆ ಬೀದರ್ ಲೋಕಸಭಾ ಕ್ಷೇತ್ರದ ಟಿಕೆಟ್‌ನಿಂದ ವಂಚಿತರಾಗಿಯೋ ತಾವಾಗಿಯೇ ತಿರಸ್ಕರಿಸಿಯೋ ಸಾಕಷ್ಟು ನೋಂದಂತಿರುವ ಮಾಜಿ ಸಚಿವ ರಾಜಶೇಖರ ಪಾಟೀಲ್ ಹಾಗೂ ಅವರ ಇಡೀ ಕುಟುಂಬಕ್ಕೆ ವಿಧಾನ ಪರಿಷತ್ ಚುನಾವಣೆಯಲ್ಲಿನ ಈ ಗೆಲುವು ಮತ್ತೊಮ್ಮೆ ಜೀವ ಕಳೆ ತುಂಬಿದಂತಾಗಿದೆ.
ಡಾ. ಚಂದ್ರಶೇಖರ ಪಾಟೀಲ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ಸಹೋದರ ರಾಜಶೇಖರ ಪಾಟೀಲ್ ಅವರ ಸೋಲಿನ ನಂತರ ತಮ್ಮ ಕ್ಷೇತ್ರದ ವಿವಿಧ ಭಾಗಗಳತ್ತ ಮುಖ ಮಾಡಿದ್ದು ಕಮ್ಮಿಯೇ ಸರಿ. ಹೀಗಾಗಿ ಈ ಬಾರಿ ದೂರದೂರಿನ ಮತದಾರರನ್ನು ತಲುಪುವಲ್ಲಿ ಪಾಟೀಲ್‌ಗೆ ಹಿನ್ನಡೆಯಾಗಿದೆ, ಜಯ ಸುಲಭದಲ್ಲ ಎಂಬ ಮಾತುಗಳು ಗಟ್ಟಿಯಾಗಿದ್ದವು.ಇದೇ ಸಂದರ್ಭದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದ ನಾರಾ ಪ್ರತಾಪರೆಡ್ಡಿ ಅವರು ಕಾಂಗ್ರೆಸ್‌ಗೆ ದುಸ್ವಪ್ನವಾಗಿ ಕಾಡಿದ್ದರು. ಬಿಜೆಪಿಯ ಅಮರನಾಥ ಪಾಟೀಲ್ ಮೊದಲಿನಿಂದಲೂ ಮತದಾರರ ಸಂಪರ್ಕದಲ್ಲಿದ್ದರೂ ಅವರ ಪಕ್ಷದ ಟಿಕೆಟ್ ಆಕಾಂಕ್ಷಿ ಕೆಲ ಮುಖಂಡರುಗಳ ಆಂತರಿಕ ಕಚ್ಚಾಟ, ಭಿನ್ನಮತ ಸೋಲಿನ ದವಡೆಗೆ ನೂಕುವಂತೆ ಮಾಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಕರ್ನಾಟಕದಲ್ಲಿಯೇ ಅತೀ ವಿಶಾಲವಾದ ಈಶಾನ್ಯ ಕ್ಷೇತ್ರದಲ್ಲಿ ಗೆಲುವು ಸುಲಭದಲ್ಲ, ಇಲ್ಲಿ ಕಾಂಗ್ರೆಸ್ ಪಕ್ಷ ಪ್ರಮುಖರ, ಕಾರ್ಯಕರ್ತರ ಹಾಗೂ ಪದವೀಧರ ಮಿತ್ರರ ಜೊತೆಗೆ ಶಿಕ್ಷಕರ ಸಹಕಾರ ಜಯದ ದಡಕ್ಕೆ ಕೊಂಡೊಯ್ದಿದೆ ಎಂದು ವಿಧಾನ ಪರಿಷತ್‌ಗೆ ಮರು ಆಯ್ಕೆಯಾದ ಡಾ. ಚಂದ್ರಶೇಖರ ಪಾಟೀಲ್ ಮಾಧ್ಯಮದವರಿಗೆ ಮಾತನಾಡಿ ತಿಳಿಸಿದ್ದಾರೆ.ಒಟ್ಟಾರೆ ಲೋಕಸಭಾ ಕ್ಷೇತ್ರವನ್ನು ತನ್ನದಾಗಿಸಿಕೊಂಡಿರುವ ಕಾಂಗ್ರೆಸ್ ಇದೀಗ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಸ್ಥಾನ ಭದ್ರಪಡಿಸಿಕೊಂಡಿದ್ದು ಜಿಲ್ಲೆಯ ಕಾಂಗ್ರೆಸ್ ನಾಯಕರ ನಾಯಕತ್ವವು ಮತ್ತೊಮ್ಮೆ ಸಾಬೀತಾಗಿದೆ. ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಿಗೆ ಇಂಥದ್ದೊಂದು ಜಯ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿಸಿದರೆ ಅಚ್ಚರಿಯೇನಿಲ್ಲ.
ಹುಮನಾಬಾದ್‌ನಲ್ಲಿ ಸಂಭ್ರಮೋತ್ಸವ :ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಡಾ. ಚಂದ್ರಶೇಖರ ಪಾಟೀಸ್ ಅವರ 2ನೇ ಬಾರಿಯ ಭರ್ಜರಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಹುಮನಾಬಾದ್ ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರು ಡಾ. ಅಂಬೇಡ್ಕರ್ ಅವರ ಪುತ್ಥಳಿಗೆ ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಪಟ್ಟಣದಲ್ಲಿ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರ ಗೃಹ ಕಚೇರಿಯ ಮುಂಭಾಗದ ಮುಖ್ಯರಸ್ತೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಪಕ್ಷದ ಹಲವಾರು ನಾಯಕರುಗಳಿಗೆ ಜೈಕಾರ ಹಾಕಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಫ್ಸರಮಿಯಾ, ದತ್ತಕುಮಾರ ಚಿದ್ರಿ, ಮಹೇಶ ಅಗಡಿ, ಸೈಯದ್ ಯಾಶೀನ್ ಅಲಿ, ಅಶೋಕಕುಮಾರ ಚಳಕಾಪೂರೆ, ಅಶೋಕ ಸೊಂಡೆ, ಪ್ರಕಾಶ ತಾಳಮಡಗಿ, ಧರ್ಮರಡ್ಡಿ, ಜಗನಾಥ ನವಲೆ ಇದ್ದರು.